ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌: ಬಿಜೆಪಿ ಸರ್ಕಾರದ ಆಡಳಿತದಲ್ಲಿ ₹40 ಸಾವಿರ ಕೋಟಿ ಅಕ್ರಮ– ಯತ್ನಾಳ ಆರೋಪ

ಬಿಜೆಪಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ
Published : 26 ಡಿಸೆಂಬರ್ 2023, 22:42 IST
Last Updated : 26 ಡಿಸೆಂಬರ್ 2023, 22:42 IST
ಫಾಲೋ ಮಾಡಿ
Comments

ವಿಜಯಪುರ: ‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ ₹40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕೋವಿಡ್‌ ವೇಳೆ ₹45 ಮೌಲ್ಯದ ಒಂದು ಮಾಸ್ಕ್‌ಗೆ ₹485 ಬಿಲ್ ಹಾಕಲಾಯಿತು. ಎಲ್ಲದಕ್ಕೂ ಮನಬಂದಂತೆ ದರ ನಿಗದಿಪಡಿಸಿ, ಬಡವರನ್ನು ಶೋಷಿಸಿದ್ದಾರೆ’ ಎಂದು ಹರಿಹಾಯ್ದರು. 

‘ಬೆಂಗಳೂರಿನಲ್ಲಿ 10 ಸಾವಿರ ಬೆಡ್‌ಗಳನ್ನು ಬಾಡಿಗೆಗೆ ಪಡೆದು, ಒಂದು ಬೆಡ್‌ಗೆ ದಿನಕ್ಕೆ ₹20 ಸಾವಿರ ಬಾಡಿಗೆ ದರ ನಿಗದಿ ಮಾಡಲಾಯಿತು. ಬಾಡಿಗೆ ಹಣ ಕೊಡುವ ಬದಲು ಅದೇ ದರದಲ್ಲಿ ಎರಡು ಬೆಡ್‌ ಖರೀದಿಸಬಹುದಿತ್ತು’ ಎಂದರು.

‘ಕೋವಿಡ್ ತಗುಲಿದ್ದ ರೋಗಿಗಳಿಗೆ ₹8 ಲಕ್ಷದಿಂದ ₹10 ಲಕ್ಷದವರೆಗೆ ಬಿಲ್‌ ಮಾಡಲಾಯಿತು. ನಮ್ಮದೇ ಬಿಜೆಪಿ ಸರ್ಕಾರವಿದ್ದರೂ ಕಳ್ಳರು ಕಳ್ಳರೇ ತಾನೇ? ಇದನ್ನು ಯಡಿಯೂರಪ್ಪ ಅವರ ಬಗ್ಗೆ ವಿಧಾನಸೌಧದಲ್ಲಿಯೇ ಹೇಳಿದ್ದೇನೆ. ಈ ಕುರಿತಂತೆ ನನ್ನಲ್ಲಿ ಇನ್ನಷ್ಟು ವಿಷಯಗಳಿವೆ. ಎಲ್ಲವನ್ನೂ ಬಯಲು ಮಾಡುತ್ತೇನೆ’ ಎಂದರು.

‘ಕೋವಿಡ್‌ ತಗುಲಿದಾಗ ನನಗೇ ₹5 ಲಕ್ಷ ಬಿಲ್‌ ಮಾಡಲಾಯಿತು. ನಾನು ಅಷ್ಟು ಖರ್ಚು ಮಾಡಿದೆ. ಆದರೆ, ಸರ್ಕಾರದಿಂದ ಈವರೆಗೆ ಮರುಪಾವತಿ ಮಾಡಿಕೊಂಡಿಲ್ಲ. ಆದರೆ, ಇಷ್ಟು ಹಣ ಬಡವರಿಂದ ಪಾವತಿಸಲು ಆಗುವುದೇ’ ಎಂದು ಪ್ರಶ್ನಿಸಿದರು. 

‘ಸತ್ಯವನ್ನು ಹೇಳಿದರೆ ಎಲ್ಲರಿಗೂ ಭಯ. ಎಲ್ಲರೂ ಕಳ್ಳರಾದರೆ, ರಾಜ್ಯ ಮತ್ತು ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ’ ಎಂದರು.

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ ಜನವರಿ 5ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅವರ ನಂತರ ಅಪ್ಪಾಜಿಯದ್ದೇ ಪ್ರಕರಣ ಹೊರ ತೆಗೆಯುವೆ’ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹೇಳಿದರು.

ನನಗೆ ನೋಟಿಸ್‌ ನೀಡಿ ಪಕ್ಷದಿಂದ ಉಚ್ಚಾಟಿಸಿ ನೋಡಲಿ ಆಗ ಇವರೆಲ್ಲರ ಬಣ್ಣ ಬಯಲು ಮಾಡುವೆ. ಅವ್ಯವಹಾರ ಎಲ್ಲವನ್ನೂ ಬಹಿರಂಗಪಡಿಸುವೆ
ಬಸನಗೌಡ ಪಾಟೀಲ, ಯತ್ನಾಳ ಬಿಜೆಪಿ ಶಾಸಕ

ಕೋವಿಡ್‌ ಅಕ್ರಮ ತನಿಖೆಗೆ ತಂಡ ರಚನೆ–ಸಚಿವ

‘ಕೋವಿಡ್‌ ಸಮಯದಲ್ಲಿ ನಡೆದಿದ್ದ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ತನಿಖಾ ತಂಡ ರಚಿಸಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಕ್ಕೆ ಮಂಗಳವಾರ ಹೀಗೆ ಪ್ರತಿಕ್ರಿಯೆ ನೀಡಿದರು. ‘ತನಿಖಾ ತಂಡದಿಂದ ವರದಿ ಸಲ್ಲಿಕೆಯಾದ ಬಳಿಕ ಪ್ರತಿಕ್ರಿಯಿಸುವೆ’ ಎಂದರು.

ಕೇಂದ್ರ ನಾಯಕರಿಗೂ ಪಾಲಿದೆಯೇ?: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ‘ತಮ್ಮನ್ನು ಚೌಕೀದಾರ ಎಂದು ಬಣ್ಣಿಸಿಕೊಳ್ಳುವ, ನ ಖಾವೂಂಗಾ ನಾ ಖಾನೆ ದೂಂಗಾ ಎಂದು ಗುಟುರು ಹಾಕುವ ಪ್ರಧಾನಿ ನರೇಂದ್ರ ಮೋದಿ ಅವರೂ ತಮ್ಮದೇ ಪಕ್ಷದ ನಾಯಕ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮೌನವಾಗಿರುವುದು ನಿಗೂಢವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ ಆರೋಪದ ಬಗ್ಗೆ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ದಲ್ಲಿ ಕೇಂದ್ರದ ನಾಯಕರಿಗೂ ಪಾಲು ಹೋಗಿದೆ ಎನ್ನುವ ಆರೋಪಕ್ಕೆ ಎಡೆ ಮಾಡಿಕೊಡುವುದಿಲ್ಲವೇ ಪ್ರಧಾನಿಯವರೇ’ ಎಂದು ಕುಟುಕಿದ್ದಾರೆ.

‘ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಂದಾಜು ₹40 ಸಾವಿರ ಕೋಟಿ ಭ್ರಷ್ಟಾಚಾರ ಎಸಗಿದೆ ಎಂದು  ಯತ್ನಾಳ ಅವರು ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಸರ್ಕಾರ ಶೇ 40ರ ಕಮಿಷನ್ ಸರ್ಕಾರವಾಗಿತ್ತು ಎನ್ನುವ ನಮ್ಮ ಆರೋಪಕ್ಕೆ ಸಾಕ್ಷ್ಯ ಒದಗಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಕೋವಿಡ್‌ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ ₹4,000 ಕೋಟಿ ಅಕ್ರಮ ಮಾಡಿದೆ ಎಂದು ದಾಖಲೆ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ ಆರೋಪ ಗಮನಿಸಿದರೆ ನಮ್ಮ ಅಂದಾಜಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಮ್ಮ ಆರೋಪ ಕೇಳಿ ಹೌಹಾರಿ ಬಂದು ಆಗ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ’ ಎಂದು ಸಿದ್ದರಾಮಯ್ಯ ಕೆಣಕಿದ್ದಾರೆ.

‘ಯತ್ನಾಳ ಅವರು ಹಿಟ್ ಎಂಡ್ ರನ್ ಮಾಡಬಾರದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯನ್ನು ಅವರು ಹೊಂದಿದ್ದರೆ ತಮ್ಮ ಆರೋಪವನ್ನು ತಾರ್ಕಿಕ ಅಂತ್ಯದೆಡೆಗೆ ಒಯ್ಯಬೇಕು. ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಇರುವ ಎಲ್ಲ ಮಾಹಿತಿಯನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಒಪ್ಪಿಸಬೇಕು’ ಎಂದೂ ಅವರು ಹೇಳಿದ್ದಾರೆ.

ಯತ್ನಾಳ ಅವರು ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಹಿಂದಿನ ಸರ್ಕಾರದ ಸಂಪುಟದಲ್ಲಿದ್ದ ಕೆಲವು ಸಚಿವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಮೌನವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದೂ ಅವರು ಕುಟುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT