ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: ಕಾರ್ಯ ನಿರ್ವಹಿಸದ ಘನತ್ಯಾಜ್ಯ ವಿಲೇವಾರಿ ಘಟಕ

ಸಿಂದಗಿ ಪುರಸಭೆಯಲ್ಲಿ ಕಸ ನಿರ್ವಹಣಾ ಕಾರ್ಮಿಕರ ಕೊರತೆ
Published 11 ಡಿಸೆಂಬರ್ 2023, 6:16 IST
Last Updated 11 ಡಿಸೆಂಬರ್ 2023, 6:16 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದಿಂದ ಎರಡು ಕಿ.ಮೀ ದೂರದ ಬ್ಯಾಕೋಡ ರಸ್ತೆಯಲ್ಲಿ ಐದು ಎಕರೆ ಜಮೀನು ಖರೀದಿಸಿ ಅಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಹಿನ್ನಲೆಯಲ್ಲಿ ಪುರಸಭೆ ಕೋಟ್ಯಂತರ ಹಣದಲ್ಲಿ ವಿವಿಧ ಕಾಮಗಾರಿ ಮಾಡಿದೆ. ಆದಾಗ್ಯೂ ಅಲ್ಲಿ ಯೋಜಿತ ಕಾಮಗಾರಿ ಪ್ರಾರಂಭಗೊಳ್ಳದೇ ಸರ್ಕಾರದ ಹಣ ವ್ಯರ್ಥಗೊಂಡಿದೆ.

‘ಘಟಕದಲ್ಲಿ ₹30 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ₹ 11 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಬೇರ್ಪಡಿಸುವ    ಯಂತ್ರ ಅಳವಡಿಸಲಾಗಿದೆ. ₹ 30 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಆಗಿದೆ. ಎರೆಹುಳ ತಯಾರಿಸುವ ಘಟಕದ ಶೆಡ್‌ಗಾಗಿ ₹ 22 ಲಕ್ಷ ವೆಚ್ಚ ಮಾಡಲಾಗಿದೆ. ₹ 10 ಲಕ್ಷ ವೆಚ್ಚದಲ್ಲಿ ಲ್ಯಾಂಡ್ ಫಿಟ್ ಕೂಡ ಮಾಡಲಾಗಿದೆ. ಇದು ಕಸದ ರಾಶಿಯಲ್ಲಿ ಮುಚ್ಚಿ ಹೋಗಿದೆ. ₹ 9 ಲಕ್ಷ ಮೊತ್ತದ ತೂಕದ ಯಂತ್ರದ ವ್ಯವಸ್ಥೆಯೂ ಇದೆ. ಆದರೆ, ಸ್ಥಳದಲ್ಲಿ ತೂಕದ ಯಂತ್ರ ಕಾಣುತ್ತಿಲ್ಲ. ಇಷ್ಟೆಲ್ಲ ಹಣ ಖರ್ಚು ಮಾಡಿದ್ದರೂ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಕೆಲಸ ಕಾರ್ಯಾರಂಭಗೊಂಡಿಲ್ಲ. ಯಂತ್ರಗಳು ತುಕ್ಕು ಹಿಡಿದಿವೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ ಗಂಭೀರ ಆರೋಪ ಮಾಡಿದ್ದಾರೆ.

‘ಸರ್ಕಾರದ ಕೋಟ್ಯಂತರ ಹಣ ಸದುಪಯೋಗಗೊಂಡಿಲ್ಲ. ಇದೇ ಘಟಕದಲ್ಲಿ ₹1 ಕೋಟಿ ಮೌಲ್ಯದ ಟ್ರಾಮೆಲ್ ಎಂಬ ಇನ್ನೊಂದು ಯಂತ್ರ ತರುವ ಪ್ರಸ್ತಾವನೆ ಸಿದ್ಧಗೊಂಡಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ₹ 80 ಲಕ್ಷ ವೆಚ್ಚದ ಬೃಹತ್ ಶೆಡ್‌ವೊಂದು ಸದ್ಯ ನಿರ್ಮಾಣದ ಹಂತದಲ್ಲಿದೆ. ಇಷ್ಟೆಲ್ಲ ಸರ್ಕಾರದ ಹಣ ವೆಚ್ಚವಾದರೂ ಸದುಪಯೋಗವಾಗದಿದ್ದರೆ ಏನು ಪ್ರಯೋಜನ’ ಎಂಬುದು ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ ಅವರ ಕಳಕಳಿಯ ಪ್ರಶ್ನೆ.

ಪಟ್ಟಣದ ಕಸವನ್ನೆಲ್ಲ ತಂದು ಈ ಘಟಕದಲ್ಲಿ ಸಿಕ್ಕ, ಸಿಕ್ಕಲ್ಲೆಲ್ಲ ಸುರುವಿ ಹೋಗಲಾಗುತ್ತಿದೆ. ಅದರೊಂದಿಗೆ ಸತ್ತ ಹಂದಿಗಳೂ ಇರುವುದು ಕಂಡು ಬಂದಿತು.

‘ಕೂಡಲೇ ಘಟಕದ ಪ್ರಾರಂಭಕ್ಕೆ ಸಂಬಂಧಿಸಿದಂತೆ ಯಾವುದಾದರೂ ಎಜೆನ್ಸಿಗೆ ಟೆಂಡರ್ ಕೊಡಬೇಕು’ ಎಂಬುದು ಸುಣಗಾರರ ಒತ್ತಾಯ.

‘ಮನೆ, ಮನೆಗೆ ಕಸ ತೆಗೆದುಕೊಂಡು ಹೋಗುವುದು ಸ್ಥಗಿತಗೊಂಡು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಚರಂಡಿಗಳು ತುಂಬಿಕೊಂಡಿದ್ದರೂ ನಿರ್ವಹಣೆ ಇಲ್ಲದಾಗಿದೆ. ಪಟ್ಟಣದಾದ್ಯಂತ ಡೆಂಗಿ ಜ್ವರ ಹಾವಳಿ ಹೆಚ್ಚಿದ್ದರೂ ಫಾಗಿಂಗ್ ಮಾಡುತ್ತಿಲ್ಲ. ಆಡಳಿತಾಧಿಕಾರಿಗಳಿಗೆ ಈ ಕುರಿತು ಪ್ರಶ್ನಿಸಿದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂದಗಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು
ಸಿಂದಗಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು

‘ಜಿಲ್ಲಾಧಿಕಾರಿ ಕಾರ್ಯಾಲಯದ ಜಿಲ್ಲಾ ಯೋಜನಾ ನಿರ್ದೇಶಕರು ಎಚ್ಚೆತ್ತುಕೊಂಡು ಇಲ್ಲಿಯ ಪುರಸಭೆ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಘಟಕದಲ್ಲಿ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ತೂಕದ ಯಂತ್ರವನ್ನು ಪುರಸಭೆ ಕಾರ್ಯಾಲಯದಲ್ಲಿಡಲಾಗಿದೆ’ ಎಂದು ಮುಖ್ಯಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಹಣಮಂತ ಸುಣಗಾರ
ಹಣಮಂತ ಸುಣಗಾರ
ಪಟ್ಟಣದ ಪುರಸಭೆ ಆಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ. ಆಡಳಿತಾಧಿಕಾರಿ ನಿದ್ರೆಗೆ ಜಾರಿದ್ದಾರೆ. ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಅಭಿವೃದ್ದಿ ಕಾರ್ಯ ಕೈಗೆತ್ತಿಕೊಳ್ಳಲು ಮುಂದಾಗಬೇಕು
- ಹಣಮಂತ ಸುಣಗಾರ ಮಾಜಿ ಅಧ್ಯಕ್ಷ ಪುರಸಭೆ ಸಿಂದಗಿ.
ಅಶೋಕ ಅಲ್ಲಾಪೂರ
ಅಶೋಕ ಅಲ್ಲಾಪೂರ
ಯಾವ ಪುರುಷಾರ್ಥಕ್ಕಾಗಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕಾಗಿ ಕೋಟ್ಯಂತರ ಹಣ ವೆಚ್ಚ ಮಾಡಲಾಗಿದೆ. ಸರ್ಕಾರದ ಅನುದಾನ ವ್ಯರ್ಥವಾಗಿ ಪೋಲಾಗುತ್ತಿರುವುದಕ್ಕೆ ಯಾರು ಹೊಣೆ. ಇನ್ನಾದರೂ ಅಧಿಕಾರಿಗಳು ಕಣ್ಣು ತೆರೆಯಬೇಕು
-ಅಶೋಕ ಅಲ್ಲಾಪೂರ ಅಧ್ಯಕ್ಷ ನಗರ ಸುಧಾರಣಾ ವೇದಿಕೆ ಸಿಂದಗಿ
ಗುರುರಾಜ ಚೌಕಿಮಠ
ಗುರುರಾಜ ಚೌಕಿಮಠ
ಕಸ ನಿರ್ವಹಣಾ ಕಾರ್ಮಿಕರ ಕೊರತೆ ಇದೆ. ಕಾರ್ಮಿಕರ ನೇಮಕಕ್ಕೆ ಟೆಂಡರ್ ಆಗಿದೆ. ಘನತ್ಯಾಜ್ಯ ವಸ್ತು ವಿಲೇವಾರಿ ಘಟಕವನ್ನು ವೈಜ್ಞಾನಿಕವಾಗಿ ಕಾರ್ಯಾರಂಭ ಮಾಡಲಾಗುವುದು
ಗುರುರಾಜ ಚೌಕಿಮಠ ಮುಖ್ಯಾಧಿಕಾರಿ ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT