ಶನಿವಾರ, ಜನವರಿ 23, 2021
28 °C
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಚುನಾಯಿತ ಸದಸ್ಯರ ‘ಜನ ಸೇವಕ ಸಮಾವೇಶ’

ಸರ್ಕಾರದ ವಾರಸುದಾರರಾಗಿ ಕಾರ್ಯನಿರ್ವಹಿಸಿ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಗ್ರಾಮ ಪಂಚಾಯ್ತಿ ಸದಸ್ಯರು ಸರ್ಕಾರದ ವಾರಸುದಾರರಾಗಿ ಹಳ್ಳಿ, ಹಳ್ಳಿಗಳಲ್ಲಿ ಕೆಲಸ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರ ‘ಜನ ಸೇವಕ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮುಖ್ಯಮಂತ್ರಿ ಇದ್ದಂತೆ, ಸದಸ್ಯರು ಶಾಸಕರಿದ್ದಂತೆ. ಶುದ್ಧ ಕುಡಿಯುವ ನೀರು ಒದಗಿಸಲು, ಗ್ರಾಮದ ಸ್ವಚ್ಛತೆ ಕಾಪಾಡಲು, ರೈತರ ಹೊಲಗಳಿಗೆ ರಸ್ತೆ ನಿರ್ಮಿಸಲು, ಮಳೆ ನೀರು ತಡೆಗೆ ಚೆಕ್‌ ಡ್ಯಾಂ, ಬದು, ಬಾಂದಾರ ನಿರ್ಮಾಣಕ್ಕೆ ಆದ್ಯತೆ ನೀಡುವ ಮೂಲಕ ಪಂಚಾಯ್ತಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಹಳ್ಳಿಗಳಲ್ಲಿ ಕೆರೆಕಟ್ಟೆಗಳ ಒತ್ತುವರಿ ತೆರವಿಗೆ ಮತ್ತು ಹೊಸ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ನರೇಗಾ ಯೋಜನೆಯಡಿ ಎಷ್ಟು ಹಣವನ್ನಾದರೂ ಬಳಸಿಕೊಳ್ಳಲು ಅವಕಾಶವಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಸ್ವರಾಜ್ಯದ ಕನಸು ಕಾಂಗ್ರೆಸ್‌ ದುರಾಡಳಿತದಿಂದ ನನಸಾಗಲಿಲ್ಲ. ರಾಮಕೃಷ್ಣ ಹೆಗಡೆ ಜಾರಿಗೆ ತಂದಿದ್ದ ಎರಡು ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ವೀರಪ್ಪ ಮೊಯ್ಲಿ ಅವರು ಮೂರು ಹಂತದ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಹಳ್ಳ ಹಿಡಿಸಿದರು. ಇದನ್ನು ಬದಲಾಯಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎಂದರು.

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಗ್ರಾಮ ಪಂಚಾಯ್ತಿಗೆ ನೇರವಾಗಿ ನೀಡಲಾಗುತ್ತಿರುವ ಅನುದಾನವನ್ನು ಹಳ್ಳಿಗಾಡಿನ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.

ಎಚ್ಚರಿಕೆಯಿಂದ ಅನುದಾನ ಬಳಕೆ ಮಾಡಬೇಕು, ಪಿಡಿಒ ಹೇಳಿದ ಕಡೆಯಲ್ಲ ಸಹಿ ಮಾಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂಬರುವ ಬಜೆಟ್‌ ಬಳಿಕ ಪ್ರತಿ ಗ್ರಾಮ ಪಂಚಾಯ್ತಿಗೆ 20 ಮನೆಗಳನ್ನು ಹಂಚಿಕೆ ಮಾಡಲಾಗುವುದು. ಅರ್ಹರಿಗೆ ನೀಡಬೇಕು, ಯಾವುದೇ ಕಾರಣಕ್ಕೂ ಹಿಂಬಾಲಕರಿಗೆ ನೀಡಬಾರದು, ನೀಡಿದರೆ ಸದಸ್ಯತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಹಳ್ಳಿಗಳನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ಆದ್ಯತೆ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಕೂಚಬಾಳ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 2065 ಗ್ರಾಮ ಪಂಚಾಯ್ತಿ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ಹೇಳಿದರು.

ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಬರಬೇಕು ಹಾಗೂ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲೂ ಪಕ್ಷದ ಶಾಸಕರು ಆಯ್ಕೆಯಾಗುವಂತಾಗಬೇಕು ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು ಮಾತನಾಡಿ, ಗ್ರಾಮೀಣ ಪ್ರದೇಶದ ಹಸಿರಿಕರಣಕ್ಕೆ ಗ್ರಾಮ ಪಂಚಾಯ್ತಿ ನೂತನ ಸದಸ್ಯರು ಆದ್ಯತೆ ನೀಡಬೇಕು. ಶುದ್ಧ ಹಸ್ತರಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಅಪ್ಪು ಪಟ್ಟಣ ಶೆಟ್ಟಿ, ಎಸ್‌.ಕೆ.ಬೆಳ್ಳುಬ್ಬಿ, ರಮೇಶ ಭೂಸನೂರ, ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ಪಿ.ಎಚ್‌.ಪೂಜಾರ, ಬಸವರಾಜ ಯಂಕಂಚಿ, ಚಂದ್ರಶೇಖರ ಕವಟಗಿ, ದಯಸಾಗರ ಪಾಟೀಲ, ಶಿವರುದ್ರ ಬಾಗಲಕೋಟಿ, ರವಿಕಾಂತ ಬಗಲಿ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

***

ಸರ್ಕಾರದ ಖಜಾನೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಕೈಗೆ ನೀಡಿದ್ದು, ಜವಾಬ್ದಾರಿಯಿಂದ ಬಳಸಬೇಕು
-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು