ಗುರುವಾರ , ಜನವರಿ 27, 2022
27 °C
ಸಿದ್ದಾಪುರ ಚೆಕ್‌ಪೋಸ್ಟ್‌ ಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಕೋವಿಡ್‌ 3ನೇ ಅಲೆ ಉಲ್ಬಣ ತಡೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಮೂರನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜನವರಿ ಆರಂಭದಿಂದ ಇಲ್ಲಿಯ ವರೆಗೆ 50 ಮಕ್ಕಳು ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಅಳವಡಿಕೆಯತ್ತ ಹೆಚ್ಚಿನ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಕೋವಿಡ್‌ ಮತ್ತು ಬೆಳೆಹಾನಿ ಕುರಿತ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಕೋವಿಡ್‌ ಮೂರನೇ ಅಲೆ  ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಂಭವವಿರುವುದರಿಂದ  ಜಿಲ್ಲಾ ಆಸ್ಪತ್ರೆಯಲ್ಲಿರುವ ಹಳೇ ಡಯಾಲಿಸಿಸ್‌ ವಾರ್ಡ್‌ ಅನ್ನು ಬದಲಾಯಿಸಿ 10 ವೆಂಟಿಲೇಟರ್‌ ಇರುವ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ನಿಗಾ ಘಟಕ ನಿರ್ಮಾಣದ ಕಾಮಾಗಾರಿ ಪೂರ್ಣಗೊಳಿಸಲಾಗಿದೆ ಹಾಗೂ 14 ಹಾಸಿಗೆಯ ಎಚ್‌.ಡಿ.ಯು ಸಾಮಾನ್ಯ ತೀವ್ರ ನಿಗಾ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 15 ರಿಂದ 18 ವಯಸ್ಸಿನ ಮಕ್ಕಳ ಲಸಿಕಾಕರಣದಲ್ಲಿ ಶೇ 50 ರಷ್ಟು ಪ್ರಗತಿ ಸಾಧಿಸಲಾಗಿದೆ. ಶೇ 100 ರಷ್ಟು ಸಾಧನೆಗೆ ಆಯಾ ತರಗತಿ ಶಿಕ್ಷಕರಿಗೆ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ ಎಂದರು.

ಕೋವಿಡ್‌ ಲಸಿಕಾಕರಣದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಮೊದಲ ಡೋಸ್‌ ಲಸಿಕಾಕರಣದಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಿದ ರಾಜ್ಯದ ಮೂರನೇ ಜಿಲ್ಲೆಯಾಗಿದೆ. ಅಲ್ಲದೆ, ಎರಡನೇ ಡೋಸ್‌ ನೀಡುವಲ್ಲಿ ಶೇ 80 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಜನವರಿ 1 ರಿಂದ ಇದುವರೆಗೂ 15,842 ಸ್ಯಾಂಪಲ್ ಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 180 ಜನರಿಗೆ  ಕೋವಿಡ್‌ ಪಾಸಿಟಿವ್‌ ಬಂದಿದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್‌ ಶೇ 1 14 ರಷ್ಟು ಇದೆ. ಜಿಲ್ಲೆಯಲ್ಲಿ ಸದ್ಯ 160 ಸಕ್ರೀಯ ಪ್ರಕರಣಗಳಿದ್ದು, 12 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಲ್ಲಾಡಳಿತದ ಬಳಿ 642 ಆಕ್ಸಿಜನ್‌ ಕಾನ್ಸೆಂಟ್ರೇಟರ್‌ಗಳಿವೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ಶೇ 75 ರಷ್ಟು ಹಾಸಿಗೆಗಳನ್ನು ಚಿಕಿತ್ಸೆಗೆ ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ   ಆಮ್ಲಜನಕ ಉತ್ಪಾದನೆಗೆ ಐದು ಘಟಕಗಳು ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿವೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅಳವಡಿಸಲಾಗಿರುವ 1000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಘಟಕದ ನಿರ್ವಹಣೆಯಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿವೆ. ಇದನ್ನು ಶೀಘ್ರವಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈಗಾಗಲೇ ರಾಜ್ಯದ ಗಡಿ ಚೆಕ್‌ ಪೋಸ್ಟ್‌ಗಳಲ್ಲಿ ಸ್ವಾಬ್‌ ಕಲೆಕ್ಷನ್‌ ಸೆಂಟರ್‌ಗಳನ್ನು ತೆರೆಯಲಾಗಿದೆ. ಅಕ್ಕಪಕ್ಕದ ರಾಜ್ಯಗಳಿಂದ ಆಗಮಿಸುವವರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಚೆಕ್‌ ಪೋಸ್ಟ್‌ಗಳಲ್ಲಿ 24X7 ಗಂಟೆಯೂ ತಪಾಸಣೆ ನಡೆಸಲಾಗುತ್ತಿದೆ. ಸಿಬ್ಬಂದಿ ಕೊರತೆ ಕಾರಣ ಎನ್‌ ಜಿ ಓಗಳ ಮೂಲಕ ಸೇವೆಯನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಬೆಳೆಹಾನಿ ಕುರಿತು:

ಇನ್ನೂ ಬೆಳೆಹಾನಿ ಪರಿಹಾರ ಲಭ್ಯವಾಗಿಲ್ಲ ಎಂಬ ಹಲವಾರು ದೂರುಗಳು ಬಂದಿವೆ. ಅರ್ಧಕ್ಕಿಂತ ಹೆಚ್ಚಿನ ಸಂಖ್ಯೆಯ ರೈತರಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಇದರ ಬಗ್ಗೆ ವಿಶೇಷ ಗಮನ ಹರಿಸಿ ಶೀಘ್ರ ಬೆಳೆಹಾನಿ ಪರಿಹಾರ ರೈತರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಶಾಸಕ ರಮೇಶ ಭೂಸನೂರು, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಇದ್ದರು.

***

ಸಚಿವ ಸಂಪುಟ ವಿಸ್ತರಣೆ: ಜೊಲ್ಲೆ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಶೀಘ್ರದಲ್ಲೇ ಹೊಸಬರ ನೇಮಕವಾಗುವ ಸಾಧ್ಯತೆ ಇದೆಯೇ ಹೊರತು ಸಚಿವ ಸಂಪುಟ ಪುನರ್‌ ರಚನೆಯಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ ಪಟ್ಟರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಲ್ಕೈದು ಖಾತೆಗಳು ಖಾಲಿ ಇದ್ದು, ಇವುಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಯಾವುದೇ ಹೇಳಿಕೆ, ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.

ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇವಲ ಕೋವಿಡ್ ಮತ್ತು ಮಹಾಪೂರ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆಯೇ ಹೊರತು ಪೂರ್ಣ ಪ್ರಮಾಣದ ಉಸ್ತುವಾರಿ ವಹಿಸಿಲ್ಲ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು