ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಗಣಿ ಕ್ಯಾಂಪ್‌ಗಳತ್ತ ಹರಿಯದ ತುಂಗಭದ್ರೆ

80 ವರ್ಷಗಳಿಂದ ವಾಸವಿದ್ದರೂ ನೀರಿನ ಶಾಶ್ವತ ಮೂಲವೇ ಇಲ್ಲ– ಕೆಎಂಇಆರ್‌ಸಿ ಸೌಲಭ್ಯವೂ ತಲುಪಿಲ್ಲ
Published 30 ಮೇ 2024, 4:19 IST
Last Updated 30 ಮೇ 2024, 4:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಳ್ಳಾರಿ–ಹೊಸಪೇಟೆ ಹೆದ್ದಾರಿ ಪಕ್ಕದಲ್ಲೇ ಇರುವ ಶಂಕರನಗರ ಕ್ಯಾಂಪ್‌, ನಾಗಪ್ಪ ಕ್ಯಾಂಪ್‌, ಪಿ.ಬಿ.ಎಸ್ ಕ್ಯಾಂಪ್‌ ಮತ್ತು ಜಿ.ಜಿ.ಕ್ಯಾಂಪ್‌ಗಳು ನಿಜವಾದ ಗಣಿಬಾಧಿತ ಪ್ರದೇಶಗಳು. ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಮೂಲಸೌಲಭ್ಯ ಕೆಲಸ ಆಗಬೇಕಿರುವುದು ಇಂತಲ್ಲೇ. ಆದರೆ ಇಲ್ಲಿಗೆ ತುಂಗಭದ್ರೆ ಹರಿದೇ ಇಲ್ಲ.

ಕುಡಿಯುವ ನೀರಿಗಾಗಿ ಇಲ್ಲಿನ ಜನ ಪರದಾಡಿದ್ದಕ್ಕೆ ಲೆಕ್ಕವಿಲ್ಲ. ಗಣಿ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಇಲ್ಲಿನ ನಿವಾಸಿಗಳು ನೀರಿನ ಸುಖ ಕಾಣಲಿಲ್ಲ. ಗಣಿ ಪ್ರದೇಶಕ್ಕೆ ಸಾಗುತ್ತಿದ್ದ ನೀರಿನ ಟ್ಯಾಂಕರ್‌ಗಳು ಕೊಟ್ಟ ನೀರೇ ಇಲ್ಲಿನ ಜನರ ಜೀವಾಮೃತವಾಗಿತ್ತು. ಒಂದು ಕೊಳವೆಬಾವಿಯಿಂದ ಎರಡು ಇಂಚು ನೀರು ಬರುತ್ತಿದೆ, ಅದರಿಂದಲೇ ಇಲ್ಲಿನ ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ತುಂಬಿಸಿ ದಿನಕ್ಕೆ ಅರ್ಧ ಗಂಟೆ, ಇಲ್ಲವೇ ಒಂದು ಗಂಟೆ ಹೊತ್ತು ಬಿಡಲಾಗುತ್ತಿದೆ. ಇಲ್ಲಿ ಸುಮಾರು 500 ಮನೆಗಳಿವೆ.

ಜಿ.ಜಿ.ಕ್ಯಾಂಪ್‌ನಲ್ಲಿ ಒಂದು ಸಾಮೂಹಿಕ ಶೌಚಾಲಯವನ್ನು ಗಣಿ ಕಂಪನಿಯವರು ಕಟ್ಟಿಸಿಕೊಟ್ಟಿದ್ದರು. ಆದರೆ ಅದರ ಅಡಿಪಾಯವೇ ಕುಸಿದಿದ್ದು, ಬಳಸಲು ಯೋಗ್ಯವಾಗಿಲ್ಲ. ಉಳಿದ ಮೂರೂ ಕ್ಯಾಂಪ್‌ಗಳಲ್ಲಿ ಶೌಚಾಲಯಗಳೇ ಇಲ್ಲ. ಮನೆಗಳಲ್ಲೂ ಶೌಚಾಲಯಗಳಿಲ್ಲ. ಇಲ್ಲಿ ಬಯಲು ಬಹಿರ್ದೆಸೆ ಕಡ್ಡಾಯ ಆಗಿಬಿಟ್ಟಿದೆ.

ಶಂಕರನಗರ ಕ್ಯಾಂಪ್‌ನಲ್ಲಿ ಪ್ರಾಥಮಿಕ ಶಾಲೆ ಬಿಟ್ಟರೆ ಬೇರೆ ಸೌಲಭ್ಯಗಳೇ ಇಲ್ಲ. ಆಸ್ಪತ್ರೆ ಇಲ್ಲ, ಸಮುದಾಯ ಭವನ ಇಲ್ಲ. ಏನು ಬೇಕಿದ್ದರೂ ಕಾರಿಗನೂರು, ಪಿ.ಕೆ.ಹಳ್ಳಿ ಅಥವಾ ಹೊಸಪೇಟೆಗೆ ಹೋಗಬೇಕು. ಬಳ್ಳಾರಿ ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಈ ನಾಲ್ಕೂ ಕ್ಯಾಂಪ್‌ಗಳು ಮೂಲಸೌಲಭ್ಯಗಳಿಂದ ವಂಚಿತವಾಗಿಬಿಟ್ಟಿವೆ.  

2004ರಲ್ಲಿ ಈ ಪ್ರದೇಶ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಸಂತೋಷ್‌ ಲಾಡ್ ಅವರು ಅಂದಿನ ಶಾಸಕರಾಗಿದ್ದಾಗ 12 ಎಕರೆ ಪ್ರದೇಶವನ್ನು ಆಶ್ರಯ ಯೋಜನೆಗಾಗಿ ಮಂಜೂರು ಮಾಡಿಸಿಕೊಟ್ಟಿದ್ದರು. ಅದರಲ್ಲಿ ಕಟ್ಟಿಕೊಂಡ ಮನೆಗಳೇ ಇಲ್ಲಿನ ಈಗಿನ ಸ್ಥಿರಾಸ್ತಿಗಳು. ಸದ್ಯ 59 ಮನೆಗಳಿಗಷ್ಟೇ ಪಟ್ಟಾ ಸಿಕ್ಕಿದೆ.

‘ತಮ್ಮ 15 ವರ್ಷದ ಅಧಿಕಾರ ಅವಧಿಯಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಈ ಭಾಗಕ್ಕೆ ಅಂತಹ ಯಾವ ಸೌಲಭ್ಯವನ್ನೂ ಕಲ್ಪಿಸಿಕೊಡಲಿಲ್ಲ. 59 ಮನೆಗಳಿಗೆ ಪಟ್ಟಾ ಕೊಡಿಸಿದ್ದು ಅವರು ಎಂಬುದನ್ನು ಮರೆಯುವುದಿಲ್ಲ. ಈ ಭಾಗದ ಮೂಲಸೌಲಭ್ಯ ಒದಗಿಸಲು ಇದೀಗ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವವರು ಶಾಸಕ ಎಚ್.ಆರ್.ಗವಿಯಪ್ಪ’ ಎಂದು ಸ್ಥಳೀಯ ನಿವಾಸಿ ಮಹಾರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ಅವರ ಮಾತಿಗೆ ಪೂರಕ ಎಂಬಂತೆ ಕ್ಯಾಂಪ್‌ನಲ್ಲಿ ಜೆಜೆಎಂ ಯೋಜನೆಯಡಿಯಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗುತ್ತಿವೆ, ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗುತ್ತಿವೆ. ಇನ್ನೊಂದು ಕೊಳವೆಬಾವಿ ತೋಡಿದ್ದು, 2 ಇಂಚು ನೀರು ಸಿಕ್ಕಿದೆ. ಇಂಗಳಗಿಯಲ್ಲಿ 1.50 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದ್ದು,  ಎಲ್‌ಎಲ್‌ಸಿ ಕಾಲುವೆಯಿಂದ ನೀರು ಪಂಪ್‌ ಮಾಡಿ ಈ ಟ್ಯಾಂಕ್‌ಗೆ ಹರಿಸಿ ನಾಲ್ಕೂ ಕ್ಯಾಂಪ್‌ಗಳಿಗೆ ಹರಿಸುವ ಯೋಜನೆಗೆ ಇದೀಗ ವೇಗ ದೊರೆತಿದೆ.

ಜಿ.ಜಿ.ಕ್ಯಾಂಪ್‌ನಲ್ಲಿ ಜನರ ಜೀವನದ ದುಃಸ್ಥಿತಿಯನ್ನು ಸೂಚ್ಯವಾಗಿ ತಿಳಿಸುತ್ತಿರುವ ಶಿಥಿಲಗೊಂಡ ಶೌಚಾಲಯ –ಪ್ರಜಾವಾಣಿ ಚಿತ್ರ
ಜಿ.ಜಿ.ಕ್ಯಾಂಪ್‌ನಲ್ಲಿ ಜನರ ಜೀವನದ ದುಃಸ್ಥಿತಿಯನ್ನು ಸೂಚ್ಯವಾಗಿ ತಿಳಿಸುತ್ತಿರುವ ಶಿಥಿಲಗೊಂಡ ಶೌಚಾಲಯ –ಪ್ರಜಾವಾಣಿ ಚಿತ್ರ

ನ್ಯಾ.ಸುದರ್ಶನ ರೆಡ್ಡಿ ಭೇಟಿ

ಕೆಎಂಇಆರ್‌ಸಿಯ ಮೇಲುಸ್ತುವಾರಿ ಪ್ರಾಧಿಕಾರದ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಸುಮಾರು ಎರಡು ವರ್ಷಗಳ ಹಿಂದೆ ಶಂಕರನಗರ ಕ್ಯಾಂಪ್‌ಗೆ ಬಂದು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಸ್ಥಳೀಯರಿಗೆ ಏನು ಬೇಕು ಎಂದು ಮಾಹಿತಿ ಪಡೆದಿದ್ದರು. ಆಗ ಅವರೆಲ್ಲ ಕುಡಿಯುವ ನೀರು ಶೌಚಾಲಯ ಸಮುದಾಯ ಭವನ ಸಹಿತ ಇಲ್ಲಿನ ಜನರಿಗೆ ಅಗತ್ಯದ ಮೂಲಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಅದಿನ್ನೂ ಕಾರ್ಯಗತಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT