ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | 'ಸಮಾಜಕ್ಕೆ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರ'

Published 20 ಡಿಸೆಂಬರ್ 2023, 14:31 IST
Last Updated 20 ಡಿಸೆಂಬರ್ 2023, 14:31 IST
ಅಕ್ಷರ ಗಾತ್ರ

ಹೂವಿನಹಡಗಲಿ: ‘ಬಸವಣ್ಣನವರ ಕಾಯಕ, ದಾಸೋಹ ಪರಂಪರೆಯನ್ನು ಧ್ಯೇಯವಾಗಿಸಿಕೊಂಡಿರುವ ವೀರಶೈವ ಲಿಂಗಾಯತ ಮಠಗಳು ಸಮಾಜದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ’ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.

ತಾಲ್ಲೂಕಿನ ಲಿಂಗನಾಯಕನಹಳ್ಳಿ ಜಂಗಮಕ್ಷೇತ್ರ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಮೈಲಾರ ಬಸಲಿಂಗ ಶರಣರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವೀರಶೈವ ಲಿಂಗಾಯತ ಸಮುದಾಯ ಇತರೆ ಸಮುದಾಯಗಳೊಟ್ಟಿಗೆ ಅನ್ಯೊನ್ಯ ಭಾವನೆ ಹೊಂದಿದೆ. ಸಹಬಾಳ್ವೆಯ ಬದುಕು ಕಟ್ಟಿಕೊಳ್ಳಲು ಲಿಂಗಾಯತ ಮಠಮಾನ್ಯಗಳು ಪ್ರೇರಣೆಯಾಗಿವೆ’ ಎಂದರು.

‘ಜಾತಿ ತಾರತಮ್ಯ ತೊಡೆದು ಹಾಕಿ ಸಮ ಸಮಾಜ ಕಟ್ಟುವ ಬಸವಾದಿ ಶರಣರ ಆಶಯ ಇಂದಿಗೂ ಈಡೇರಿಲ್ಲ. ಬಡವರಿಗೆ ದೇವಾಲಯ ಕಟ್ಟಲು ಸಾಧ್ಯವಾಗುವುದಿಲ್ಲವೆಂದೇ ಬಸವಣ್ಣನವರು ದೇಹವೇ ದೇಗುಲ ಎಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಿದ್ದರು. ಶರಣರ ವಚನಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಮನುಷ್ಯನ ದೇಹದ ಎಲ್ಲ ಅಂಗಗಳು ಮನಸ್ಸು ಹೇಳಿದಂತೆ ಕೇಳುತ್ತವೆ. ಪ್ರಚಂಡ ತಾಂತ್ರಿಕ ಶಕ್ತಿಗಳನ್ನು ಕಂಡು ಹಿಡಿದ ಮನುಷ್ಯನಿಗೆ ತನ್ನ ಮನಸ್ಸಿನಲ್ಲಾಗುವ ಬದಲಾವಣೆಗಳನ್ನು ಕಂಡು ಹಿಡಿಯಲಾಗಲಿಲ್ಲ’ ಎಂದರು.

ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಬೆಂಗಳೂರಿನ ಆರೋಗ್ಯಧಾಮ ಟ್ರಸ್ಟ್ ಅಧ್ಯಕ್ಷ ವೈ.ರುದ್ರಪ್ಪ ಅವರಿಗೆ ‘ಚನ್ನವೀರ ಚೇತನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶ್ರೀಮಠದ ಚನ್ನವೀರ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಕೋರಿ, ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಮುಂಡವಾಡದ, ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ, ನಿವೃತ್ತ ಪ್ರಾಚಾರ್ಯ ಕೆ.ರುದ್ರಪ್ಪ ಬಣಜಿಗ ಸಮಾಜದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT