ಹೊಸಪೇಟೆ : ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಪ್ರಮಾಣ ಬಹಳ ಕಡಿಮೆ ಇದ್ದರೂ, ವಿಜಯನಗರ ಕಾಲುವೆಗಳಿಗೆ ಮೇ ತಿಂಗಳ ವರೆಗೂ ಹರಿಸಲು 7 ಟಿಎಂಸಿ ಅಡಿಯಷ್ಟು ನೀರನ್ನು ಉಳಿಸಲೇಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ರಾಯ, ಬಸವ, ಬೆಲ್ಲ, ತುರ್ತಾ ಮತ್ತು ಕಾಳಘಟ್ಟಿ ಕಾಲುವೆಗಳ ಮೂಲಕವೇ ರೈತರು ನೀರು ಹರಿಸಿಕೊಂಡು ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ಕಾಲುವೆಗಳಿಗೆ ಐದು ನೂರು ವರ್ಷಗಳ ಇತಿಹಾಸವಿದೆ. 1956 ಜೂನ್ ತಿಂಗಳಿನಲ್ಲಿ ಆಂಧ್ರ ಪ್ರದೇಶ ಮತ್ತು ಮೈಸೂರು ರಾಜ್ಯಗಳ ನಡುವೆ ನಡೆದ ನೀರಿನ ಹಂಚಿಕೆಯ ಕರಾರಿನ ಅನ್ವಯ ಪುರಾತನ ರಾಯ, ಬಸವ, ಬೆಲ್ಲ, ತುರ್ತಾ ಮತ್ತು ಕಾಳಘಟ್ಟ ಕಾಲುವೆಗಳಿಗೆ 11 ತಿಂಗಳ ನೀರನ್ನು ಹರಿಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಹೊಸೂರು, ಇಪ್ಪೇತೇರಿ ಬೆಳಗೋಡ್, ಹಾನಗಲ್ ಎರೆಬಯಲು, ನಾಗೇನಹಳ್ಳಿ, ಕಾಳಘಟ್ಟ, ಕಳ್ಳಿರಾಂಪುರ ಮಾಗಣಿಗಳು ಸೇರಿದಂತೆ ತಾಲ್ಲೂಕಿನ ಕಮಲಾಪುರ ಪಟ್ಟಣದ ರೈತರು ವಿಜಯನಗರ ಕಾಲುವೆಗಳ ನೀರು ನೆಚ್ಚಿಕೊಂಡು 11 ತಿಂಗಳ ಬೆಳೆಗಳಾದ ಕಬ್ಬು, ಬತ್ತ, ಬಾಳೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಜಯನಗರ ಕಾಲುವೆಗಳಿಗೆ ಪ್ರತಿದಿನ 250 ಕ್ಯೂಸೆಕ್ಸ್‍ನಂತೆ 11 ತಿಂಗಳ ಕಾಲ 7 ಟಿಎಂಸಿ ನೀರನ್ನು ಮೀಸಲಿಡಬೇಕು. ಸಲಹಾ ಸಮಿತಿ ಸಭೆಯ ತೀರ್ಮಾನವನ್ನು ಬದಿಗಿಟ್ಟು, ಮುಂದಿನ ಮೇ 31ರವರೆಗೆ ನೀರನ್ನು ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಲಾಗುವುದು ಎಂದು ರೈತ ಮುಖಂಡ ಗೋಸಲ ಭರ್ಮಪ್ಪ ಹೇಳಿದ್ದಾರೆ.
ಜಲಾಶಯಕ್ಕೆ 175 ಟಿಎಂಸಿ ನೀರು ಹರಿದು ಬರುವ ಅಂದಾಜಿನ ಆಧಾರದಲ್ಲಿ ಕಳೆದ ಐಸಿಸಿ ಸಭೆಯಲ್ಲಿ ನ.30 ವರೆಗೆ ಕಾಲುವೆಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ನವೆಂಬರ್ ಬಳಿಕ ಮತ್ತೊಂದು ಸಭೆ ನಡೆಸಿ, ನೀರಿನ ಲಭ್ಯತೆ ಅನುಗುಣವಾಗಿ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತುಂಗಭದ್ರಾ ಜಲಾಶಯದ ಅಧೀಕ್ಷಕ ಎಂಜಿನಿಯರ್ ಎಲ್.ಬಸವರಾಜ್ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಜಲಾಶಯ ಭರ್ತಿಯಾಗದೆ ಈ ಬಾರಿ ರಾಜ್ಯ, ಆಂಧ್ರ, ತೆಲಂಗಾಣದವರಿಗೆ ತೊಂದರೆ ಆಗಿದೆ. ಲಭ್ಯ ಇರುವ ನೀರಲ್ಲೇ ಪ್ರೊ ರೇಟ ಸೂತ್ರದಲ್ಲಿ ಹಂಚಿಕೆ ಅನಿವಾರ್ಯ. ಹೀಗಾಗಿ ನಿಯಮ ಪಾಲಿಸಲಾಗುತ್ತಿದೆ. ಆದರೂ ವಿಜಯನಗರ ಕಾಲುವೆಗಳ ರೈತರ ಮನವಿ ಮನದಲ್ಲಿ ಇರುತ್ತದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.