ವಿಜಯಪುರ: ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಗದಗ ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಜೂನ್ 29 ಮತ್ತು 30ರಂದು ನಗರದ ಕಂದಗಲ್ ಹಣಮಂತರಾಯ ರಂಗಮಂದಿರಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಅರ್ಜುನ ಗೊಳಸಂಗಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಪ್ರಬುದ್ಧ ಭಾರತದ ಆಶಯಕ್ಕೆ ಪೂರಕವಾಗಿ ಉಪನ್ಯಾಸ, ಸಂವಾದ, ನಮ್ಮ ಸಂವಿಧಾನ ನಮ್ಮ ರಕ್ಷಣೆ ಕುರಿತು ಸಂವಾದಗಳನ್ನು ನಡೆಸಲಾಗುವುದು. ದಲಿತ ಸಾಹಿತ್ಯ ಕುರಿತು ಒಂದು ಹಾಗೂ ಎರಡು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ದಲಿತ ಸಾಹಿತ್ಯ ಪರಿಷತ್ 29ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಕೊರೊನಾ ನಂತರ ಬೆಳ್ಳಿ ಸಂಭ್ರಮ ಕಾರ್ಯಕ್ರಮ ಆಚರಿಸುತ್ತಿದೆ. ಈಗಾಗಲೇ ಗದಗ, ರಾಯಚೂರ, ವಿಜಯಪುರ, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು.
ಸಮ್ಮೇಳನದಲ್ಲಿ 25 ಜನ ದಲಿತ ಸಾಹಿತಿಗಳಿಗೆ ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೂ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ರಾಜ್ಯದ 31 ಜಿಲ್ಲೆಗಳಿಂದ ಸಾಹಿತ್ಯ ಆಸಕ್ತರು, ಸಾಹಿತಿಗಳು, ದಲಿತ ಸಂಸ್ಕೃತಿ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಿರಿಯರು, ಯುವ ಸಾಹಿತಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ದಲಿತ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆಯಲು ಆಸಕ್ತರಿಗೆ ಶುಲ್ಕ ಇಲ್ಲ. ಆಸಕ್ತರು ಆನ್‌ಲೈನ್‌ನಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಹಾಗೂ ಸಮ್ಮೇಳನಕ್ಕೂ ಭಾಗವಹಿಸಬಹುದಾಗಿದೆ ಎಂದರು.
ದಸಾಪ ರಾಜ್ಯ ಕಾರ್ಯದರ್ಶಿ ಸುಭಾಸ ಹೊದ್ಲೂರ, ಖಜಾಂಚಿ ಡಾ.ಎಚ್.ಬಿ. ಕೋಲಕಾರ, ಜಿಲ್ಲಾ ಅಧ್ಯಕ್ಷ ಬಸವರಾಜ ಜಾಲವಾದಿ, ಹಿರಿಯ ಸಾಹಿತಿ ದೊಡ್ಡಣ್ಣ ಭಜಂತ್ರಿ, ಹೋರಾಟಗಾರ ಶ್ರೀನಾಥ ಪೂಜಾರಿ, ಸುರೇಖಾ ರಾಠೋಡ, ಡಾ.ಭುವನೇಶ್ವರಿ ಕಾಂಬಳೆ ಇದ್ದರು.
ಸಮ್ಮೇಳನ ಡಾ. ಪೋತೆ ಸರ್ವಾಧ್ಯಕ್ಷ: ವಿಜಯಪುರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಕನ್ನಡ ಹಾಗೂ ದಲಿತ ಸಾಹಿತ್ಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ಹಾಗೂ ಕಲಬುರ್ಗಿ ವಿ.ವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ. ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದರು. ಭಗವಾನ್ ಬುದ್ಧ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ನಿರರ್ಗಳವಾಗಿ ಮಾತನಾಡುವ ಡಾ.ಪೋತೆ ಅವರು ಜನಪದ ವಿದ್ವಾಂಸರೂ ಆಗಿದ್ದಾರೆ. ಹಾಗಾಗಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಂವಿಧಾನ ಪುಸ್ತಕಗಳ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿದೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮಾರಾಟ ವ್ಯವಸ್ಥೆ ಮಾಡಲಾಗುವುದು. ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಅತಿಥಿಗಳಿಗೆ ನಗರದ ವಸತಿ ಗೃಹದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದವರು ತಿಳಿಸಿದರು.
ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ ಪುರಸ್ಕೃತರು ಕಾವ್ಯ; ಉರಿವ ಕರುಳ ದೀಪ;(2020) ಬಿದಲೋಟಿ ರಂಗನಾಥ ಇರುವುದು ಒಂದೇ ರೊಟ್ಟಿ; (2021) ಡಾ.ಸದಾಶಿವ ದೊಡಮನಿ ಕಾದಂಬರಿ:ತಾಂಡ (2021) ಡಾ.ಶಾಂತನಾಯ್ಕ ತಿರಗಾನಹಳ್ಳಿ ಕಥೆ: ಕಿಟಕಿ ಅಂಚಿನ ಮೌನ 2021)ರೇಣುಕಾ ಹಳವರ ಸಂಶೋಧನೆ:ಸೌಂಧವ ಸಂಕಥನ(2021)ಪಿ.ಆರಡಿಮಲ್ಲಯ್ಯ ಕಟ್ಟೇರ ವಿಮರ್ಶೆ:ನೆಲರೂಪಿ( 2010) ಡಾ.ಪ್ರಸನ್ನ ನಂಜಪುರಅಕ್ಷರ ಮೈತಿ( 2021)ಡಾ.ಗಿರೀಶ ಮೂಗ್ತಿಹಳ್ಳಿ ಹರಟೆ: ಮಾತಿನ ಮಂಟಪ(2021ಗೌಡಗೆರೆ ಮಾಯುಶ್ರೀ ಅಂಕಣ ಬರಹ:ಉರಿಪಾದ 2021) ಡಾ.ಎಚ್.ಡಿ. ಉಮಾಶಂಕರ ವೈಚಾರಿಕ: ಅಂಬೇಡ್ಕರ್ ಮಾರ್ಗ(2021) ಸೋಮಲಿಂಗ ಗೆಣ್ಣೂರ ಅನುವಾದ: ತ್ಯಾಗಮಯಿ ರಮಾಬಾಯಿ ಅಂಬೇಡ್ಕರ್ (2021) ಪ್ರಭುಲಿಂಗ ನೀಲೂರ ಸಂಪಾದನೆ: ಸಾರ್ಥಕ ಬದುಕು (2020) ಡಾ.ಅಮರೇಶ ಯತಗಲ್ಲ ನಾ ಯಾರಿಗಲ್ಲದವಳು(2011) ಡಾ.ಹೊಂಬಯ್ಯ ಹೊನ್ನಲಗೆರೆ ಸಂಕೀರ್ಣ: ಆರೂಢ ಪಂಥ(2021)ಡಾ.ಎಂ.ಬಿ. ಕಟ್ಟಿ ಮೊದಲ ಕೃತಿ: ಗಾಂಧಿ ನೇಯ್ದಿಟ್ಟ ಬಟ್ಟೆ (2011) ರಾಯಸಾಬ ದರ್ಗಾದವರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.