ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಬೌದ್ದರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ: ಸಾಹಿತಿ ಪ್ರೊ.ಎಚ್.ಟಿ.ಪೋತೆ

Published 29 ಜುಲೈ 2023, 9:52 IST
Last Updated 29 ಜುಲೈ 2023, 9:52 IST
ಅಕ್ಷರ ಗಾತ್ರ

ವಿಜಯಪುರ: ನವ ಬೌದ್ದರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಎಚ್.ಟಿ.ಪೋತೆ ಅವರು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.

ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡಬೇಕು ಎಂದರು.

ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನವ ಬಳಕೆ ಬದಲು ಯಂತ್ರೋಪಕರಣ ಬಳಸುವುದಾಗಬೇಕು.‌ಯಾರು ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಪರ್ಯಾಯ ಉದ್ಯೋಗಗಳನ್ನು ನೀಡಬೇಕು ಎಂದರು.

ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಕಡ್ಡಾಯದ ಜೊತೆಗೆ ಶೋಷಿತ ವರ್ಗದ ಸಾಹಿತ್ಯ, ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳು ಮನವರಿಕೆ ಮಾಡುವುದರಿಂದ ಅವರಲ್ಲಿ ಮಾನವೀಯ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ ಎಂದರು.

ಸಂವಿಧಾನ ಸುಡುವ, ಮಹಾತ್ಮ ಗಾಂಧೀಜಿಯ ಅಣಕು ಹತ್ಯೆ ಮಾಡುವುದು ಸರ್ವೆ ಸಾಮಾನ್ಯವಾದ ಈ ಕಾಲದಲ್ಲಿ ಅಂತಹ ಶಕ್ತಿಗಳಿಗೆ ಬುದ್ದಿ ಕಲಿಸಬೇಕು, ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು ಸರ್ಕಾರದಿಂದ, ಸಾರ್ವಜನಿಕರಿಂದ ಆಗಬೇಕಿದೆ ಎಂದರು.

ದೇವಾಲಯಗಳು ಅಸಮಾನತೆಯ ಕೇಂದ್ರಗಳಾಗಿ ನೆಲೆ ನಿಂತಿರುವುದರಿಂದ ಸಾಮಾಜಿಕ ವಿಘಟನೆಗೆ, ಸಂಘರ್ಷಕ್ಕೆ ಕಾರಣವಾಗುತ್ತಿರುವುದರಿಂದ ಇಂಥ ಅವಮಾನಿಸುವ ಕೇಂದ್ರಗಳ ಪೋಷಣೆಗೆ ಸರ್ಕಾರ‌ ಮುಂದಾಗಬಾರದು. ಮುಕ್ತ ಪ್ರವೇಶದ ಜೊತೆಗೆ ಮೀಸಲಾತಿ ನಿಯಮ ದೇವಾಲಯಗಳಲ್ಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಡುಗೆ ಮನೆಯಲ್ಲಿ ಒಂದೇ ಸೌಟನ್ನು ಸಸ್ಯಾಹಾರಕ್ಕೆ, ಮಾಂಸಾಹಾರಕ್ಕೆ ಬಳಸಬಾರದು ಎಂಬ ಸುಧಾ‌ಮೂರ್ತಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ನಿಮ್ಮ(ಸುಧಾಮೂರ್ತಿ) ಮನೆಯಲ್ಲಿ ಪೂಜಿಸುವ

ದೇವಾನುದೇವತೆಗಳು ಯಾವ ಪ್ರಾಣಿಗಳ ಮೇಲೆ ಕುಳಿತಿವೆ. ಅವು ಮಾಂಸಾಹಾರಿ ಪ್ರಾಣಿಗಳಲ್ಲವೇ, ಅಂತಹ ಫೋಟೊಗಳನ್ನು ಮನೆಯಲ್ಲಿ ಏಕೆ ಇಟ್ಟಿದ್ದೀರಿ, ಕಿತ್ತೆಸೆಯಿರಿ ಎಂದು ಸವಾಲು ಹಾಕಿದರು.

ಮೇಲ್ವರ್ಗದ‌ ಸಾಹಿತಿ, ಚಿಂತಕರ ಹೆಸರಲ್ಲಿ ಅನೇಕ ಪ್ರತಿಷ್ಠಾನ ಗಳು ಆರಂಭವಾಗಿವೆ. ಆದರೆ,

ದಲಿತ ಸಾಹಿತಿಗಳು, ಚಿಂತಕರ ಹೆಸರಲ್ಲಿ ಯಾವುದೇ ಒಂದು ಪ್ರತಿಷ್ಠಾನ ಇಲ್ಲ, ಸರ್ಕಾರವೇ ದಲಿತ ಲೇಖಕರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಸಮಾಜದ ಮೇಲ್ವರ್ಗದವರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ತಮ್ಮ ಸಮೀಪಕ್ಕೆ ಕರೆದುಕೊಳ್ಳಬೇಕಾಗಿದೆ. ನೀರು, ಆಹಾರ, ವಿವಾಹಗಳ ಮೂಲಕ ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಿದೆ ಎಂದರು.

'ಭಾರತ ಪ್ರಕಾಶಿಸುತ್ತಿದೆ', 'ಸಬಕಾ ಸಾಥ್ ಸಬಕಾ ವಿಕಾಸ್' ಎಂಬ ಘೋಷ ವಾಕ್ಯಗಳು ಇಂದು ವಿಜೃಂಭಿಸುತ್ತಿವೆ. ಆದರೆ, ಬಡತನ ಎಲ್ಲ ಸಮುದಾಯಗಳಲ್ಲೂ ಹಾಗೆಯೇ ಸಾಗಿದೆ ಎಂದರು.

ಭಾರತ ಇಂದು ಅಂಗವೈಕಲ್ಯವಾಗಿದೆ. ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ.‌ ಆದರೆ, ದೇಶದ ಮಹಿಳೆಯರು ಧ್ವನಿ ಎತ್ತದಿರುವುದು ನಾಚಿಕೆಗೇಡು ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಅಲ್ಲಾಗಿರಿರಾಜ ಮಾತನಾಡಿ, ‘ಡಬಲ್ ಎಂಜಿನ್ ಸರ್ಕಾರ, ತ್ರಿಬಲ್ ಎಂಜಿನ್ ಸರ್ಕಾರಗಳ ಪರಿಣಾಮದಿಂದ ಇಂದು ಬರಹಗಾರರಿಗೆ ಪ್ರತ್ಯೇಕ ಬಂಧಿಖಾನೆ ಕಟ್ಟಬೇಕಾದ ಸಂದರ್ಭ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಇಂದು ಚಡ್ಡಿ, ಸೀರೆ ಮಾರುವ ಸಮ್ಮೇಳನಗಳು ಹೆಚ್ಚಾಗಿವೆ. ಪುಸ್ತಕ ಮಾರುವ ಸಮ್ಮೇಳನ ಕಡಿಮೆಯಾಗತೊಡಗಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT