ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಲಸಕ್ಕೆ ಗೈರಾದವರಿಗೆ ಕೂಲಿ ಪಾವತಿ ಸಲ್ಲ

ನರೇಗಾ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಜಿ.ಪಂ. ಸಿಇಒ ಸದಾಶಿವ ಪ್ರಭು ಬಿ
Published 26 ಮೇ 2024, 15:33 IST
Last Updated 26 ಮೇ 2024, 15:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಗೈರುಹಾಜರಿ ಆದವರ ಹೆಸರಿನಲ್ಲಿ ನರೇಗಾ ಕೂಲಿ ಪಾವತಿ ಮಾಡದಂತೆ ಗಮನಿಸಬೇಕು. ಇದರಿಂದಾಗಿ ಶ್ರಮಪಡದೆ ಕೂಲಿಯ ಹಣ ಬೇರೆಯವರಿಗೆ ತಲುಪುವುದು ತಪ್ಪಿ, ನಿಜವಾಗಿಯೂ ಹಾಜರಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಪೂರ್ಣ ಕೂಲಿ ಸಿಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು ಬಿ. ಹೇಳಿದರು.

ಅವರು ಶನಿವಾರ ಹಗರಿಬೊಮ್ಮನಹಳ್ಳಿ ತಾಲ್ಲೂಕು ಹಲಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳೇದಾಳ್ ಕೆರೆಯಲ್ಲಿ ಹೂಳು ತೆಗೆಯಲು ಬಂದಿದ್ದ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಈ ವಿಷಯ ತಿಳಿಸಿದರು.

‘ಸರ್ಕಾರ ನಿಗದಿಪಡಿಸಿದ ರೀತಿಯಲ್ಲಿ ಪ್ರತಿಯೊಬ್ಬರಿಗೆ ಪೂರ್ಣ ಕೂಲಿ ಲಭ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕೂಲಿ ಕಾರ್ಮಿಕರ ತಲೆ ಎಣಿಕೆ ಮತ್ತು ಹಾಜರಿ ಸರಿಯಾಗಿರುವುದರ ಸ್ಥಳೀಯ ಬಿಎಫ್‌ಟಿಗಳು ಖಾತ್ರಿಪಡಿಸಿಕೊಳ್ಳಬೇಕು, ಮೇಲಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ನೇರವಾಗಿ ಬಿಎಫ್‌ಟಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಲ್ಲದೇ, ಮೇಟಿಗಳನ್ನು ತೆಗೆದುಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನರೇಗ ಕೆಲಸಕ್ಕೆ ಬರುವವರು ಬೆಳಿಗ್ಗೆ ಹೊಟ್ಟೆ ತುಂಬಾ ಊಟ ಮಾಡಿ ಅಥವಾ ತಿಂಡಿ ತಿಂದು ಬರಬೇಕು ಎಂದು ಅವರು ಸಲಹೆ ನೀಡಿದರು.

ದಶಮಾಪುರ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ನಿರ್ಮಿಸಲಾದ ಎನ್ಆರ್‌ಎಲ್‌ಎಂ ಸಂಜೀವಿನಿ ಕಟ್ಟಡ, ಜೆಜೆಎಂ ಯೋಜನೆಯಡಿ ನಿರ್ಮಿಸಿರುವ ಮೇಲ್ಮಟ್ಟದ ಜಲಾಗಾರ, ಹೊಸಕೆರೆ ಗ್ರಾಮದಲ್ಲಿನ ಬೂದು ನೀರು ನಿರ್ವಹಣಾ ನಿರ್ಮಾಣ ಕಾಮಗಾರಿ, ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಹೈಟೆಕ್ ಶೌಚಾಲಯ, ಶಾಲಾ ಕಾಂಪೌಂಡ್ ಕಾಮಗಾರಿಗಳನ್ನು ವೀಕ್ಷಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ ಪರಮೇಶ್ವರ್, ಸಹಾಯಕ ನಿರ್ದೇಶಕರು (ನರೇಗಾ) ರಮೇಶ್ ಮಹಾಲಿಂಗಪುರ, ಪಿಡಿಒ ನವೀನ್ ಕುಮಾರ್ ಆರ್.ಡಿ., ತಾಂತ್ರಿಕ ಸಂಯೋಜಕ ದೇವೇಂದ್ರ ನಾಯ್ಕ, ತಾಂತ್ರಿಕ ಸಹಾಯಕರಾದ ನಾಗಭೂಷಣ, ಚಂದ್ರಶೇಖರ, ಬಿಎಫ್‌ಟಿಗಳಾದ ಮೈಲಪ್ಪ ಮತ್ತು ಕೊಟ್ರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT