ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ನಟ ಪುನೀತ್‌ ರಾಜಕುಮಾರ್‌ ಕಂಚಿನ ಪುತ್ಥಳಿ ಅನಾವರಣ

Last Updated 5 ಜೂನ್ 2022, 18:47 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅಪಾರ ಸಂಖ್ಯೆಯ ಅಭಿಮಾನಿಗಳ ಕರತಾಡನ, ಹೂಮಳೆಯ ನಡುವೆ ನಗರದಲ್ಲಿ ಭಾನುವಾರ ರಾತ್ರಿ ನಟ, ದಿವಂಗತ ಪುನೀತ್‌ ರಾಜಕುಮಾರ್‌ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.

ಪುನೀತ್‌ ಅವರ ಅಣ್ಣ, ನಟ ರಾಘವೇಂದ್ರ ರಾಜಕುಮಾರ್‌ ಪುತ್ಥಳಿ ಅನಾವರಣಗೊಳಿಸಿದರು. ರಾಘವೇಂದ್ರ ರಾಜಕುಮಾರ ಪತ್ನಿ ಮಂಗಳಾ, ನಟ ಅಜೆಯ್‌ ರಾವ್, ಸಚಿವ ಆನಂದ್‌ ಸಿಂಗ್‌, ನಿರ್ಮಾಪಕ ಸಂತೋಷ್‌ ಆನಂದ್‌ ರಾವ್‌ ಇದ್ದರು.

ಪುನೀತ್‌ ಅವರ ಅಭಿಮಾನಿಗಳು, ಅವರ ಭಾವಚಿತ್ರವಿದ್ದ ಟೀ–ಶರ್ಟ್‌, ಧ್ವಜ, ಭಾವಚಿತ್ರ ಹಿಡಿದು ಪಾಲ್ಗೊಂಡಿದ್ದರು. ‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಹಾಕಿದರು. ಹೊಸಪೇಟೆ ಕುರಿತು ಪುನೀತ್‌ ಮಾತನಾಡಿದ ಆಡಿಯೋ, ವಿಡಿಯೋ ಇದೇ ವೇಳೆ ಪ್ರಸಾರ ಮಾಡಲಾಯಿತು. ಆಗ ಅಭಿಮಾನಿಗಳ ಜಯಘೋಷ ಮತ್ತಷ್ಟು ಮುಗಿಲು ಮುಟ್ಟಿತ್ತು.

ರಾಘವೇಂದ್ರ ರಾಜಕುಮಾರ್‌ ಮಾತನಾಡಿ, ‘ನಮ್ಮ ತಂದೆ ಹೋದಾಗ ಅನಾಥರು ಅನಿಸಿರಲಿಲ್ಲ. ತಾಯಿ ಹೋದಾಗ ತಬ್ಬಲಿ ಅನಿಸಿರಲಿಲ್ಲ. ಆದರೆ, ಪುನೀತ್‌ ರಾಜಕುಮಾರ್‌ನನ್ನು ಕಳೆದುಕೊಂಡ ನಂತರ ಅನಾಥ, ತಬ್ಬಲಿ ಅನಿಸುತ್ತಿದೆ’ ಎಂದರು.

ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗರ; ಪುನೀತ್‌ ನೆನೆದು ಗಳಗಳನೆ ಅತ್ತರು
ಹೊಸಪೇಟೆ (ವಿಜಯನಗರ):
ನಗರದಲ್ಲಿ ಭಾನುವಾರ ರಾತ್ರಿ ನಡೆದ ನಟ ದಿವಂಗತ ಪುನೀತ್‌ ರಾಜಕುಮಾರ್‌ ಅವರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅವರ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತ್ತು. ಅನೇಕರು ಭಾವುಕರಾಗಿ ಗಳಗಳನೆ ಅತ್ತರು. ಹೀಗೆ ಇಡೀ ಕಾರ್ಯಕ್ರಮ ಸಂಭ್ರಮ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಪುನೀತ್‌ ಅವರ ಭಾವಚಿತ್ರ, ಅವರ ಚಿತ್ರವಿರುವ ಟೀ–ಶರ್ಟ್‌, ಧ್ವಜ, ಫಲಕಗಳೊಂದಿಗೆ ಪಾಲ್ಗೊಂಡಿದ್ದರು. ಕಾರ್ಯಕ್ರಮದುದ್ದಕ್ಕೂ ‘ಅಪ್ಪು’.. ‘ಅಪ್ಪು’.. ‘ಮತ್ತೆ ಹುಟ್ಟಿ ಬನ್ನಿ’ ಎಂದು ಜಯಘೋಷ ಕೂಗಿದರು.

ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದಲೂ ಜನ ಬಂದಿದ್ದರಿಂದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜನಜಾತ್ರೆ ಇತ್ತು. ನಿಲ್ಲುವುದಕ್ಕೂ ಜಾಗ ಇರಲಿಲ್ಲ.ಆದರೆ, ಹೇಗಾದರೂ ಮಾಡಿ ಕಾರ್ಯಕ್ರಮ ಕಣ್ತುಂಬಿಕೊಳ್ಳಬೇಕೆಂದೇ ಬಂದಿದ್ದ ಅಭಿಮಾನಿಗಳು ಅಕ್ಕಪಕ್ಕದ ಕಟ್ಟಡಗಳು, ಕಂಬಗಳು, ಕಾಂಪೌಂಡ್‌, ಮರಗಳನ್ನೇರಿ ಕುಳಿತು ವೀಕ್ಷಿಸಿದರು. ಸಂಜೆ ಐದು ಗಂಟೆಗೆ ಸಂಗೀತ ರಸಮಂಜರಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸ್ಥಳೀಯ ಕಲಾವಿದರು ಪುನೀತ್‌ ಅವರ ಚಲನಚಿತ್ರದ ಹಾಡುಗಳು ಹಾಡಿದರು. ಅದಕ್ಕೆ ನೃತ್ಯ ಮಾಡಿ ಜನರನ್ನು ರಂಜಿಸಿದರು.

ರಾತ್ರಿ 7.35ಕ್ಕೆ ಪುನೀತ್‌ ಅವರ ಅಣ್ಣ ರಾಘವೇಂದ್ರ ರಾಜಕುಮಾರ್‌, ಅವರ ಪತ್ನಿ ಮಂಗಳಾ, ನಟ ಅಜೇಯ್‌ ರಾವ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವೇದಿಕೆಗೆ ಬಂದು ಎಲ್ಲರಿಗೂ ಕೈಮುಗಿದರು. ನಂತರ ಕೆಳಗಿಳಿದು ರಿಮೋಟ್‌ ಸಹಾಯದಿಂದ ಪುತ್ಥಳಿ ಅನಾವರಣಗೊಳಿಸಿದರು. ಪುತ್ಥಳಿ ಮೇಲೆ ಹೂಮಳೆಗರೆಯಲಾಯಿತು. ಈ ವೇಳೆ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅನೇಕರು ಭಾವುಕರಾಗಿ ಕಣ್ಣೀರು ಹಾಕಿದರು. ಎದೆ ಬಡಿದುಕೊಂಡು ಪುನೀತ್‌ ನೆನೆದರು.

ಗಣ್ಯರು ಪುನಃ ವೇದಿಕೆಗೆ ಬಂದು ಪುನೀತ್‌ ಅವರ ಸಾಧನೆ ಗುಣಗಾನ ಮಾಡಿದರು. ಈ ವೇಳೆ ಜನ ಬ್ಯಾರಿಕೇಡ್‌ಗಳನ್ನು ಮುರಿದು ಗಣ್ಯರ ಗ್ಯಾಲರಿಗೆ ನುಗ್ಗಿದರು. ವೇದಿಕೆಯ ಸುತ್ತಮುತ್ತ ಜನಜಾತ್ರೆ ನೆರೆದಿತ್ತು. ಇದರಿಂದ ಗಲಿಬಿಲಿಗೊಂಡ ಮಹಿಳೆಯರು, ಹಿರಿಯ ನಾಗರಿಕರು ಸ್ಥಳದಿಂದ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜನ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಲಾಠಿ ಬೀಸಿದರು. ಸ್ವತಃ ಸಚಿವ ಆನಂದ್‌ ಸಿಂಗ್‌ ಕೂಡ ಜನರತ್ತ ಧಾವಿಸಿ, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಮನವಿ ಮಾಡಿದರು.

ಹೊಳೆದ ಸಿದ್ದಾರ್ಥ ಸಿಂಗ್‌:ಕಾರ್ಯಕ್ರಮದುದ್ದಕ್ಕೂ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಹೊಳೆದರು. ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಅವರು ಎಲ್ಲೆಡೆ ಓಡಾಡಿದರು. ಕಾರ್ಯಕ್ರಮ ನಡೆಸಿಕೊಟ್ಟ ಪ್ರತಿಯೊಬ್ಬ ಕಲಾವಿದನಿಗೂ ಸನ್ಮಾನಿಸಿದರು. ನಿರೂಪಕರು ಕೂಡ ಅವರನ್ನು ಹಾಡಿ ಹೊಗಳಿದರು. ಪ್ರಾಸ್ತಾವಿಕವಾಗಿ ಭಾಷಣ ಕೂಡ ಮಾಡಿದರು. ಆದರೆ, ಸಚಿವ ಆನಂದ್‌ ಸಿಂಗ್‌ ವೇದಿಕೆ ಮೇಲೆ ಮಾತಾಡಲಿಲ್ಲ. ಕೊನೆಯವರೆಗೂ ಅತ್ತಿಂದಿತ್ತ ಓಡಾಡುತ್ತ ಜನರನ್ನು ನಿಯಂತ್ರಿಸುವ ಕೆಲಸ ಮಾಡಿದರು.

ಪುನೀತ್‌ನಂತೆ ನಾವು ಸಾಧನೆ ಮಾಡಬೇಕು–ರಾಘವೇಂದ್ರ ರಾಜಕುಮಾರ್‌
‘ಪುನೀತ್‌ ಅವರು ಚಿಕ್ಕ ವಯಸ್ಸಿನಿಂದಲೇ ಸಾಧನೆ ಮಾಡುತ್ತ ಮೇಲೆ ಬಂದವರು. ನಾವೆಲ್ಲರೂ ಅವರ ನಿಜವಾದ ಅಭಿಮಾನಿಗಳು ಆಗಿದ್ದರೆ ಅವರಂತೆ ಸಾಧನೆ ಮಾಡಬೇಕು. ಹೊಸಪೇಟೆಯಲ್ಲಿ 4ರಿಂದ 5 ಲಕ್ಷ ಜನರಿದ್ದೀರಿ. ಪ್ರತಿಯೊಬ್ಬರೂ ಒಂದು ಸಸಿ ನೆಟ್ಟು ಬೆಳೆಸಬೇಕು. ಇಂದು ಪರಿಸರ ದಿನಾಚರಣೆ. ಈ ದಿನ ಸಂಕಲ್ಪ ಮಾಡಿದರೆ ಉತ್ತಮ. ಅಲ್ಲದೇ ಪ್ರತಿಯೊಬ್ಬರೂ ರಕ್ತದಾನ ಮಾಡಿ ಜೀವ ಉಳಿಸಬೇಕು. ಇದು ಪುನೀತ್‌ ಅವರಿಗೆ ಸಲ್ಲಿಸುವ ಗೌರವ. ಅಭಿಮಾನಿ ದೇವರುಗಳೇ ನಿಮ್ಮ ಪಾದಕ್ಕೆ ನಮಸ್ಕಾರ’ ಎಂದು ಹೇಳಿ ನಟ ರಾಘವೇಂದ್ರ ರಾಜಕುಮಾರ್‌ ಮಾತು ಮುಗಿಸಿದರು.

‘ಅಪ್ಪು ಅಭಿಮಾನಕ್ಕೆ ನಾನು ಬಂದೆ’
‘ನಾನು ಹೊಸಪೇಟೆಯವನು. ಪುನೀತ್‌ ರಾಜಕುಮಾರ್‌ ಅಭಿಮಾನಿ ಕೂಡ ಹೌದು. ಪ್ರೀತಿಯಿಂದ ಇಲ್ಲಿಗೆ ಬಂದಿರುವೆ. ಒಬ್ಬ ವ್ಯಕ್ತಿ ಇಷ್ಟೊಂದು ಜನ ಅಭಿಮಾನಿಗಳನ್ನು ಗಳಿಸಿದ್ದಾನೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅವರು ಮಾಡಿದ ಕಾರ್ಯಗಳು. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ’ ಎಂದು ನಟ ಅಜೇಯ್‌ ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT