ಶುಕ್ರವಾರ, ಮೇ 20, 2022
19 °C
ಹಣವನ್ನು ಕುಟುಂಬದವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಧಿಕಾರಿ

ಭಿಕ್ಷುಕ ಮುತ್ತಪ್ಪನ ಬಳಿ ಕಂತೆ, ಕಂತೆ ನೋಟು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ದರಬಾರ್‌ ಮೈದಾನದ ಬಳಿ ಭಿಕ್ಷೆ ಬೇಡುತ್ತಿದ್ದ ವೃದ್ಧರೊಬ್ಬರ ಬಳಿ ಕಂತೆ, ಕಂತೆ ನೋಟುಗಳು ಪತ್ತೆಯಾಗಿವೆ.

‘ಸ್ಥಳೀಯ ನಿರಾಶ್ರಿತ ಕೇಂದ್ರ’ದ ಸಿಬ್ಬಂದಿ ನಗರದ ದರಬಾರ್‌ ಮೈದಾನದ ಎದುರು ನಿಂತಿದ್ದಾಗ ಅವರ ಬಳಿಯೇ ಭಿಕ್ಷೆ ಬೇಡಲು ಬಂದ ಆ ವೃದ್ಧನನ್ನು ಬಂಧಿಸಿ, ವಾಹನದಲ್ಲಿ ಕೇಂದ್ರಕ್ಕೆ ತಂದು ತಪಾಸಣೆ ಮಾಡಿದಾಗ ನೋಟುಗಳಿರುವ ಕಟ್ಟು ಆತನ ಜೋಳಿಗೆಯಲ್ಲಿ ಪತ್ತೆಯಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಿರಾಶ್ರಿತರ ಕೇಂದ್ರದ ಅಧೀಕ್ಷಕಿ ಪದ್ಮಜಾ ಪಾಟೀಲ, ಶುಕ್ರವಾರ ಕೇಂದ್ರದ ಸಿಬ್ಬಂದಿ ಬಂಧಿಸಿ ಕರೆತಂದಿದ್ದ ವೃದ್ಧ ಭಿಕ್ಷುಕನನ್ನು ವಿಚಾರಣೆ ಮಾಡಿದಾಗ ಅವರು ಇಂಚಿಗೇರಿ ಗ್ರಾಮದ ನಿವಾಸಿ ಮುತ್ತಪ್ಪ ವಡೆಯರ ಎಂದು ತಿಳಿದುಬಂದಿತು. ಊರಿನವರ ಸಹಕಾರದಿಂದ ಅವರ ಮಗ ರಾಮಗೊಂಡ ವಡೆಯರ ಅವರನ್ನು ಕೇಂದ್ರಕ್ಕೆ ಕರೆಯಿಸಿ, ಹಣದ ಸಮೇತ ವೃದ್ಧನನ್ನು ಮನೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.

ಭಿಕ್ಷುಕ ಮುತ್ತಪ್ಪ ವಡೆಯರ ಬಳಿ ₹ 81,310 ನಗದು ಪತ್ತೆಯಾಗಿತ್ತು. ಕುರಿಗಳನ್ನು ಮೇಯಿಸಲು ಕೂಲಿ ಕೆಲಸಕ್ಕೆ ಹೋಗಿ ಸಂಪಾದಿಸಿರುವ ಹಣ ಎಂದು ಅವರು ತಿಳಿಸಿದ್ದರೆ ಎಂದರು.

ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹಣದೊಂದಿಗೆ ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದೆ ಎಂದು ಮುತ್ತಪ್ಪ ವಡೆಯರ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡಿರುವ ಅವರ ಮಗನನ್ನು ಕರೆಯಿಸಿ, ಮತ್ತೊಮ್ಮೆ ಭಿಕ್ಷೆ ಬೇಡದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಕಳುಹಿಸಿದ್ದೇವೆ ಎಂದು ತಿಳಿಸಿದರು.

ಭಿಕ್ಷುಕನ ಕುಟುಂಬದವರನ್ನು ಪತ್ತೆ ಹಚ್ಚಿ ಹಣದ ಸಮೇತ ಅವರ ಮನೆಗೆ ಕಳುಹಿಸಿಕೊಡುವ ಮೂಲಕ ನಿರಾಶ್ರಿತರ ಕೇಂದ್ರದ ಅಧೀಕ್ಷಕಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು