ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ದಿನ ಹಾಗೂ ಹಂಪಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಪ್ರತಿ ಶನಿವಾರ ಸಂಜೆ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮ ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ನಡೆಯುತ್ತಿದೆ.
ಮಯೂರ ಹೋಟೆಲ್‌ನ ವ್ಯವಸ್ಥಾಪಕ ಸುನಿಲ್ ಕುಮಾರ್ ಅವರು ಗುರುವಾರ ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದು, ಇಲ್ಲಿನ ಒಟ್ಟು 29 ಎಕರೆ ಸ್ಥಳದಲ್ಲಿ 5 ಎಕರೆಯಲ್ಲಷ್ಟೇ ಹೋಟೆಲ್ ಇದೆ. ಹೆಲಿ ಟೂರಿಸಂಗೆ ಜಾಗ ಒದಗಿಸಿದ ಬಳಿಕವೂ ಸಾಕಷ್ಟು ಜಾಗ ಉಳಿಯುತ್ತಿದ್ದು, ಟ್ರಾವೆಲರ್ಸ್ ನೂಕ್, 200 ಮಂದಿ ಉಳಿದುಕೊಳ್ಳಬಹುದಾದ ಡಾರ್ಮೆಟರಿ ಇಲ್ಲಿ ನಿರ್ಮಾಣವಾಗಲಿದೆ ಎಂದರು.
ಹೋಟೆಲ್‌ನಲ್ಲಿ ಹೊಸದಾಗಿ ಮಡಿಕೆ ಬಿರಿಯಾನಿಯ ವ್ಯವಸ್ಥೆ ಮಾಡಲಾಗಿದೆ, ಬಾರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. 3 ವುಡನ್ ಕಾಟೇಜ್, 3 ಡೂಮ್ ಕಾಟೇಜ್‌ಗಳನ್ನು ಪ್ರವಾಸಿಗರಿಗೆ ಇಷ್ಟವಾಗಿವೆ. ಇನ್ನಷ್ಟು ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಪ್ರವಾಸಿಗರ ಒತ್ತಾಯ: ‘ಹಂಪಿಯಲ್ಲಿ ಹೆಲಿಟೂರಿಸಂ, ಎಕೊ ಟೂರಿಸಂ, ನೇಚರ್ ಟೂರಿಸಂಗೆ ಹೆಚ್ಚಿನ ಆದ್ಯತೆ ಕೊಡಬೇಕು, ಹಂಪಿ ಸಮೀಪದಲ್ಲೇ ವಿಮಾನನಿಲ್ದಾಣ ಆರಂಭವಾಗಬೇಕು, ಇದರಿಂದ ವಿದೇಶಿ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದೆ’ ಎಂದು ಹಲವಾರು ಪ್ರವಾಸಿಗರು ಒತ್ತಾಯಿಸಿದ್ದಾರೆ.