ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ಹೊಸಪೇಟೆ, ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ: ಸಿದ್ದರಾಮಯ್ಯ

ಸಮನಾಂತರ ಜಲಾಶಯ ನಿರ್ಮಾಣ: ಕಾಂಗ್ರೆಸ್‌ ‘ಪ್ರಜಾ ಧ್ವನಿ’ಯಲ್ಲಿ ಸಿದ್ದರಾಮಯ್ಯ ಭರವಸೆ
Last Updated 17 ಜನವರಿ 2023, 13:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ (ಕೆಪಿಸಿಸಿ) ಮಂಗಳವಾರ ನಗರದ ಡಾ. ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ‘ಪ್ರಜಾ ಧ್ವನಿ’ ಯಾತ್ರೆ ಪಕ್ಷದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಈ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಕಾಂಗ್ರೆಸ್‌ ಕೊಟ್ಟಿದ್ದ 165 ಭರವಸೆಗಳ ಪೈಕಿ 158 ಈಡೇರಿಸಿದೆ. ಆದರೆ, ಬಸವರಾಜ ಬೊಮ್ಮಾಯಿ ಅವರ ಸರ್ಕಾರ 600 ಭರವಸೆಗಳಲ್ಲಿ ಶೇ 10ರಷ್ಟು ಈಡೇರಿಸಿಲ್ಲ. ಇದು 40 ಪರ್ಸೆಂಟ್‌ ಸರ್ಕಾರ. ಲಂಚ, ಕಮಿಷನ್‌ ತಾಂಡವವಾಡುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿ ಕೆಲಸಗಳೇಕೆ ಆಗುತ್ತಿಲ್ಲ. ಜನ ಈ ಸರ್ಕಾರದಿಂದ ಬೇಸತ್ತು ಹೋಗಿದ್ದು, ಅವರ ಭಾವನೆಗಳಿಗೆ ಸ್ಪಂದಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಏನೇನು ಮಾಡಲಿದೆ ಎಂದು ಪಕ್ಷದ ಮುಖಂಡರು ಹೇಳುವುದರ ಮೂಲಕ ಮತಬೇಟೆ ನಡೆಸಿದರು.

ಇಷ್ಟೇ ಅಲ್ಲ, ಕಾಂಗ್ರೆಸ್‌ ಗೆದ್ದರೆ ಸಮನಾಂತರ ಜಲಾಶಯ, ಕಂಪ್ಲಿ ಹಾಗೂ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಭರವಸೆ ನೀಡುವುದರ ಮೂಲಕ ಸ್ಥಳೀಯ ಸಮಸ್ಯೆಗಳಿಗೂ ಸ್ಪಂದಿಸುವ ಮಾತು ಆಡಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ತುಂಗಭದ್ರಾ ಜಲಾಶಯ ಈ ಭಾಗದ ಜನರ ಜೀವನಾಡಿ. ಅದರಲ್ಲಿ 37 ಟಿಎಂಸಿ ಹೂಳು ತುಂಬಿಕೊಂಡಿದ್ದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಬಸವರಾಜ ಬೊಮ್ಮಾಯಿ ಅವರು ಸಮನಾಂತರ ಜಲಾಶಯ ಕಟ್ಟುತ್ತೇವೆ ಎಂದು ಹೇಳಿದ್ದರು. ಆದರೆ ಕಟ್ಟಿದ್ದಾರಾ? ನಾವು ಅಧಿಕಾರಕ್ಕೆ ಬಂದರೆ ಸಮನಾಂತರ ಜಲಾಶಯ ಕಟ್ಟುತ್ತೇವೆ. ಅದಕ್ಕೆ ಎಷ್ಟು ದುಡ್ಡು ಖರ್ಚಾದರೂ ಸರಿ ಎಂದು ಹೇಳಿದರು.

ಈ ಭಾಗದ ರೈತರು ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಪ್ರತಿ ವರ್ಷ 7ರಿಂದ 8 ಲಕ್ಷ ಟನ್‌ ಕಬ್ಬು ದಾವಣಗೆರೆ, ಮುಂಡರಗಿ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಎತ್ತಿನ ಬಂಡಿ ಹೊಂದಿದವರು, ರೈತರು ಬೀದಿ ಪಾಲಾಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ನಗರದ ಐಎಸ್‌ಆರ್‌ ಹಾಗೂ ಕಂಪ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ್ದೆ ಬಿಜೆಪಿ ಸರ್ಕಾರದ ಸಾಧನೆ. ಹಿಂದೆ ವಾಜಪೇಯಿದಲ್ಲಿ ಉಪಪ್ರಧಾನಿಯಾಗಿದ್ದ ಎಲ್‌.ಕೆ. ಅಡ್ವಾಣಿ ಅವರು, 371(ಜೆ) ಅನುಷ್ಠಾನ ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ಮನಮೋಹನ್‌ ಸಿಂಗ್‌ ಅವರು ಅನುಷ್ಠಾನಗೊಳಿಸಿದರು. ಅದರ ಪರಿಣಾಮ ಈ ಭಾಗದ ಬಡವರ ಮಕ್ಕಳು ಡಾಕ್ಟರ್‌, ಎಂಜಿನಿಯರ್‌ ಆಗುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ 36 ಸಾವಿರ ಹುದ್ದೆ ಭರ್ತಿ ಮಾಡಿದ್ದೆವು. ಬೊಮ್ಮಾಯಿ ಸರ್ಕಾರಕ್ಕೆ ಒಂದು ಹುದ್ದೆ ತುಂಬಲು ಆಗಿಲ್ಲ. ನಾವು ಪುನಃ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿವರ್ಷ ₹5 ಸಾವಿರ ಕೋಟಿ ಖರ್ಚು ಮಾಡುತ್ತೇವೆ. ಎಲ್ಲ ಖಾಲಿ ಹುದ್ದೆ ತುಂಬುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮಾತನಾಡಿ, ಇಂದಿರಾ ಗಾಂಧಿಯವರು ಈ ಭಾಗದಲ್ಲಿ ವಿಜಯನಗರ ಸ್ಟೀಲ್ಸ್‌ ಆರಂಭಿಸಿದರೆ, ಸೋನಿಯಾ ಗಾಂಧಿಯವರು ಬಿಟಿಪಿಎಸ್‌ ಆರಂಭಿಸಿದ್ದರು. ಹೀಗೆ ಅನೇಕ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಸ್ಥಾಪಿಸಿ ಕಾಂಗ್ರೆಸ್‌ ಜನರಿಗೆ ಉದ್ಯೋಗಗಳನ್ನು ಕೊಟ್ಟಿದೆ. ಅನೇಕ ಸಂಸ್ಥೆಗಳನ್ನು ಕಾಂಗ್ರೆಸ್‌ ಪಕ್ಷ ರಾಷ್ಟ್ರೀಕರಣಗೊಳಿಸಿದರೆ, ಬಿಜೆಪಿ ಅವುಗಳನ್ನು ಖಾಸಗೀಕರಣಗೊಳಿಸುತ್ತಿದೆ ಎಂದು ಆರೋಪಿಸಿದರು.

ಪ್ರಜಾ ಧ್ವನಿ ಯಾತ್ರೆ ಪ್ರಚಾರಕ್ಕಾಗಿ ನಡೆಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದಾರೆ. ಅವರ ಸಂಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸಲು ಈ ಯಾತ್ರೆ ಕೈಗೊಂಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೂ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಮನೆಯ ಯಜಮಾನಿಗೆ ₹2000 ನಗದು ನೀಡಲಾಗುವುದು. ಉಚಿತ ವಿದ್ಯುತ್‌ನಿಂದ ₹18 ಸಾವಿರ, ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ನೀಡಿದರೆ ವರ್ಷಕ್ಕೆ ₹24 ಸಾವಿರ ಹಣ ಸಿಗುತ್ತದೆ. ಪುರುಷರು ನಿಮಗೇ‌ಕೆ ಮಾಡಿಲ್ಲ ಎಂದು ಕೇಳಬೇಡಿ. ನಿಮಗೆ ಹಣ ಕೊಟ್ಟರೆ ಏನು ಮಾಡುತ್ತೀರಿ ಎನ್ನುವುದು ನನಗೆ ಗೊತ್ತು ಎಂದು ಹೇಳಿದ ಅವರು, ನಾವು ಹೇಳಿದ ನಂತರ ಬಜೆಟ್‌ನಲ್ಲಿ ಘೋಷಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇಷ್ಟು ದಿನ ಅಧಿಕಾರದಲ್ಲಿದ್ದಾಗ ಅವರೇಕೆ ಮಾಡಲಿಲ್ಲ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ವಚನದ ಮೂಲಕ ಉದಾಹರಣೆ ಕೊಟ್ಟರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಮೋದಿ ಸುಳ್ಳಿನ ಸರದಾರ. ಸುಳ್ಳು ಬಿಟ್ಟರೆ ಬೇರೇನೂ ಮಾತನಾಡುವುದಿಲ್ಲ. ಬಿಜೆಪಿ ಇದುವರೆಗೆ ಯಾವುದಾದರೂ ಒಳ್ಳೆಯ ಕೆಲಸ ಮಾಡಿದೆಯಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 90 ದಿನಗಳ ಒಳಗಾಗಿ ಸುಸಜ್ಜಿತ ಆಸ್ಪತ್ರೆ ಆರಂಭಿಸಲು ಕ್ರಮ ಜರುಗಿಸಲಾಗುವುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಮಹಮ್ಮದ್‌ ನಲಪಾಡ್, ಯಾತ್ರೆ ಉಸ್ತುವಾರಿ ಬಸವರಾಜ ರಾಯರಡ್ಡಿ, ಶಾಸಕರಾದ ಎಚ್‌.ಕೆ. ಪಾಟೀಲ, ಜೆ.ಎನ್‌. ಗಣೇಶ್‌, ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮ ನಾಯ್ಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರಬಾಬು, ಬಳ್ಳಾರಿ ಉಸ್ತುವಾರಿ ಮಂಜುನಾಥ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದ ಬಿ.ವಿ. ಶಿವಯೋಗಿ, ಮಹಮ್ಮದ್‌ ರಫೀಕ್‌, ಮುಖಂಡರಾದ ಪ್ರಕಾಶ ರಾಥೋಡ್‌, ವಿ.ಎಸ್‌. ಉಗ್ರಪ್ಪ, ಅಲ್ಲಂ ವೀರಭದ್ರಪ್ಪ, ಐ.ಜಿ. ಸನದಿ, ಅನಿಲ್‌ ಲಾಡ್‌, ಎಚ್‌.ಆರ್‌. ಗವಿಯಪ್ಪ, ರಾಜಶೇಖರ್ ಹಿಟ್ನಾಳ್‌, ಸಿದ್ದನಗೌಡ, ಮಹಮ್ಮದ್‌ ಇಮಾಮ್‌ ನಿಯಾಜಿ, ಸಿರಾಜ್‌ ಶೇಖ್‌, ಕೆ.ಎಸ್‌.ಎಲ್‌. ಸ್ವಾಮಿ, ವೆಂಕಟರಾವ ಘೋರ್ಪಡೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT