ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿಗೆ ಬಂತು 564 ಟಿಎಂಸಿ ಅಡಿ ನೀರು

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ
ಚಂದ್ರಶೇಖರ ಕೋಳೇಕರ
Published : 15 ಆಗಸ್ಟ್ 2024, 7:25 IST
Last Updated : 15 ಆಗಸ್ಟ್ 2024, 7:25 IST
ಫಾಲೋ ಮಾಡಿ
Comments

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರೋಬ್ಬರಿ 564 ಟಿಎಂಸಿ ಅಡಿ ನೀರು ಹರಿದು ಬಂದಿದೆ.

ಹೌದು, ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಘಟಪ್ರಭಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೇವಲ ಒಂದೇ ತಿಂಗಳಲ್ಲಿ 564 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಇದರಲ್ಲಿ 455.33 ಟಿಎಂಸಿ ಅಡಿ ನೀರನ್ನು ಕೃಷ್ಣಾ ನದಿ ತಳಪಾತ್ರಕ್ಕೆ ಹರಿಬಿಡಲಾಗಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಕಳೆದ ವರ್ಷ ಜಲಾಶಯಕ್ಕೆ ಸಾಕಷ್ಟು ನೀರಿನ ಕೊರತೆಯ ಕಾರಣ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೂ ನೀರು ಹರಿಸಲು ಸಾಧ್ಯವಾಗಲಿಲ್ಲ. ಆದರೆ, ಈ ವರ್ಷ ಜೂನ್ 7 ರಂದೇ ಜಲಾಶಯದ ಒಳಹರಿವು ಆರಂಭಗೊಂಡಿತ್ತು. ಜೂನ್ ಅಂತ್ಯದವರೆಗೂ ಜಲಾಶಯದ ಒಳಹರಿವು 14 ಸಾವಿರ ಕ್ಯುಸೆಕ್ ಮೀರಿರಲಿಲ್ಲ. ಜುಲೈನಲ್ಲಿ ಮಾತ್ರ ಒಳಹರಿವು ಕ್ರಮೇಣ ಏರಿಕೆಯತ್ತ ಸಾಗಿ, 3 ಲಕ್ಷ ಕ್ಯುಸೆಕ್ ತಲುಪಿತ್ತು. 

ಈ ವರ್ಷದಲ್ಲಿ ಜಲಾಶಯದಿಂದ ಜುಲೈ 12 ರಿಂದ ಹೊರಹರಿವು ಆರಂಭಿಸಲಾಗಿತ್ತು. ಜುಲೈ ಅಂತ್ಯಕ್ಕೆ ಹೊರಹರಿವು ಕೂಡಾ 3 ಲಕ್ಷ ಕ್ಯುಸೆಕ್ ದಾಟಿತ್ತು.

ಗರಿಷ್ಠ ಹೊರಹರಿವು: ಈ ವರ್ಷ ಜಲಾಶಯದಿಂದ ಆಗಸ್ಟ್‌ 1 ರಂದು 3.50 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವುದು ಗರಿಷ್ಠ ಹೊರಹರಿವು. ಅದೇ ದಿನ ಜಲಾಶಯಕ್ಕೆ 3,41,384 ಕ್ಯುಸೆಕ್ ನೀರು ಹರಿದು ಬಂದಿದ್ದು ಗರಿಷ್ಠ ಒಳಹರಿವು.

ಜಲಾಶಯದ ಮಟ್ಟ: 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 519.52 ಮೀ.ವರೆಗೆ ನೀರು ಸಂಗ್ರಹವಾಗಿದ್ದು, 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 121.262 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.  

ವಿದ್ಯುತ್‌ ಉತ್ಪಾದನೆ: ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಈ ಮುಂಗಾರು ಹಂಗಾಮಿನಲ್ಲಿ 152 ದಶಲಕ್ಷ ಯುನಿಟ್ ವಿದ್ಯುತ್‌ ಉತ್ಪಾದಿಸಲಾಗಿದೆ. ಸದ್ಯ 15 ಸಾವಿರ ಕ್ಯುಸೆಕ್ ನೀರನ್ನು ಮಾತ್ರ ಬಿಡುತ್ತಿರುವ ಕಾರಣ 95 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ವಿದ್ಯುತ್ ಉತ್ಪಾದನಾ ಘಟಕದ ಸೂಪರಿಂಟೆಂಡಿಂಗ್ ಎಂಜಿನಿಯರ್ ಚಂದ್ರಶೇಖರ ದೊರೆ ತಿಳಿಸಿದರು.

ಜಲಾಶಯದ ನೀರು ಬಿಡುವ ಪ್ರಕ್ರಿಯೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ವಹಿಸಲಾಗಿದೆ. ಕಾಲುವೆ ಕೆರೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ.
ಕೆ.ಪಿ. ಮೋಹನರಾಜ, ವ್ಯವಸ್ಥಾಪಕ ನಿರ್ದೇಶಕರು ಕೆಬಿಜೆಎನ್ಎಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT