ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಲ್ಲಿ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೀಘ್ರ ನಿರ್ಮಾಣ: MB ಪಾಟೀಲ

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿಕೆ
Published : 15 ಆಗಸ್ಟ್ 2024, 13:51 IST
Last Updated : 15 ಆಗಸ್ಟ್ 2024, 13:51 IST
ಫಾಲೋ ಮಾಡಿ
Comments

ವಿಜಯಪುರ: ‘ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಗತ್ಯಗಳಿಗಾಗಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಬೆಂಗಳೂರಿನ ಯಾವ ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ಅನೇಕ ಸಮಾಲೋಚಕರ ಜತೆಗೆ ಚರ್ಚಿಸಲಾಗುತ್ತಿದೆ. 2033ರ ವೇಳೆಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವ ವಿಶ್ವಾಸ ಇದೆ’ ಎಂದರು.

‘ಬೆಂಗಳೂರಿನ ದಾಬಸ್‍ಪೇಟೆ- ದೊಡ್ಡಬಳ್ಳಾಪುರ ನಡುವಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ನಾಲೆಡ್ಜ್-ಹೆಲ್ತ್-ಇನ್ನೋವೇಶನ್- ರಿಸರ್ಚ್ (ಕೆ.ಎಚ್.ಐ.ಆರ್) ಸಿಟಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರ ಭಾಗವಾಗಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಮೊದಲ ಹಂತದ ಅಭಿವೃದ್ಧಿಗೆ ಆಗಸ್ಟ್‌ 23ರಂದು ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಈ ಯೋಜನೆಗೆ ಒಟ್ಟು ₹ 40 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುತ್ತಿದ್ದು, ನೇರವಾಗಿ 48 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಹೇಳಿದರು.

‘ನಾಲೆಡ್ಜ್-ಹೆಲ್ತ್-ಇನ್ನೋವೇಶನ್- ರಿಸರ್ಚ್ ಸಿಟಿಯಲ್ಲಿ ಜಗತ್ತಿನ ಉತ್ಕೃಷ್ಟ ವಿಶ್ವವಿದ್ಯಾಲಯಗಳು, ವೈದ್ಯಕೀಯ ಸಂಸ್ಥೆಗಳು, ಸಂಶೋಧನಾಲಯಗಳು, ಉದ್ಯಮಗಳು, ನವೋದ್ಯಮಗಳು ನೆಲೆಯೂರಲಿವೆ. ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪ 407 ಎಕರೆ ವಿಸ್ತೀರ್ಣದಲ್ಲಿ ಒಟ್ಟು ಎರಡು ಹಂತಗಳಲ್ಲಿ ₹ 817 ಕೋಟಿ ವೆಚ್ಚದಲ್ಲಿ ಬೆಂಗಳೂರು ಸಿಗ್ನೇಚರ್ ಬಿಜಿನೆಸ್ ಪಾರ್ಕ್ ನಿರ್ಮಿಸಲಾಗುವುದು’ ಎಂದು ಹೇಳಿದರು.

ರಾಜ್ಯ ಸರ್ಕಾರವು ಫಾಕ್ಸ್ ಕಾನ್, ವಿಸ್ಟ್ರಾನ್, ಟಾಟಾ ಗ್ರೂಪ್, ಏರ್ ಇಂಡಿಯಾ, ಟೊಯೋಟಾ ಮುಂತಾದ ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದವನ್ನು ಮಾಡಿಕೊಂಡಿದೆ. ಈ ಕಂಪನಿಗಳು ಕ್ರಮವಾಗಿ ₹14 ಸಾವಿರ ಕೋಟಿ, ₹ 1,500 ಕೋಟಿ, ₹2,300 ಕೋಟಿ ಮತ್ತು ₹1,300 ಕೋಟಿಗಳನ್ನು ರಾಜ್ಯದಲ್ಲಿ ಹೂಡಿಕೆ ಮಾಡಲಿವೆ ಎಂದು ಹೇಳಿದರು.

‘ರಾಜ್ಯದ ವಿದ್ಯುತ್ ಚಾಲಿತ ವಾಹನಗಳ ವಲಯದಲ್ಲಿ ₹50 ಸಾವಿರ ಕೋಟಿ ಹೂಡಿಕೆಯ ಖಾತ್ರಿ ನಮಗೆ ಸಿಕ್ಕಿದ್ದು, ಇದರಿಂದ 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನು ಪರಿಗಣಿಸಿ, 2024-29ರ ಅವಧಿಗೆ ಚಾಲೂ ಆಗುವಂತೆ ಕ್ಲೀನ್ ಮೊಬಿಲಿಟಿ ಪಾಲಿಸಿಯನ್ನು ರೂಪಿಸಲಾಗಿದೆ’ ಎಂದರು.

‘ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ.ಎಲ್) ಹಲವು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೇವಲ ₹410 ಕೋಟಿ ಇದ್ದ ಚಿಟ್ ಫಂಡ್ ವ್ಯವಹಾರವನ್ನು ₹ 5,000 ಕೋಟಿಗೆ ವಿಸ್ತರಿಸುವ ಉದ್ದೇಶ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಅದಕ್ಕೆ ಚಾಲನೆ ಸಿಗಲಿದೆ. ಸದ್ಯ 23 ಶಾಖೆಗಳಿರುವ ಚಿಟ್ ಫಂಡ್ ಶಾಖೆಗಳನ್ನು 100ಕ್ಕೆ ಹೆಚ್ಚಿಸಲಾಗುವುದು. ಮೊದಲ ಹಂತದಲ್ಲಿ ವಿಜಯಪುರದಲ್ಲೂ ಒಂದು ಚಿಟ್ ಫಂಡ್ ಕಚೇರಿ ತೆರೆಯಲಾಗುವುದು’ ಎಂದು ಹೇಳಿದರು.

‘10 ಮೆಗಾ ಔಷಧ ಮಳಿಗೆಗಳನ್ನು ರಾಜ್ಯದಲ್ಲಿ ಆರಂಭಿಸುತ್ತಿದ್ದು, ಅದರಲ್ಲಿ ಒಂದನ್ನು ವಿಜಯಪುರದಲ್ಲಿ ಆರಂಭಿಸಲು ತೀರ್ಮಾನಿಸಲಾಗಿದೆ. ಸದ್ಯದಲ್ಲೇ ಇವೆರಡಕ್ಕೂ ಚಾಲನೆ ನೀಡಲಾಗುವುದು. ರಾಜ್ಯದಲ್ಲಿನ 83 ಜನೌಷಧ ಕೇಂದ್ರಗಳನ್ನು ಆಧುನೀಕರಿಸುವ ಕೆಲಸ ಕೂಡ ಕೈಗೆತ್ತಿಕೊಳ್ಳಲಾಗುವುದು’ ಎಂದರು.

‘ಎಂಎಸ್‍ಐಎಲ್ ತನ್ನ ಸೇವೆಗಳನ್ನು ವಿಸ್ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಎರಡು ತಿಂಗಳಲ್ಲಿ 73 ಮಂದಿ ಅಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು.  ₹3,759 ಕೋಟಿ ವಹಿವಾಟು ನಡೆಸಿರುವ ಎಂಎಸ್‍ಐಎಲ್ ₹ 103 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷಕ್ಕಿಂತ ₹ 62 ಕೋಟಿ ಹೆಚ್ಚು ಲಾಭ ಗಳಿಸಿದೆ’ ಎಂದು ತಿಳಿಸಿದರು.

‘ಮೈಸೂರು ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಲಾಭದಾಯಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಅದರ ಲಾಭ ಬಹುತೇಕ ದ್ವಿಗುಣ ಆಗಿದೆ. 2022-23ರಲ್ಲಿ ₹182 ಕೋಟಿ ಲಾಭ ಪಡೆದಿದ್ದ ಸಂಸ್ಥೆ 2023-24ರಲ್ಲಿ ₹352 ಕೋಟಿ ಲಾಭ ಮಾಡಿದೆ. 2024-25ರಲ್ಲಿ ₹500 ಕೋಟಿ ಲಾಭ ಮಾಡುವ ಉದ್ದೇಶ ಇದೆ’ ಎಂದರು.

‘ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಇದುವರೆಗೆ ಕೇವಲ ಇಂಕ್ ತಯಾರಿಕೆಗೆ ಸೀಮಿತವಾಗಿತ್ತು. ಇದನ್ನು ಪುನಶ್ಚೇತನಗೊಳಿಸಿ, ಆಲಂಕಾರಿಕ ಬಣ್ಣಗಳನ್ನು ಉತ್ಪಾದಿಸುವುದು ಹಾಗೂ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಇದೇ ಬಣ್ಣವನ್ನು ಬಳಸುವ ಉದ್ದೇಶ ಹೊಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT