ಬುಧವಾರ, ಜೂನ್ 16, 2021
28 °C
ಎರಡು ವಾರವಾದರೂ ಬಹುತೇಕ ಬಡಾವಣೆಗಳಿಗೆ ಭೇಟಿ ನೀಡದ ಆರೋಗ್ಯ ಕಾರ್ಯಕರ್ತರು

ಕೋವಿಡ್‌-19| ಆಮೆ ಗತಿಯಲ್ಲಿ ನಡೆಯುತ್ತಿದೆ ಮನೆ ಮನೆ ಸರ್ವೇ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಆರಂಭಿಸಿರುವ ಮನೆ ಮನೆ ಸರ್ವೇ ಕಾರ್ಯ ನಗರದಲ್ಲಿ ಆಮೆ ಗತಿಯಲ್ಲಿ ಸಾಗಿದೆ.

ಸರ್ವೇ ಕಾರ್ಯ ಆರಂಭಗೊಂಡು ಎರಡು ವಾರ ಕಳೆಯುತ್ತ ಬಂದಿದೆ. ಆದರೆ, ಈಗಲೂ ಬಹುತೇಕ ಬಡಾವಣೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿಲ್ಲ. ಹೋದ ವರ್ಷ ಕೋವಿಡ್‌ ಉಲ್ಬಣಿಸಿದಾಗ ನಡೆಸಿದ ಸರ್ವೇ ಕಾರ್ಯ ಎರಡು ವಾರಗಳಲ್ಲಿ ಪೂರ್ಣಗೊಂಡಿತು. ಸರ್ವೇ ಸಹಾಯದಿಂದ ಕೋವಿಡ್‌ ಮೇಲೆ ಹತೋಟಿ ಸಾಧಿಸಲು ಜಿಲ್ಲಾಡಳಿತಕ್ಕೆ ಸಹಾಯವಾಗಿತ್ತು. ಆದರೆ, ಈ ವರ್ಷ ಅಂದುಕೊಂಡಂತೆ ಆಗುತ್ತಿಲ್ಲ.

ಮನೆ ಮನೆ ಸರ್ವೇ ಕೈಗೊಳ್ಳಲು ಐದು ಜನರನ್ನು ಒಳಗೊಂಡ 20 ತಂಡಗಳನ್ನು ರಚಿಸಲಾಗಿದೆ. ಏ.30ರಿಂದ ಈ ತಂಡಗಳು ಕೆಲಸ ನಿರ್ವಹಿಸುತ್ತಿವೆ. ಥರ್ಮಲ್‌ ಸ್ಕ್ರೀನ್‌, ಆಕ್ಸಿಮೀಟರ್‌ನೊಂದಿಗೆ ಮನೆ ಮನೆಗಳಿಗೆ ತೆರಳಿ, ಕೋವಿಡ್‌ ರೋಗ ಲಕ್ಷಣ ಹೊಂದಿದವರನ್ನು ಗುರುತಿಸಿ, ಆರಂಭದಲ್ಲೇ ಚಿಕಿತ್ಸೆ ನೀಡಿ ಅವರ ಜೀವ ಉಳಿಸುವ ಉದ್ದೇಶದಿಂದ ಈ ಸರ್ವೇ ಆರಂಭಿಸಲಾಗಿದೆ.

ಹಿರಿಯ ನಾಗರಿಕರು, ಗರ್ಭಿಣಿಯರು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರ ಆರೋಗ್ಯವನ್ನು ಆದ್ಯತೆ ಮೇರೆಗೆ ತಪಾಸಣೆ ನಡೆಸಿ, ಅವರಿಗೆ ಸಕಲ ರೀತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯಲು ಆಗುವುದಿಲ್ಲ ಎಂದು ತಂಡಕ್ಕೆ ಅರಿವಾದರೆ ಅವರನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ಶಿಫಾರಸು ಮಾಡುತ್ತಿದೆ. ಲಸಿಕೆಗೆ ಹೆಸರು ನೋಂದಣಿ ಮಾಡಿಸುವ ವಿಧಾನ, ಲಸಿಕಾ ಕೇಂದ್ರಗಳ ಮಾಹಿತಿ ಕೂಡ ಈ ತಂಡಗಳು ನೀಡುತ್ತಿವೆ. ಆದರೆ, ಅವುಗಳ ನಿಧಾನ ಗತಿಯ ಕಾರ್ಯವೈಖರಿಯಿಂದ ಹೆಚ್ಚಿನ ಜನ ಸರ್ವೇ ವ್ಯಾಪ್ತಿಗೆ ಬಂದಿಲ್ಲ. ಹೀಗಾಗಿಯೇ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

‘ಪ್ರಾಥಮಿಕ ಹಂತದಲ್ಲಿಯೇ ಸೋಂಕು ಹರಡುವುದನ್ನು ತಡೆಯುವುದು ಸರ್ವೇಯ ಮುಖ್ಯ ಉದ್ದೇಶವಾಗಿದೆ. ಆದರೆ, ಕೆಲಸ ಚುರುಕಿನಿಂದ ಆಗುತ್ತಿಲ್ಲ. ನಗರ ಸೇರಿದಂತೆ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಭಾರಿ ಏರಿಕೆಯಾಗುತ್ತಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸುತ್ತಿರುವ ಜಿಲ್ಲೆಗಳಲ್ಲಿ ನಮಗೆ ಮೂರನೇ ಸ್ಥಾನವಿದೆ. ಹೀಗಿದ್ದರೂ ಸರ್ವೇ ಚುರುಕುಗೊಳಿಸಿಲ್ಲ’ ಎಂದು ಚಿತ್ತವಾಡ್ಗಿಯ ಹಿರಿಯ ನಾಗರಿಕ ಅಜಯಕುಮಾರ ತಿಳಿಸಿದ್ದಾರೆ.

‘ಹೋದ ವರ್ಷ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಸರ್ವೇ ಮಾಡಲಾಗಿತ್ತು. ಸರ್ವೇ ಸಂದರ್ಭದಲ್ಲೇ ಅನೇಕ ಸೋಂಕಿತರು ಪತ್ತೆಯಾಗಿದ್ದರು. ರೋಗ ಲಕ್ಷಣ ಹೊಂದಿದವರಿಗೆ ತಕ್ಷಣವೇ ಚಿಕಿತ್ಸೆ ಸಿಕ್ಕಿದ್ದರಿಂದ ಸಾವು ನೋವು ಸಂಭವಿಸಿರಲಿಲ್ಲ. ಆದರೆ, ಈ ವರ್ಷ ಹಾಗಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಸ್ಥಳೀಯರಾಗಿದ್ದು, ಅವರೇ ಹೆಚ್ಚಿನ ಮುತುವರ್ಜಿ ವಹಿಸಿ, ಸರ್ವೇ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು’ ಎಂದು ಪಟೇಲ್‌ ನಗರದ ನಿವಾಸಿ ಬಸವರಾಜ ಆಗ್ರಹಿಸಿದ್ದಾರೆ.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಪ್ರತಿಕ್ರಿಯಿಸಿ, ‘ಎರಡು ವಾರಗಳಲ್ಲಿ ಶೇ 50ರಷ್ಟು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಪ್ರತಿಯೊಬ್ಬರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು