ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಸ್ಯಾಟಲೈಟ್’ ತಪ್ಪಿದ ಸಂಚಾರ ದಟ್ಟಣೆ

233 ಬಸ್‌ಗಳ ಕಾರ್ಯಾಚರಣೆ; ಸಿಟಿ ಬಸ್ ಸೌಲಭ್ಯ
Last Updated 12 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿಯ ಅಥಣಿ ರಸ್ತೆಯ ಗೋದಾವರಿ ಹೋಟೆಲ್‌ ಬಳಿ ನಿರ್ಮಿಸಿರುವ ‘ಸ್ಯಾಟಲೈಟ್‌’ ಬಸ್‌ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿರುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ.

ಮಿರಜ್, ಸಾಂಗಲಿ, ಕೊಲ್ಲಾಪುರ, ಸಾತಾರ, ಪುಣೆ, ಮುಂಬಯಿ, ಜತ್ತ, ಚಿಕ್ಕೋಡಿ, ಬೆಳಗಾವಿ ಮಾರ್ಗಗಳಲ್ಲಿ ಸಂಚರಿಸುವ ಆರ್ಡಿನರಿ, ಎಕ್ಸ್‌ಪ್ರೆಸ್‌ ಮತ್ತು ಅಂತರರಾಜ್ಯ ಬಸ್‌ಗಳು ಇದೀಗ ಸ್ಯಾಟಲೈಟ್‌ ಬಸ್‌ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುತ್ತಿರುವ ಕಾರಣ ನಗರದಲ್ಲಿ ಸಂಚಾರ ದಟ್ಟಣೆ ಕಿರಿಕಿರಿ ತಪ್ಪಿದಂತಾಗಿದೆ.

‘ಸದ್ಯ, ಪ್ರತಿನಿತ್ಯ 233 ಬಸ್‌ಗಳು ಸ್ಯಾಟಲೈಟ್‌ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡುತ್ತಿವೆ. ಮಿರಜ್, ಸಾಂಗಲಿ, ಕೊಲ್ಲಾಪುರ, ಸಾತಾರ, ಪುಣೆ, ಮುಂಬಯಿ, ಜತ್ತ, ಚಿಕ್ಕೋಡಿ, ಬೆಳಗಾವಿ ಮಾರ್ಗಗಳಿಂದ ಬರುವ ಮತ್ತು ಹೋಗುವ ಬಸ್‌ಗಳು ಇಲ್ಲಿಗೇ ಬರುತ್ತವೆ. ಹೀಗಾಗಿ, ನಗರ ಕೇಂದ್ರ ಬಸ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಿದೆ. ಅಲ್ಲದೆ, ನಗರ ಪ್ರದೇಶದಲ್ಲಿ ಸಂಚಾರ ದಟ್ಟಣೆ ತಗ್ಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಪ್ರಯಾಣಿಕರು ನಗರ ಕೇಂದ್ರ ಬಸ್ ನಿಲ್ದಾಣದಿಂದ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ತೆರಳುತ್ತಾರೆ. ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಪ್ರತಿ ಮೂರು ನಿಮಿಷಕ್ಕೆ ಒಂದು ಸಿಟಿ ಬಸ್‌ಗಳನ್ನು ಬಿಡಲಾಗುತ್ತಿದೆ. ಮಧ್ಯಾಹ್ನ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ಬಸ್‌ ಸೇವೆ ಒದಗಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ ಬಸ್ ನಿಲ್ದಾಣದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ₹6 ಪ್ರಯಾಣ ದರ ನಿಗದಿಪಡಿಸಿದ್ದಾರೆ. ರಾತ್ರಿ ವೇಳೆ ಸಂಚರಿಸುವ ಬಸ್‌ಗಳು ಕೇಂದ್ರ ಬಸ್ ನಿಲ್ದಾಣಕ್ಕೆ ಬರುವುದರಿಂದ ಅನುಕೂಲವಾಗಿದೆ. ನಗರ ಬೆಳೆದಂತೆ ಸಂಚಾರ ದಟ್ಟಣೆ ವಿರೀತವಾಗಿದ್ದು, ಅದನ್ನು ತಪ್ಪಿಸಲು ಸ್ಯಾಟಲೈಟ್‌ ಬಸ್‌ ನಿಲ್ದಾಣವನ್ನು ನಿರ್ಮಿಸಿರುವುದು ಒಳ್ಳೆಯ ಕೆಲಸ’ ಎಂದು ಪ್ರಯಾಣಿಕ ಸುರೇಶ ನಾಯಕ ಹೇಳಿದರು.

‘ಸ್ಯಾಟಲೈಟ್ ಬಸ್ ನಿಲ್ದಾಣದ ಆವರಣದಲ್ಲಿ ಕ್ಯಾಂಟೀನ್, ಬೇಕರಿ, ಬುಕ್ ಸ್ಟಾಲ್‌ಗಳನ್ನು ಆರಂಭಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

*
ನಗರ ಕೇಂದ್ರ ಬಸ್ ನಿಲ್ದಾಣದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಪ್ರಯಾಣಿಸಲು ಸಿಟಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ.
-ಎಸ್.ಜಿ.ಗಂಗಾಧರ,ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT