ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಕೊಚ್ಚಿ ಹೋದ 19ನೇ ತೂಬಿಗೆ ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಎರಡು ದಿನದಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ಹರಿಯುವ ನೀರಲ್ಲೇ ಗೇಟ್‌ನ ಒಂದು ಭಾಗವನ್ನು ಇಳಿಸುವ ಪ್ರಯೋಗ ನಡೆಯುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಅಣೆಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಂತ್ರಿಕ ತಜ್ಞರು ಒಟ್ಟಾರೆ ಪ್ರಕ್ರಿಯೆ ಕುರಿತು ವಿವರವಾದ ಮಾಹಿತಿ ನೀಡಿದರು.
ಕೊಪ್ಪಳ ತಾಲ್ಲೂಕಿನ ಹೊಸಹಳ್ಳಿ, ಹೊಸಪೇಟೆಯ ಸಂಕ್ಲಾಪುರ ಮತ್ತು ತೋರಣಗಲ್‌ನ ಜಿಂದಾಲ್ ಕಂಪನಿ ಆವರಣದಲ್ಲಿ ಗೇಟ್‌ನ ಒಟ್ಟು 8 ಭಾಗಗಳು ಸಿದ್ಧವಾಗುತ್ತಿವೆ. 4 ಅಡಿ (1.2 ಮೀಟರ್) ಎತ್ತರ ಮತ್ತು 60 ಅಡಿ ಅಗಲದ 16 ಮಿ.ಮೀ.ಗೇಜ್‌ನ ಕಬ್ಬಿಣದ ಎಲಿಮೆಂಟ್‌ನಿಂದ ಬೃಹತ್ ಗೇಟ್ ನಿರ್ಮಿಸಲಾಗುವುದು. ಇಂತಹ ಒಟ್ಟು 5 ಸೆಟ್‌ಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಗೇಟ್ ಕೂರಿಸಲಾಗುತ್ತದೆ. ಪ್ರತಿ ಹಂತದಲ್ಲೂ ಗೇಟುಗಳ ವಿನ್ಯಾಸ ತಜ್ಞ ಕನ್ನಯ್ಯ ನಾಯ್ಡು ಅವರ ಸಲಹೆ, ಸೂಚನೆಯಂತೆ ಕೆಲಸ ನೆರವೇರಲಿದೆ ಎಂದು ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಲಾಗಿದೆ.
ನೀರಿನ ಮಟ್ಟ 1,625ಕ್ಕೆ (ನೀರಿನ ಸಂಗ್ರಹ 76.48 ಟಿಎಂಸಿ ಅಡಿ) ತಗ್ಗಿದ ಕೂಡಲೇ ಹರಿಯುವ ನೀರಿನಲ್ಲೇ ಒಂದು ಎಲಿಮೆಂಟ್ ಸ್ಟಾಪ್‌ಲಾಗ್ ಗೇಟ್ ಅಳವಡಿಸುವ ಪ್ರಯತ್ನ ನಡೆಯಲಿದೆ. ಒಂದು ವೇಳೆ ಆ ಯತ್ನ ವಿಫಲವಾದರೆ ನೀರಿನ ಮಟ್ಟ 1,621 ಅಡಿಗೆ (ನೀರಿನ ಸಂಗ್ರಹ 64.16 ಟಿಎಂಸಿ ಅಡಿ) ತಗ್ಗಿಸಿ ಗೇಟ್ ಅಳವಡಿಕೆ ನಡೆಯಲಿದೆ.
‘ಅಣೆಕಟ್ಟೆಯ ನೀರಿನ ಮಟ್ಟವನ್ನು 1,621 ಅಡಿಗೆ ಇಳಿಸಿದಾಗಲೂ 64 ಟಿಎಂಸಿ ಅಡಿಯಷ್ಟು ನೀರು ಲಭ್ಯ ಇರುತ್ತದೆ. ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಿಂದ ಕನಿಷ್ಠ 90 ಟಿಎಂಸಿ ಅಡಿ ನೀರು ಸಂಗ್ರಹವಾಗುವ ವಿಶ್ವಾಸವಿದೆ. ಹೀಗಾಗಿ ಮುಂಗಾರು ಹಂಗಾಮಿನ ಮೊದಲ ಬೆಳೆ ಬೆಳೆಯುವ ಸುಮಾರು 10 ಲಕ್ಷ ಎಕರೆ ಪ್ರದೇಶಕ್ಕೆ ಸಂಪೂರ್ಣ ನೀರು ಒದಗಿಸುವುದು ಸಾಧ್ಯವಾಗಲಿದೆ’ ಎಂದು ತಜ್ಞರು ತಿಳಿಸಿದರು.
ತುಂಗಭದ್ರಾ ಜಲಾಶಯ ಯೋಜನೆಯಡಿ ರಾಜ್ಯದ 9.26 ಲಕ್ಷ ಎಕರೆ (2 ಬೆಳೆ ಸೇರಿ), ಆಂಧ್ರಪ್ರದೇಶದ 6.25 ಲಕ್ಷ ಎಕರೆ ಹಾಗೂ ತೆಲಂಗಾಣದ 87 ಸಾವಿರ ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ.
20 ಟಿಎಂಸಿ ಅಡಿ ಖಾಲಿ: ತುಂಗಭದ್ರಾ ಜಲಾಶಯದಿಂದ ಮೂರು ದಿನದಲ್ಲಿ 20 ಟಿಎಂಸಿ ಅಡಿ ನೀರು ಖಾಲಿಯಾಗಿದೆ. ಆಗಸ್ಟ್ 16ರ ವೇಳೆಗೆ 66.30 ಟಿಎಂಸಿ ಅಡಿಗೆ ಕುಸಿಯಲಿದೆ. ಆಗ ಗೇಟ್ ಅಳವಡಿಕೆ ಬಹುತೇಕ ಸರಾಗವಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಜಲಾಶಯ ಮಟ್ಟ ನಿಭಾಯಿಸುವ ವೇಳಾಪಟ್ಟಿ (ದಿನಾಂಕ;ನೀರಿನ ಮಟ್ಟ (ಅಡಿ);ನೀರಿನ ಸಂಗ್ರಹ (ಟಿಎಂಸಿ ಅಡಿ);ಒಳಹರಿವು;ಹೊರಹರಿವು)
ಆ.14;1627.44;84.44;30000;1.30 ಲಕ್ಷ
ಆ.15;1624.52;74.94;30000;1.40 ಲಕ್ಷ
ಆ.16;1621.72;66.30;25000;1.25 ಲಕ್ಷ
ಗೇಟ್ ನಿರ್ಮಾಣಕ್ಕೆ ಮತ್ತೊಂದು ಕಂಪನಿಗೆ ಹೊಣೆ
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿರುವ 19ನೇ ಗೇಟ್ ಜಾಗದಲ್ಲಿ ಶಾಶ್ವತ ಗೇಟ್ ಬದಲಿಗೆ ತಾತ್ಕಾಲಿಕವಾಗಿ ‘ಸ್ಟಾಪ್ ಲಾಗ್ ಗೇಟ್’ ಅಳವಡಿಸುವುದು ಖಚಿತವಾಗಿದ್ದು ಇದರ ನಿರ್ಮಾಣದ ಹೊಣೆಯನ್ನು ಮತ್ತೊಂದು ಕಂಪನಿಗೂ ನೀಡಲಾಗಿದೆ. ನಾರಾಯಣ ಎಂಜಿನಿಯರಿಂಗ್ಸ್ ಮತ್ತು ಹಿಂದೂಸ್ತಾನ್ ಎಂಜಿನಿಯರಿಂಗ್ಸ್ ಕಂಪನಿಗಳು ಈಗಾಗಲೇ ಗೇಟ್‌ಗಳ ತಯಾರಿಕಾ ಕೆಲಸ ಆರಂಭಿಸಿವೆ. ಇದನ್ನು ಚುರುಕುಗೊಳಿಸಲು ಈಗ ಜಿಂದಾಲ್ ಕಂಪನಿಗೂ ನೀಡಲಾಗಿದೆ. ಯಾವ ಕಂಪನಿ ವೇಗವಾಗಿ ಕೆಲಸ ಮುಗಿಸುತ್ತದೆಯೊ ಅದನ್ನೇ ಮೊದಲು ಅಳವಡಿಸಲಾಗುತ್ತದೆ.
‘ಸ್ಥಳೀಯವಾಗಿ ತಯಾರಿಸಲಾಗುತ್ತಿರುವ ಗೇಟ್‌ಗಳ ವಿನ್ಯಾಸಕ್ಕೆ ಈಗಾಗಲೇ ಮಂಡಳಿಯ ಸಭೆಯಲ್ಲಿ ಅನುಮೋದನೆ ಲಭಿಸಿದ್ದು ಒಂದೆರೆಡು ದಿನಗಳಲ್ಲಿ ಗೇಟ್ ಅಳವಡಿಕೆ ಕೆಲಸ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಅಲ್ಲಲ್ಲಿ ಬಿರುಕು: ಏಳು ದಶಕಗಳಷ್ಟು ಹಳೆಯದಾದ ಜಲಾಶಯದಲ್ಲಿ ಗೇಟ್‌ನ ಕಟ್ಟಡದಲ್ಲಿ ಅಲ್ಲಲ್ಲಿ ಸಣ್ಣದಾಗಿ ಬಿರುಕುಗಳು ಕಾಣಿಸಿಕೊಂಡಿದ್ದು ಈ ವಿಚಾರವೂ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಗೇಟ್ ನೋಡಲು ಬರುತ್ತಿರುವವರು ವಿಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.