ಗುರುವಾರ , ಜೂನ್ 24, 2021
25 °C
ಕೋವಿಡ್‌ ಲಸಿಕೆ ಎರಡನೇ ಡೋಸ್‌ಗೆ ಆದ್ಯತೆ:

ಅನಾಥ ಮಕ್ಕಳ ಪುನರ್ವಸತಿಗೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಕೋವಿಡ್‌ನಿಂದ ಸಾವಿಗೀಡಾಗಿರುವ ಪಾಲಕರ ಮಕ್ಕಳನ್ನು ಗುರುತಿಸಿ ಅವರ ಪುನರ್ವಸತಿಗೆ ನೆರವಾಗಬೇಕು. ಅಂತಹ ಮಕ್ಕಳನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲು ಮಾಡಿ, ಮುಂದಿನ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಕೋವಿಡ್ ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡು  ಅನಾಥರಾಗಿರುವ ಮಕ್ಕಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಕೂಡ ಟೋಲ್ ಫ್ರೀ ನಂಬರ್ 1098 ಹಾಗೂ 14499 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಮತ್ತು ಆರ್‌ಡಿಪಿಆರ್ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಇಂತಹ ನಿರ್ಗತಿಕ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಕೇರ್‌ಸೆಂಟರ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲು ಅವರು ಸಲಹೆ ನೀಡಿದರು.

ಕೋವಿಡ್‌ದಿಂದ ಪಾಲಕರನ್ನು ಕಳೆದುಕೊಳ್ಳುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಪ್ರತಿ ಮಗುವನ್ನು ಗುರುತಿಸಬೇಕು ಮಹಿಳಾ ಮತ್ತು ಮಕ್ಕಳ ಇಲಾಖೆ ವ್ಯಾಪ್ತಿಗೆ ಇದನ್ನು ತರುವ ದೆಸೆಯಲ್ಲಿ ರಾಜ್ಯಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿ ಹಾಗೂ ಜಿಲ್ಲಾಮಟ್ಟದಲ್ಲಿ ಒಬ್ಬ ನೋಡಲ್ ಅಧಿಕಾರಿಗಳು ಇದ್ದಾರೆ ಎಂದು ಹೇಳಿದರು.

ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹಬ್ಬುತ್ತಿರುವುದರಿಂದ ಈವರೆಗೆ ಕೋವಿಶಿಲ್ಡ್, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರಿಗೆ ಎರಡನೆಯ ಡೋಸ್ ಅವಶ್ಯಕತೆಗಳ ಬಗ್ಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಕೋವಿಡ್ ಮೂರನೇ ಅಲೆಯ ಭಯವಿದ್ದು, ಕಾರಣ ಈ ಹಿಂದೆ ಕೋವಿಡ್-19 ಮೊದಲ ಡೋಸ್ ಪಡೆದವರಿಗೆ ಕ್ಷೇತ್ರವಾರು ಆದ್ಯತೆ ಮೇಲೆ ಎರಡನೇ ಡೋಸ್ ನೀಡಬೇಕು. ಬೇಡಿಕೆಯ ಬಗ್ಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ನಗರದ ಆಯುಷ್ ಆಸ್ಪತ್ರೆಯನ್ನು ಕೋವಿಡೇತರ ಆಸ್ಪತ್ರೆಯಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ಇದ್ದು, ಅಲ್ಲಿ ಬೆಡ್‌, ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವ ಬಗ್ಗೆ ವೈದ್ಯಕೀಯ ಸಚಿವರ ಗಮನಕ್ಕೂ ಸಹ ತರುವುದಾಗಿ ಸಚಿವರು ಹೇಳಿದರು.

ನಗರದಲ್ಲಿ ಈಗಾಗಲೇ ಎರಡು ವಸತಿ ನಿಲಯಗಳನ್ನು ಕೋವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದಲ್ಲಿ ಲಸಿಕೆ ನೀಡುವ ಪ್ರಮಾಣ ಇನ್ನಷ್ಟು ಪ್ರಗತಿ ಸಾಧಿಸಬೇಕು. ನಗರದಲ್ಲಿ ಕೊರೋನಾ ಸೋಂಕಿತರು ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಥಮ ಡೋಸ್ ನೀಡಿದವರಿಗೆ 2ನೇ ಡೋಸ್‌ನ್ನು ಆದ್ಯತೆ ಮೇಲೆ ನೀಡಬೇಕು. ಅವಶ್ಯಕತೆ ಮತ್ತು ಲಸಿಕೆ ಬೇಡಿಕೆಯ ಬಗ್ಗೆ ತಕ್ಷಣಸಚಿವರ ಗಮನಕ್ಕೆ ತರುವಂತೆ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿ.ಪಂ ಸಿಇಒ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಡಿಎಚ್‌ಒ ಮಹೇಂದ್ರ ಕಾಪಸೆ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಇದ್ದರು.

***

ವಿಜಯಪುರ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿಗಳಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ. ಮುಂಬರುವ ಒಂದು ತಿಂಗಳಲ್ಲಿ ಪ್ಲಾಟಿನಿಂದ ಆಕ್ಸಿಜನ್ ಸೌಲಭ್ಯ ದೊರೆಯಲಿದೆ
ಶಶಿಕಲಾ ಜೊಲ್ಲೆ
ಜಿಲ್ಲಾ ಉಸ್ತುವಾರಿ ಸಚಿವೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು