ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಲಾಕ್‌ಡೌನ್‌ಗೆ ಟಾಂಗಾವಾಲಾ ಬದುಕು ಅಂತಂತ್ರ

ಟಾಂಗಾ ಸಂಚಾರ ಸ್ತಬ್ಧ; ಕುದುರೆಗಳಿಗೆ ಮೇವಿಗೂ ಪರದಾಟ
Last Updated 4 ಮೇ 2020, 1:54 IST
ಅಕ್ಷರ ಗಾತ್ರ

ವಿಜಯಪುರ: ನಗರದ ಐತಿಹಾಸಿಕ ತಾಣಗಳ ವೀಕ್ಷಣೆಗೆ ರಾಜ್ಯ, ಹೊರರಾಜ್ಯಗಳಿಂದ ಪ‍್ರತಿನಿತ್ಯ ಬರುವವರನ್ನು ಟಾಂಗಾಗಳಲ್ಲಿ ಕೂರಿಸಿಕೊಂಡು ಸುತ್ತಾಡಿಸುವ ಮೂಲಕ ಪ್ರವಾಸವನ್ನು ಅವಿಸ್ಮರಣೀಯವಾಗಿಸುತ್ತಿದ್ದ ಟಾಂಗಾವಾಲಾಗಳ ಬದುಕು ಕೊರೊನಾ ಲಾಕ್‌ಡೌನ್‌ನಿಂದ ಅಕ್ಷರಶಃ ಅತಂತ್ರವಾಗಿದೆ.

ಹೌದು, ನಗರದಲ್ಲಿ ಸಾವಿರಾರು ಆಟೊ, ಟಂಟಂ, ಕಾರುಗಳಿದ್ದರೂ ಸಾಂಪ್ರದಾಯಿಕ ಟಾಂಗಾಗಳಲ್ಲಿ ಪ್ರವಾಸಿಗರು ಕುಳಿತು ತಮ್ಮನ್ನ ತಾವು ಮರೆತು ನಗರವನ್ನು ಪ್ರದಕ್ಷಿಣೆ ಹಾಕಿ ಆನಂದಿಸುತ್ತಿದ್ದರು. ಇದನ್ನೇ ನಂಬಿಕೊಂಡಿರುವ ನೂರಾರು ಟಾಂಗಾವಾಲಾಗಳ ಬದುಕು ನಿರಾಳವಾಗಿತ್ತು.

ಪ್ರವಾಸಕ್ಕಾಗಿ ರೈಲು, ಬಸ್‌ಗಳ ಮೂಲಕ ಬರುವರನ್ನು ತಮ್ಮ ಟಾಂಗಾದಲ್ಲಿ ಕೂರಿಸಿಕೊಂಡು ವಿಶ್ವವಿಖ್ಯಾತ ಗೋಳಗುಮ್ಮಟ, ಬಾರಾ ಕಮಾನ್‌, ಜೋಡು ಗುಮ್ಮಟ, ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ, ಗಗನ್‌ ಮಹಾಲ್‌ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಒಂದು ಸುತ್ತು ಹಾಕಿಸುವ ಮೂಲಕ ದಿನವೊಂದಕ್ಕೆ ₹500ರಿಂದ ₹700ರ ವರೆಗೆ ಸಂಪಾದನೆ ಮಾಡುತ್ತಿದ್ದರು.

ವಿಜಯಪುರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡುವ ಪ್ರವಾಸಿಗರು ಅದರಲ್ಲೂ ಚಿಣ್ಣರು ಈ ಟಾಂಗಾಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದರು. ಇದರಿಂದ ನೂರಾರು ಟಾಂಗಾವಾಲಾಗಳ ಬದುಕು ಸುಗಮವಾಗಿತ್ತು. ‌

ಲಾಕ್‌ಡೌನ್‌ ಆದ ಬಳಿಕ ಸಂಚಾರ ಸ್ತಂಬ್ಧಗೊಂಡು ಟಾಂಗಾ ಮೂಲೆ ಸೇರಿವೆ. ಹೀಗಾಗಿ ನಯಾ ಪೈಸೆ ದುಡಿಮೆ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿರುವ ಟಾಂಗಾವಾಲಾಗಳಿಗೆ ಕುದುರೆಗಳ ಹೊಟ್ಟೆಗೆ ಮೇವು ಹಾಕಲು ಆಗದ ಸ್ಥಿತಿ ತಲೆದೋರಿದೆ.

ತಮ್ಮ ಸಂಕಷ್ಟವನ್ನು ‘ಪ್ರಜಾವಾಣಿ’ಯೊಂದಿಗೆ ತೋಡಿಕೊಂಡ ಪೈಲ್ವಾನ್‌ ಗಲ್ಲಿಯ ಟಾಂಗಾವಾಲಾ ಅಹ್ಮದ್‌ ಹಕಿಂ, ದಿನಕ್ಕೆ ಒಂದು ಕುದುರೆಗೆ ಹಿಂಡಿ, ಕಣಕಿ ಸೇರಿದಂತೆ ಮೇವಿಗೆ ₹ 150ರಿಂದ ₹200 ಬೇಕು. ಆದರೆ, ನಯಾಪೈಸೆ ದುಡುಮೆ ಇಲ್ಲದ ಈ ದಿನಗಳಲ್ಲಿ ಕುದುರೆ ಸಾಕುವುದೇ ಕಷ್ಟವಾಗಿದೆ. ಸರ್ಕಾರ ಪಡಿತರ ಕೊಡುತ್ತಿರುವುದರಿಂದ ನಮ್ಮ ಬದುಕು ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಟಂಟಂ, ಆಟೊಗಳ ಹಾವಳಿಯಿಂದ ಟಾಂಗಾಗಳ ಸಂಖ್ಯೆ ಕಡಿಮೆಯಾಗುತ್ತಿದೆ. ದಶಕದ ಹಿಂದೆ 500ಕ್ಕೂ ಹೆಚ್ಚು ಇದ್ದ ಟಾಂಗಾ ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ 100ಕ್ಕೆ ತಗ್ಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT