ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ ಪಟ್ಟಣಕ್ಕೆ 24X7 ನೀರು ಪೂರೈಕೆ: ನಡಹಳ್ಳಿ ಭರವಸೆ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ನಡಹಳ್ಳಿ ಭರವಸೆ
Last Updated 2 ಮಾರ್ಚ್ 2023, 15:13 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣಕ್ಕೆ ನಿರಂತರ(24X7) ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭರವಸೆ ನೀಡಿದರು.

ಪಟ್ಟಣದ ಟಾಪ್ ಇನ್ ಟೌನ್ ಕನ್ವೆನ್ಷನ್ ಹಾಲ್‍ನಲ್ಲಿ ಹೆವನ್ ಸಿಟಿ ಬಡಾವಣೆಯ ನಾಗರಿಕರು ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮುದ್ದೇಬಿಹಾಳ ಪಟ್ಟಣ ಹೆವನ್ ಸಿಟಿ ಆಗಬೇಕು ಅನ್ನೋದು ನನ್ನ ಕನಸು. ಇಲ್ಲಿರುವ 62 ಗಾರ್ಡನ್‍ಗಳನ್ನು ಸೌಂದರ್ಯಿಕರಣಗೊಳಿಸಲು ಪ್ರತಿಯೊಂದು ಸಮಾಜಕ್ಕೆ ದತ್ತು ಕೊಡುವ ವಿಚಾರ ಇದೆ. ಮುಂದಿನ ಐದು ವರ್ಷದಲ್ಲಿ ಇದನ್ನು ಮಾಡಿ ತೋರಿಸುತ್ತೇನೆ ಎಂದರು.

ಮುಂದಿನ 2-3 ವರ್ಷಗಳಲ್ಲಿ ಈ ಭಾಗದ ಒಂದು ಸಾವಿರ ಎಕರೆ ಜಮೀನಿನಲ್ಲಿ ಕೈಗಾರಿಕೆ ತರುವ ಕುರಿತು ಈಗಾಗಲೇ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.

‘ವಿದ್ಯೆ ಎಲ್ಲಾದರೂ ಕಲಿಯೋಣ, ಉದ್ಯೋಗ ನಮ್ಮೂರಲ್ಲೇ ಮಾಡೋಣ’ ಅನ್ನೋದು ನನ್ನ ಧ್ಯೇಯವಾಗಿದೆ ಎಂದು ಹೇಳಿದರು.

ಹೆದರಿಸಿ, ಬೆದರಿಸಿ ರಾಜಕಾರಣ ಮಾಡುವ ಕಾಲ ಹೋಗಿದೆ. ದ್ವೇಷದ ರಾಜಕಾರಣದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಪ್ರೀತಿಯಿಂದಲೇ ಎಲ್ಲರನ್ನೂ ಗೆಲ್ಲಬೇಕು. ನಾನು ಮುಖ್ಯಮಂತ್ರಿಯವರ ಬಳಿ ಅಧಿಕಾರ ಕೇಳಿಲ್ಲ, ನನ್ನ ಜನರ ಕೆಲಸಕ್ಕೆ ಅನುದಾನ ಕೇಳಿದ್ದೇನೆ ಎಂದರು.

ನನ್ನನ್ನು ವಿರೋಧಿಸುವವರ, ಟೀಕಿಸುವವರ ಮನೆ ಮುಂದಿನ ಸಿಸಿ ರಸ್ತೆಯನ್ನು ಮಾಡಿದ್ದು ನಾನೇ ಆಗಿರುವುದರಿಂದ ನ್ಯಾಯವಾಗಿ ಅವರು ತಮ್ಮ ವೋಟನ್ನೂ ನನಗೇ ಹಾಕಬೇಕು. ಮುಂದಿನ ಚುನಾವಣೆಯಲ್ಲಿ ಕನಿಷ್ಠ ಒಂದು ಲಕ್ಷ ಮತಗಳಿಂದ ಗೆದ್ದು ಬರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ರಾಜಕಾರಣಿಯ ಕಟೌಟ್, ಬ್ಯಾನರ್‌ಗಳನ್ನು ಪಟ್ಟಣದ ರಸ್ತೆ ವಿಭಜಕದ ಮಧ್ಯೆದ ವಿದ್ಯುತ್ ಕಂಬಗಳಿಗೆ ಹಾಕಲು ಅವಕಾಶ ಕೊಡದಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.

ಮೆಹೆಬೂಬನಗರ, ಅವಟಿಗಲ್ಲಿ ಬಡಾವಣೆಯ ಜನರು 25 ವರ್ಷ ಒಬ್ಬರಿಗೇ ಮತ ಹಾಕಿದರೂ ಅವರಿಗೇನು ಸಿಕ್ಕಿದೆ ಅನ್ನೋ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಆ ಬಡಾವಣೆಗಳನ್ನು ಹೆವನ್ ಸಿಟಿ ಮಾಡುತ್ತೇನೆ. ಒಂದು ವೇಳೆ ಅವರು ನನಗೆ ವೋಟ್ ಹಾಕದಿದ್ದರೂ ಆ ಸಮಾಜವನ್ನು ದ್ವೇಷಿಸುವುದಿಲ್ಲ ಎಂದರು.

ಹೆವನ್ ಸಿಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಶಿಧರ ಹಾಲ್ಯಾಳ ಮಾತನಾಡಿ, ಆಂತರಿಕ ರಸ್ತೆಗಳ ಅಭಿವೃದ್ಧಿಗೆ ನಾವು ಮಂಡಿಸಿದ್ದ ಬೇಡಿಕೆ ಮನ್ನಿಸಿ ಶಾಸಕರು ರಸ್ತೆಯನ್ನು ಸುಂದರವಾಗಿ ಮಾಡಿದ್ದಾರೆ. ಹೆವನ್ ಸಿಟಿ ಸುಂದರ ಬಡಾವಣೆಯನ್ನಾಗಿಸುವ ನಮ್ಮ ಕನಸಿಗೆ ಶಾಸಕರು ಸ್ಪಂದಿಸುವ ವಿಶ್ವಾಸ ಇದೆ ಎಂದರು.

ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಶಾಸಕರಿಂದಾಗಿ ಹುಡ್ಕೋ ಚಿತ್ರಣವೇ ಬದಲಾಗಿದೆ. ಶಾಸಕರಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ನಮ್ಮ ಪಟ್ಟಣಗಳು ಸುಂದರವಾಗಿ ಬದಲಾಗಿವೆ ಎಂದರು.

ಬಿಜೆಪಿ ಮುಖಂಡ ಸಿದ್ದರಾಜ ಹೊಳಿ, ಪ್ರಮುಖರಾದ ರಮೇಶ ಢವಳಗಿ, ಪುರಸಭೆ ಸದಸ್ಯ ಬಸವರಾಜ ಮುರಾಳ, ರಾಜೇಂದ್ರಗೌಡ ರಾಯಗೊಂಡ, ಎಂ.ಜಿ.ಬಿರಾದಾರ, ಅಪ್ಪುಗೌಡ ಮೈಲೇಶ್ವರ, ಹೆಚ್ಚುವರಿ ಸರ್ಕಾರಿ ವಕೀಲರಾದ ಎಂ.ಆರ್.ಪಾಟೀಲ, ಕರ್ನಾಟಕ ಮುಸ್ಲಿಂ ಕೌನ್ಸಿಲ್ ಜಿಲ್ಲಾಧ್ಯಕ್ಷ ಎಂ.ಆರ್.ಮುಲ್ಲಾ, ಶ್ರೀಶೈಲ ದೊಡಮನಿ ರೂಢಗಿ, ಎಂ.ಎಚ್.ಹಾಲ್ಯಾಳ, ಮುಖ್ಯಾಧ್ಯಾಪಕ ಆರ್.ಜಿ.ನಲವಡೆ ಇದ್ದರು.

***

ನನ್ನ ಸಹೋದರನೊಬ್ಬನಿಗೆ 100 ಎಕರೆ ಜಮೀನು ಮಾಡಿಕೊಟ್ಟಿದ್ದೇನೆ. ಅವನೇ ನಿತ್ಯವೂ ನನ್ನನ್ನು ಟೀಕಿಸುತ್ತಾನೆ. ಆದರೆ, ಒಂದು ರಸ್ತೆ ಮಾಡಿಕೊಟ್ಟಿದ್ದಕ್ಕೆ ನೀವು ಸನ್ಮಾನಿಸುತ್ತಿರುವುದು ಖುಷಿ ನೀಡಿದೆ

–ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT