ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯಕ್ಕೆ ಭಾರಿ ಒಳಹರಿವು, ನದಿಗೆ ನೀರು ಬಿಡುಗಡೆ

Last Updated 25 ಜುಲೈ 2021, 7:54 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಹೆಚ್ಚಳವಾಗಿರುವುದರಿಂದ ಭಾನುವಾರ ನದಿಗೆ ನೀರು ಹರಿಸಲಾಗಿದೆ.ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಪೊಲೀಸರು ಹಂಪಿಗೆ ಬಂದ ಪ್ರವಾಸಿಗರನ್ನು ನದಿ ತಟದಲ್ಲಿ ಓಡಾಡದಂತೆ ಸೂಚಿಸಿದ್ದಾರೆ.

ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 10 ಗೇಟ್‌ಗಳನ್ನು ಒಂದು ಅಡಿ ಮೇಲೆ ತೆಗೆದು 13,500 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ಹಂತ ಹಂತವಾಗಿ ಎಲ್ಲ ಗೇಟ್‌ಗಳನ್ನು ತೆಗೆದು ನೀರು ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 85 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 32 ಟಿಎಂಸಿ ಹೂಳು ತುಂಬಿಕೊಂಡಿರುವುದರಿಂದ 101 ಟಿಎಂಸಿ ಅಡಿಯಷ್ಟೇ ನೀರು ಸಂಗ್ರಹಿಸಬಹುದು. ಇನ್ನು 16 ಟಿಎಂಸಿ ಅಡಿ ನೀರು ಬಂದರೆ ಸಂಪೂರ್ಣ ಜಲಾಶಯ ಭರ್ತಿಯಾಗಲಿದೆ. ಮಲೆನಾಡು ಮತ್ತು ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ 2,05,762 ಕ್ಯುಸೆಕ್‌ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಇದು ಎರಡುವರೆಯಿಂದ ಮೂರು ಲಕ್ಷ ಕ್ಯುಸೆಕ್‌ಗೆ ಹೆಚ್ಚಾಗುವ ಸಾಧ್ಯತೆ ಇದ್ದು, ದಿನಕ್ಕೆ 12ರಿಂದ 13 ಟಿಎಂಸಿ ಅಡಿ ನೀರು ಬರುವುದರಿಂದ ನದಿಗೆ ನೀರು ಹರಿಸಲಾಗಿದೆ.

‘ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ನದಿ ಪಾತ್ರದಲ್ಲಿ ತೆಪ್ಪ, ಮೋಟಾರ್‌ ದೋಣಿಗಳೊಂದಿಗೆ ಯಾರೂ ಹೋಗಬಾರದು. ಜಾನುವಾರುಗಳನ್ನು ಮೇಯಿಸಬಾರದು. ಆಯಾ ಪೊಲೀಸ್‌ ಠಾಣೆಯವರು ನದಿ ಸುತ್ತಮುತ್ತಲಿನ ಭಾಗಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಆಡಳಿತ ಮಂಡಳಿ ಶನಿವಾರ ತಿಳಿಸಿತ್ತು.

ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್‌ ಅವರು ಬೆಳಿಗ್ಗೆ ಕ್ರಸ್ಟ್‌ಗೇಟ್‌ಗಳ ಬಳಿ ಪೂಜೆ ನೆರವೇರಿಸಿ, ನದಿಗೆ ನೀರು ಹರಿಸಿದರು.

ಮೋಡವಷ್ಟೇ ಮಳೆ ಇಲ್ಲ: ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮಳೆ ತಗ್ಗಿದೆ. ದಿನವಿಡೀ ಕಾರ್ಮೋಡ ಇರುತ್ತಿದೆ. ಆಗಾಗ ತುಂತುರು ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT