ಭಾನುವಾರ, ಡಿಸೆಂಬರ್ 4, 2022
21 °C

ಆರು ಜನಕ್ಕೆ ಅಂಗಾಂಗ ದಾನ; ಸಾವಿನಲ್ಲೂ ಯಲ್ಲಪ್ಪ ಸಾರ್ಥಕ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರದ ಜೈಭೀಮ ನಗರದ ಮೃತ ಯುವಕ ಯಲ್ಲಪ್ಪ (31) ಅಂಗಾಂಗ ದಾನಗಳನ್ನು ಮಾಡುವುದರ ಮೂಲಕ ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ.

ಯಲ್ಲಪ್ಪ ಅವರ ಪಿತ್ತಜನಕಾಂಗ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ, ಹೃದಯವನ್ನು ಜಯದೇವ ಆಸ್ಪತ್ರೆಗೆ, ಕಿಡ್ನಿಯನ್ನು ಧಾರವಾಡದ ಎಸ್‌ಡಿಎಂ ಹಾಗೂ ಕಿಮ್ಸ್‌ ಆಸ್ಪತ್ರೆಗೆ, ಕಣ್ಣಿನ ಕಾರ್ನಿಯಾವನ್ನು ವೈದ್ಯರು ಸಂರಕ್ಷಿಸಿ ಇಟ್ಟಿದ್ದಾರೆ. ಯಲ್ಲಪ್ಪನವರ ಅಂಗಾಂಗ ದಾನಗಳಿಂದ ಆರು ಜನರ ಬದುಕಿನಲ್ಲಿ ಬೆಳಕು ಮೂಡಲಿದೆ.

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಲ್ಲಪ್ಪ ಸೆ. 25ರಂದು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಾಗಿದ್ದರು. ಅವರ ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. 

ಬದುಕುಳಿಯುವ ಸಾಧ್ಯತೆ ಇರಲಿಲ್ಲ. ವೈದ್ಯರ ತಂಡದ ಸಲಹೆ ಮೇರೆಗೆ ಯಲ್ಲಪ್ಪ ಅವರ ತಂದೆ ಹನುಮಂತಪ್ಪನವರು ಮಗನ ಅಂಗಾಂಗ ದಾನಕ್ಕೆ ಒಪ್ಪಿದ್ದಾರೆ. ಸೆ. 26ರಂದು ವೈದ್ಯರ ತಂಡ ಬಂದು ಯಲ್ಲಪ್ಪ ಅವರ ಸಂಬಂಧಿಕರ ಒಪ್ಪಿಗೆ ಪಡೆದು, ಸೆ. 27ರಂದು ಶಸ್ತ್ರಚಿಕಿತ್ಸೆ ನಡೆಸಿ, ಹೃದಯ, ಕಣ್ಣು, ಕಿಡ್ನಿ, ಯಕೃತ್‌ ತೆಗೆದು ಬೇರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.

ಯಲ್ಲಪ್ಪ ಬಾಣಸಿಗರಾಗಿದ್ದರು. ಮದುವೆ ಸಮಾರಂಭಗಳಲ್ಲಿ ಅಡುಗೆ ಮಾಡಿ ಉಪಜೀವನ ನಡೆಸುತ್ತಿದ್ದರು. ಅವಿವಾಹಿತರಾಗಿದ್ದ ಯಲ್ಲಪ್ಪ ಇತ್ತೀಚೆಗೆ ಕೆಲಸದ ನಿಮಿತ್ತ ತಾಲ್ಲೂಕಿನ ಮರಿಯಮ್ಮನಹಳ್ಳಿಗೆ ಹೋದಾಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. 

‘ನನ್ನ ಮಗ ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಅಂಗಾಂಗ ದಾನಕ್ಕೆ ಒಪ್ಪಿದೆ. ನನ್ನ ಮಗ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗುತ್ತಾನೆ ಎಂದು ಅಂದುಕೊಂಡಿರಲಿಲ್ಲ’ ಎಂದು ಹನುಮಂತಪ್ಪ ಹೇಳಿದರು. ‘ಯಲ್ಲಪ್ಪ ಅವರ ತಂದೆ, ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿರುವುದರಿಂದ ಆರು ಜನರಿಗೆ ಜೀವ ಕೊಟ್ಟಂತಾಗಿದೆ’ ಎಂದು ಹುಬ್ಬಳ್ಳಿ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು