ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ತುಂಗಭದ್ರಾ ನದಿಯಲ್ಲಿ ದೇವನಾಗರಿ ಶಿಲಾ ಶಾಸನ ಪತ್ತೆ

Published 20 ಜೂನ್ 2024, 13:20 IST
Last Updated 20 ಜೂನ್ 2024, 13:20 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿಗೆ ಸಮೀಪದ ಹೊಸೂರು ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ  ದೇವನಾಗರಿ ಲಿಪಿಯಲ್ಲಿರುವ ಶಿಲಾಶಾಸನ ಪತ್ತೆಯಾಗಿದೆ. ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು ಅವರು ನದಿ ಮಧ್ಯೆ ಇರುವ ನಡುಗಡ್ಡೆಯಲ್ಲಿ ನದಿಯ ಬಂಡೆಯೊಂದರ ಮೇಲೆ ಈ ಶಾಸನವನ್ನು ಪತ್ತೆ ಮಾಡಿದ್ದಾರೆ. ಈ ನಡುಗಡ್ಡೆಯಲ್ಲಿ ಪುರಾತನ ಆಂಜನೇಯ ಮತ್ತು ಈಶ್ವರ ದೇವಾಲಯಗಳಿದ್ದು, ಪೂಜೆ ಸಲ್ಲಿಸಲಾಗುತ್ತದೆ. ಉಳಿದ ದೇವಾಲಯಗಳು ಪಾಳು ಬಿದ್ದಿವೆ.

‘ನದಿಯ ಪಕ್ಕದ ಬೃಹತ್ ಬಂಡೆಯ ಇಳಿಜಾರಿನ ಮೇಲೆ ಚೌಕಾಕಾರದಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. 2 ಅಡಿ ಅಗಲ 3 ಅಡಿ ಉದ್ದವಿರುವ ಈ ಶಾಸನದಲ್ಲಿ 17 ಸಾಲುಗಳಿವೆ. ಮೇಲಿನ ಎಡಭಾಗದಲ್ಲಿ ಸೂರ್ಯ, ಮಧ್ಯೆ ಶಿವಲಿಂಗ, ಬಲಕ್ಕೆ ಚಂದ್ರನ ಚಿತ್ರವಿದೆ. ಅನೇಕ ಶತಮಾನಗಳಿಂದ ನೀರಿನಲ್ಲಿ ಮುಳುಗಿದ್ದು, ಬಿಸಿಲು, ಮಳೆ, ಚಳಿ, ಗಾಳಿಗೆ ಮೈಯೊಡ್ಡಿರುವ ಕಾರಣ ಈ ಶಾಸನ ಕೆಲ ಅಕ್ಷರಗಳು ಸವೆದಿವೆ’ ಎಂದು ಸಮದ್ ಕೊಟ್ಟೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯನಗರ ಸಾಮ್ರಾಜ್ಯ ಆರಂಭಕ್ಕೂ ಮುನ್ನ ಹಂಪಿ ಪ್ರದೇಶವು ವಿವಿಧ ಸಂಸ್ಕೃತಿಗಳ ನೆಲೆಯಾಗಿತ್ತು. ಕೊಪ್ಪಳದಲ್ಲಿ ಆಶೋಕನ ಶಿಲಾ ಶಾಸನವಿದೆ. ಅದೇ ರೀತಿ ಹಂಪಿಯ ನದಿಯುದ್ದಕ್ಕೂ ಇರುವ ಕಲ್ಲುಬಂಡೆಗಳ ಮೇಲೆ ಅನೇಕ ಶಾಸನಗಳಿವೆ. ಆದರೆ, ಯಾರೂ ಕೂಡ ಅದನ್ನು ಮಹತ್ವದ್ದು ಎಂದು ಪರಿಗಣಿಸದ ಕಾರಣ ಪಾಳು ಬಿದ್ದಿವೆ’ ಎಂದರು.

‘ಹೊಸೂರು ಶಿಲಾ ಶಾಸನವು ಅತ್ಯಂತ ಪುರಾತನ ಶಾಸನವಾಗಿದ್ದು, ಇದರಿಂದ ಇಲ್ಲಿನ ಧಾರ್ಮಿಕ ಸಂಸ್ಕೃತಿ ಹಾಗೂ ಆಳ್ವಿಕೆಯ ಕುರಿತು ಬೆಳಕು ಚೆಲ್ಲುತ್ತದೆ. ಶಾಸನದ ಅರ್ಥ ವಿವರಣೆ ನೀಡಿ ಅದನ್ನು ಸೂಕ್ತವಾಗಿ ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT