ಶುಕ್ರವಾರ, ಅಕ್ಟೋಬರ್ 22, 2021
29 °C

ವಿಜಯನಗರ: ಹೊಸ ಜಿಲ್ಲೆಗೆ ಗೋಧೂಳಿಯಲ್ಲಿ ಕಲಾ ತಂಡಗಳ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ಅತ್ತ ಸೂರ್ಯಮುಳುಗುವುದಕ್ಕೆ ಅಣಿಯಾಗುತ್ತಿದ್ದರೆ, ಇತ್ತ ವಡಕರಾಯ ದೇವಸ್ಥಾನದ ಆವರಣದ ರಥಬೀದಿಯಲ್ಲಿ ವಿಜಯನಗರ ನೂತನ ಜಿಲ್ಲೆ ಉದಯವಾಗುವಂತಿತ್ತು. ಹೊಸ ಜಿಲ್ಲೆಯ ಸ್ವಾಗತಕ್ಕೆ ಶನಿವಾರ ಗೋಧೂಳಿ ಸಮಯದಲ್ಲಿ ವಿವಿಧ ಕಲಾತಂಡಗಳ ಮೆರುಗು ನೋಡುಗರ ಕಣ್ಮನ ಸೆಳೆದವು. 

ಚಿಟ್ಟೆಗಳು, ನವಿಲುಗಳು, ಡೈನಾಸೋರ್‌ಗಳು, ಚಿಂಪಾಂಜಿ, ಆಂಜನೇಯನ ನವನಾವಿನ್ಯದ ವೇಷಭೂಷಣಗಳು ಹೊಸ ಜಿಲ್ಲೆಗೆ ಸ್ವಾಗತ ಕೋರಿದಂತಿತ್ತು. ರಥಬೀದಿಯಿಂದ ವಿಜಯನಗರ ಕಾಲೇಜು ರಸ್ತೆಯ ಉದ್ದಕ್ಕೂ ಕೇರಳ ಮತ್ತು ವಿವಿಧ  ಕಲಾತಂಡಗಳದೇ ವೈಭವ. ರಸ್ತೆಯ ಎರಡು ಕಡೆಗಳಲ್ಲೂ ಎಲ್ಲಿ ನೋಡಿದರಲ್ಲಿ ಕಿಕ್ಕಿರದ ಜನಸಂದಣಿ. 

ಕೇರಳದ ತಯ್ಯಂ ವೇಷ, ದೊಡ್ಡ ಮೋಹಿನಿಯಟ್ಟಂ, ಪಟ ಕುಣಿತ, ಗೊಂಬೆ ಕುಣಿತ, ಮಹಿಳೆಯರ ವೀರಗಾಸೆ, ನಗಾರಿ ವಾದ್ಯ, ಅಲಾಯಿ ಹೆಜ್ಜೆ ಮೇಳ, ಶಿವಮೊಗ್ಗದ ಮಹಿಳೆಯರ ಡೊಳ್ಳು ಕುಣಿತ, ಜಗ್ಗಲಗಿ ಕುಣಿತ‌, ಚಿತ್ರದುರ್ಗದ ಬ್ಯಾಂಡ್‍ಸೆಟ್, ತುಳುನಾಡು ವಾದ್ಯ, ಹೊನ್ನಾವರದ ಬ್ಯಾಂಡ್, ಕೇರಳದ ಅರ್ಧನಾರೀಶ್ವರ, ಚಿಲಿಪಿಲಿ ಗೊಂಬೆ, ಕೊಂಚಾಂಡಿ ಚೆಂಡೆ, ಪಾಂಚ್ ಪಂಟರ್ಸ್, ಕೊಂಬು, ರಾಮನಗರದ ಪಟಕುಣಿತ, ತುಮಕೂರಿನ ಚಿಟ್ಟೆಮೇಳ,  ಚಿಕ್ಕಮಗಳೂರಿನ ಹುಲಿವೇಷ, ಹೆಬ್ಬೂರಿನ ಕುದುರೆ ಕುಣಿತ, ಗೊರವರ ಕುಣಿತ, ರಾಮಸಾಗರದ ಕಹಳೆ ವಾದನ, ದಕ್ಷಿಣ ಕನ್ನಡದ ಚೆಂಡೆ ಮುದ್ದಳೆ, ಇಮ್ಮಡಾಪುರದ ಮಹಿಳೆ ಉರುಮೆ ವಾದ್ಯ. ಬುಡ್ಗ ಜಂಗಮರ ಹಗಲು ವೇಷ, ನಗಾರಿ ವಾದ್ಯ, ಬಳ್ಳಾರಿಯ ಮೋಹನ್ ಮತ್ತು ತಂಡದ ತಾಷರಂಡೋಲ್, ಕೊಪ್ಪಳದ ಹನುಮಂತಪ್ಪ ಬೊಬಲ್ ತಂಡದಿಂದ ಗಾರುಡಿ ಕುಣಿತ, ಬೆಂಗಳೂರು ಗ್ರಾಮಾಂತರದ ನಾಗರಾಜ ಮತ್ತು ತಂಡದಿಂದ ಪೂಜಾ ಕುಣಿತ, ಬೆಳಗಾವಿಯ ಚಿದಾನಂದ ಮತ್ತು ತಂಡದಿಂದ ಜಾಂಜ್‌ ಪತಾಕ್ ಸೇರಿದಂತೆ 80 ಕಲಾತಂಡಗಳು ವೈಭವಕ್ಕೆ ಮೆರುಗು ನೀಡಿದವು, ಕಲೆಗಳಿಗೆ ಜೀವ ತುಂಬಿದರು.

ರಸ್ತೆಯ ಉದ್ದಕ್ಕೂ ನೆರೆದಿದ್ದ ಅನೇಕರು ಗೊಂಬೆಗಳ ಜತೆಯಲ್ಲಿ ಫೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. 
ಇದಕ್ಕೂ ಮುನ್ನ ಸಚಿವ ಆನಂದ್‍ ಸಿಂಗ್ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು