ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ; ಹಂಪಿಯಲ್ಲಿ ಶುದ್ಧ ಕುಡಿಯುವ ನೀರಿಗೆ ಬರ!

ಐದರಲ್ಲಿ ಒಂದು ಘಟಕ ಕಾರ್ಯನಿರ್ವಹಣೆ
Last Updated 19 ಆಗಸ್ಟ್ 2021, 10:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರು ಶುದ್ಧ ಕುಡಿಯುವ ನೀರಿಗೆ ಪರದಾಟ ನಡೆಸಬೇಕಾದ ಪರಿಸ್ಥಿತಿ ಇದೆ.

ಹಂಪಿಯ ಪರಿಸರದಲ್ಲೇ ತುಂಗಭದ್ರಾ ನದಿ ಹರಿಯುತ್ತದೆ. ಆದರೆ, ಶುದ್ಧ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಮಾಡದ ಕಾರಣ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು(ಎಎಸ್‌ಐ) ಹಂಪಿ ಪರಿಸರದಲ್ಲಿ ಐದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ. ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ಮಹಾನವಮಿ ದಿಬ್ಬ, ಕಮಲ ಮಹಲ್‌ ಹಾಗೂ ರಾಣಿ ಸ್ನಾನಗೃಹದ ಬಳಿ ಕುಡಿಯುವ ನೀರಿನ ಘಟಕಗಳಿವೆ. ಆದರೆ, ಸದ್ಯ ರಾಣಿ ಸ್ನಾನಗೃಹದ ಬಳಿಯಿರುವ ನೀರಿನ ಘಟಕವಷ್ಟೇ ಕೆಲಸ ನಿರ್ವಹಿಸುತ್ತಿದೆ. ಉಳಿದ ಘಟಕಗಳು ಕೆಟ್ಟು ನಿಂತಿರುವುದರಿಂದ ಪ್ರವಾಸಿಗರು ನೀರಿಗೆ ಬರ ಎದುರಿಸುತ್ತಿದ್ದಾರೆ.

ಹಂಪಿ ಮೊದಲೇ ಹೇಳಿ ಕೇಳಿ ಬಯಲು ವಸ್ತು ಸಂಗ್ರಹಾಲಯ. ವರ್ಷದ ಹೆಚ್ಚಿನ ಸಮಯ ಇಲ್ಲಿ ಬಿಸಿಲು ಇರುತ್ತದೆ. ಬೆಟ್ಟ ಗುಡ್ಡಗಳ ನಡುವೆ ಸ್ಮಾರಕಗಳು ಇವೆ. ಅವುಗಳನ್ನು ಏರಿ ಇಳಿಯುವುದರಿಂದ ಪ್ರವಾಸಿಗರಿಗೆ ಆಯಾಸವಾಗುವುದು ಸಹಜ. ಈ ಕಾರಣಕ್ಕಾಗಿಯೇ ಐದು ಸ್ಥಳಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ನಾಲ್ಕು ಕೆಟ್ಟು ಹೋಗಿರುವುದರಿಂದ ಪ್ರವಾಸಿಗರು ಅನಿವಾರ್ಯವಾಗಿ ಹಣ ಕೊಟ್ಟು ಮಳಿಗೆಗಳಲ್ಲಿ ನೀರು ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಹಂಪಿಯ ಬಹುತೇಕ ಸ್ಮಾರಕಗಳನ್ನು ನೋಡಿದ್ದೇವೆ. ಆದರೆ, ಎಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕನಿಷ್ಠ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನೀರು ಸಿಗಬಹುದು ಅಂದುಕೊಂಡಿದ್ದೇವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದು ಬಂದ್ ಆಗಿ ಹಲವು ತಿಂಗಳೇ ಕಳೆದಿವೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ನೀರಿಗಾಗಿಯೇ ಬಹಳ ದೂರ ಹೋಗಿ ಖರೀದಿಸಿದೆವು’ ಎಂದು ದಾವಣಗೆರೆಯ ಪ್ರವಾಸಿ ಲಕ್ಷ್ಮಣ್‌ ಎಂಬುವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ನಿತ್ಯ ಅಪಾರ ಸಂಖ್ಯೆಯ ಜನ ಹಂಪಿಗೆ ಬಂದು ಹೋಗುತ್ತಾರೆ. ಕನಿಷ್ಠ ಕುಡಿಯುವ ನೀರಿಗೂ ವ್ಯವಸ್ಥೆ ಮಾಡದಿದ್ದರೆ ಹೇಗೆ? ವಿಶ್ವ ಪಾರಂಪರಿಕ ತಾಣಗಳಲ್ಲಿ ಹಂಪಿ ಸ್ಥಾನ ಪಡೆದಿದೆ. ಕನಿಷ್ಠ ನೀರು ಕೂಡ ಇಟ್ಟಿಲ್ಲ ಎಂದು ಪ್ರವಾಸಿಗರು ಆಡಿಕೊಳ್ಳುತ್ತಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಗೈಡ್‌ಗಳು ಬೇಸರಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅನೇಕ ಸಲ ಪುರಾತತ್ವ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೆ, ಸಮಸ್ಯೆ ಬಗೆಹರಿದಿಲ್ಲ. ಹಂಪಿಯಲ್ಲೇ ನದಿ ಹರಿಯುತ್ತದೆ. ಆದರೆ, ಹನಿ ನೀರಿಗೆ ಪರದಾಟ ನಡೆಸುವ ಸ್ಥಿತಿ ಇದೆ. ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ಯಂತ್ರ ನಿತ್ಯ ಕಾರ್ಯನಿರ್ವಹಿಸುತ್ತಿದ್ದರೆ ಕೆಡುವುದಿಲ್ಲ. ಆದರೆ, ಲಾಕ್‌ಡೌನ್‌ನಲ್ಲಿ ಅವುಗಳು ಕೆಲಸ ನಿರ್ವಹಿಸಿಲ್ಲ. ಇದರಿಂದಾಗಿ ಕೆಟ್ಟಿವೆ. ಅವುಗಳ ನಿರ್ವಹಣೆ ಮೊದಲಿನಿಂದಲೂ ಉತ್ತಮ ರೀತಿಯಲ್ಲಿ ಮಾಡುತ್ತಿದ್ದೇವೆ. ಈಗಷ್ಟೇ ಪ್ರವಾಸಿಗರು ಬರುತ್ತಿದ್ದಾರೆ. ಈಗಾಗಲೇ ದುರಸ್ತಿಗೊಳಿಸಲು ಸೂಚಿಸಲಾಗಿದೆ’ ಎಂದು ಪುರಾತತ್ವ ಇಲಾಖೆಯ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT