ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು: ಬಹುಪಾಲು ಭೂಮಿಯಲ್ಲಿಲ್ಲ ಬಿತ್ತನೆ

ಮುಗಿಲಿನತ್ತ ಮುಖ ಮಾಡಿದ ಅನ್ನದಾತರು
Published 1 ಜುಲೈ 2023, 6:28 IST
Last Updated 1 ಜುಲೈ 2023, 6:28 IST
ಅಕ್ಷರ ಗಾತ್ರ

ಗುರುಪ್ರಸಾದ್ ಎಸ್.ಎಂ.

ಕೊಟ್ಟೂರು: ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗದೇ ತಾಲ್ಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಒಣಭೂಮಿಯನ್ನು ಹದ ಮಾಡಿಕೊಂಡಿರುವ ರೈತರು ವರುಣ ದೇವನ ಕೃಪೆಗಾಗಿ ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಒಟ್ಟು 38,523 ಹೆಕ್ಟೇರ್ ನೀರಾವರಿ ಹಾಗೂ ಮಳೆಯಾಶ್ರಿತ ಕೃಷಿ ಯೋಗ್ಯ ಭೂಮಿ ಇದ್ದು, ಮಳೆಯಾಶ್ರಿತ ಭೂಮಿಯಲ್ಲಿ ಬಹುಪಾಲು ಬಿತ್ತನೆಯೇ ಆಗಿಲ್ಲ. ಅಲ್ಪಸ್ವಲ್ಪ ಬಿತ್ತನೆಯಾಗಿರುವ ಪ್ರದೇಶದಲ್ಲಿ ಹುಟ್ಟಿರುವ ಸಸಿಗಳು ಮಳೆ ಇಲ್ಲದೆ ಒಣಗುತ್ತಿವೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಜೋಳ 560 ಹೆಕ್ಟೇರ್, ಮೆಕ್ಕೆಜೋಳ 26,954 ಹೆಕ್ಟೇರ್, ಸೂರ್ಯಕಾಂತಿ 1,496 ಹೆಕ್ಟೇರ್, ಶೇಂಗಾ 870 ಹೆಕ್ಟೇರ್, ರಾಗಿ 3,900 ಹೆಕ್ಟೇರ್, ನವಣೆ 400 ಹೆಕ್ಟೇರ್, ಈರುಳ್ಳಿ 1,882 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು.

‘ಈ ವರ್ಷ ರೋಹಿಣಿ ಮಳೆ ಬಾರದ್ದರಿಂದ ಜೋಳ ಕೇವಲ 150ರಿಂದ 200 ಹೆಕ್ಟೇರ್ ಬಿತ್ತನೆಯಾಗಿದೆ. ಬಹುತೇಕ ರೈತರು ಮೆಕ್ಕೆಜೋಳ ಬಿತ್ತನೆಗೆ ಮುಂದಾಗಿರುವುದರಿಂದ ಅಂದಾಜು 29,500 ಹೆಕ್ಟೇರ್, ಸೂರ್ಯಕಾಂತಿ 1,500 ಹೆಕ್ಟೇರ್, ಶೇಂಗಾ ಬಿತ್ತನೆಗೂ ಸಮಯ ಇರುವುದರಿಂದ 950 ಹೆಕ್ಟೇರ್, ರಾಗಿ 3,500 ಹೆಕ್ಟೇರ್, ನವಣೆ 200 ಹೆಕ್ಟೇರ್ ಹಾಗೂ ಈರುಳ್ಳಿ 1,300 ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಲಾಗಿದೆ’ ಎಂದು ಸಹಾಯಕ ಕೃಷಿ ಅಧಿಕಾರಿ ಶ್ಯಾಮ ಸುಂದರ್ ತಿಳಿಸಿದ್ದಾರೆ.

‘ರೈತ ಸಂಪರ್ಕ ಕೇಂದ್ರ ಹಾಗೂ ರಸಗೊಬ್ಬರ ಅಂಗಡಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬೀಜ, ಗೊಬ್ಬರದ ದಾಸ್ತಾನು ಇದೆ. ಮಳೆ ಬಾರದ ಕಾರಣ ವಹಿವಾಟು ಮಂದಗತಿಯಲ್ಲಿ ಸಾಗಿದೆ’ ಎಂದು ಅವರು ತಿಳಿಸಿದರು.

ಭೂಮಿಯನ್ನು ಹಸನುಗೊಳಿಸಿ, ಮಳೆಗಾಗಿ ಕಾಯುತ್ತಿರುವ ರೈತರು ಬಿತ್ತನೆ ಮಾಡಲಾಗದೆ ಚಡಪಡಿಸುತ್ತಿದ್ದಾರೆ. ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇನ್ನೂ ಕೆಲವು ಕೆರೆಗಳು ಬತ್ತಿ ಹೋಗಿದ್ದು, ಅಂತರ್ಜಲದ ಮಟ್ಟವೂ ಕುಸಿದು ನೀರಿನ ಅಭಾವ ತಲೆದೋರುವ ಆತಂಕ ಎದುರಾಗಲಿದೆ. ಸದಾಕಾಲ ನೀರಿರುತ್ತಿದ್ದ ಬಹುತೇಕ ಕೆರೆಗಳೆಲ್ಲ ಬರಿದಾಗಿವೆ. ಕೃಷಿ ಕಾರ್ಯದಲ್ಲಿ ತೊಡಗಬೇಕಾದ ರೈತರು ಮುಗಿಲು ನೋಡುತ್ತಿದ್ದಾರೆ. ತಾಲೂಕಿನಾದ್ಯಂತ ಬಿಸಿಲು, ಒಣಹವೆ ಮುಂದುವರೆದಿದ್ದು, ಮೋಡಗಳ ಛಾಯೆ ಕಂಡುಬಂದರೂ ಮಳೆಯ ಲಕ್ಷಣ ಮಾತ್ರ ಕಾಣುತ್ತಿಲ್ಲ.

ಕಳೆದ ವರ್ಷ ಸಕಾಲಕ್ಕೆ ಮಳೆ ಸುರಿದು ಉತ್ತಮ ಇಳುವರಿ ಬಂದಿತ್ತು. ಈ ವರ್ಷ ಇದುವರೆಗೂ ಮುಂಗಾರು ಮಳೆ ಬಾರದಿರುವುದು ಚಿಂತೆಯಾಗಿದೆ.
ಗುಡಿಯಾರ ಮರಿಯಣ್ಣ ರೈತ ಸುಟ್ಟಕೋಡಿಹಳ್ಳಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT