ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಜಲಾಶಯ: ಮುಂದುವರೆದ ಕೃಷ್ಣೆಯ ಅಬ್ಬರ

Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಮಹಾರಾಷ್ಟ್ರ ಹಾಗೂ ರಾಜ್ಯದ ಕೃಷ್ಣಾ ಕಣಿವೆಯಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಮುಂದುವರೆದಿದ್ದು, ಇದರಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಏರಿಕೆಯತ್ತ ಸಾಗಿದೆ.

ಬೆಳಿಗ್ಗೆ 1.26 ಲಕ್ಷ ಕ್ಯುಸೆಕ್ ಇದ್ದ ಒಳಹರಿವು, ಸಂಜೆಯ ವೇಳೆಗೆ ಅದು 1.41,389 ಕ್ಯುಸೆಕ್ ತಲುಪಿತ್ತು. ಹೊರಹರಿವನ್ನು ಕೂಡಾ ಹಂತ ಹಂತವಾಗಿ ಏರಿಸಲಾಗಿದ್ದು, ಶುಕ್ರವಾರ 1.80 ಲಕ್ಷ ಕ್ಯುಸೆಕ್‌ ಏರಿಕೆಯಾಗಿದೆ. 519.60 ಮೀ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ 517.91 ಮೀ ವರೆಗೆ ನೀರು ಸಂಗ್ರಹವಿದೆ.

26 ಗೇಟ್‌ ಓಪನ್

ಜಲಾಶಯದ ಎಲ್ಲ 26 ಗೇಟ್‌ಗಳನ್ನು 0.45 ಮೀ. ವರೆಗೆ ಎತ್ತರಿಸಿ 1,41,000 ಕ್ಯುಸೆಕ್ ನೀರನ್ನು ಹಾಗೂ ಜಲಾಶಯದ ಬಲಭಾಗದ ಕೆಪಿಸಿಎಲ್ ಮೂಲಕ 39,000 ಕ್ಯುಸೆಕ್ ಸೇರಿ 1,80,000 ಕ್ಯುಸೆಕ್ ನೀರನ್ನು ಶುಕ್ರವಾರ ಮಧ್ಯಾಹ್ನದಿಂದ ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ.

ನಾರಾಯಣಪುರ ಜಲಾಶಯದಿಂದ 1,79,000 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದರಿಂದ ಆಲಮಟ್ಟಿ ಜಲಾಶಯದ ಮುಂಭಾಗ, ನಾರಾಯಣಪುರ ಜಲಾಶಯದ ಹಿಂಭಾಗದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿಲ್ಲ. ನಾರಾಯಣಪುರ ಜಲಾಶಯದ ನೀರಿನ ಮಟ್ಟವನ್ನು ಗರಿಷ್ಠ ಮಟ್ಟಕ್ಕಿಂತ ಎರಡು ಮೀಟರ್ ತಗ್ಗಿಸಿದ್ದರಿಂದ ಪ್ರವಾಹ ಪರಿಸ್ಥಿತಿ ತಗ್ಗಿದೆ.

ಸತತ ನಿಗಾ

ಕಳೆದ ಮೂರು ದಿನಗಳಿಂದ ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷ್ಣಾ ನದಿಯ ಒಳಹರಿವನ್ನು ದಿನದ 24 ಗಂಟೆಯೂ ನಿಗಾ ಇಡುತ್ತಿದ್ದು, ಒಳಹರಿವಿಗೆ ತಕ್ಕಂತೆ ಹೊರಹರಿವನ್ನು ಹೆಚ್ಚಿಸುತ್ತಿದ್ದಾರೆ. ಹೊರಹರಿವು ಹೆಚ್ಚಿದ ತಕ್ಷಣ ನದಿ ತಳಪಾತ್ರದ ನಾರಾಯಣಪುರ ಜಲಾಶಯ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳ ಜತೆಯೂ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದು, ಒಟ್ಟಾರೇ ಕೃಷ್ಣಾ ಕಣಿವೆಯ ರಾಜ್ಯಗಳ ಸಂಬಂಧಿಸಿದ ಅಧಿಕಾರಿಗಳು ರಚಿಸಿಕೊಂಡಿರುವ ವಾಟ್ಸ್ ಆಪ್ ಗ್ರುಪ್ ನಲ್ಲಿ ಮಾಹಿತಿ ವಿನಿಮಯ ಮಾಡಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ತುರ್ತು ಕ್ರಮ ಕೈಗೊಳ್ಳುತ್ತಿದ್ದಾರೆ.

ಜಲಾಶಯಕ್ಕೆ ಶುಕ್ರವಾರ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ಭೇಟಿ ನೀಡಿ ಅಲ್ಲಿಯೇ ಅಧಿಕಾರಿಗಳ ಜತೆ ನೀರು ನಿರ್ವಹಣೆಯ ಕುರಿತು ಚರ್ಚಿಸಿದರು.

ಆಲಮಟ್ಟಿ ಜಲಾಶಯದ ಗರಿಷ್ಠ ಎತ್ತರ 519.60 ಮೀ. ಇದ್ದರೂ ಮುಂಜಾಗ್ರತೆ ಕ್ರಮವಾಗಿ ಇನ್ನೂ ಕೆಲ ದಿನ 518 ಮೀ ಒಳಗಡೆಯೇ ನೀರಿನ ಮಟ್ಟವನ್ನು ಕಾಪಾಡಿಕೊಂಡು, ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಸಲು ನಿರ್ಧರಿಸಲಾಗಿದೆ ಎಂದರು.

ಜಲಾಶಯದಿಂದ 2 ಲಕ್ಷ ಕ್ಯುಸೆಕ್ ವರೆಗೂ ನೀರು ಬಿಡುವ ಸಾಧ್ಯತೆಯಿದ್ದ ಬಗ್ಗೆ ನಿಡಗುಂದಿ ತಾಲ್ಲೂಕು ಆಡಳಿತ ಕೃಷ್ಣಾ ತೀರದ ಗ್ರಾಮಗಳಲ್ಲಿ ಡಂಗುರ ಸಾರಿದ್ದರಿಂದ ನದಿ ತೀರದಲ್ಲಿ ರೈತರು ಇಟ್ಟಿದ್ದ ಪಂಪಸೆಟ್ ಮೊದಲೇ ಸುರಕ್ಷಿತಕ್ಕೆ ಸ್ಥಳಾಂತರಿಸಿದ್ದಾರೆ. ಇಲ್ಲದಿದ್ದರೇ ಪ್ರತಿ ಬಾರಿಯೂ ನೀರು ಬಿಟ್ಟಾಗ ಪಂಪಸೆಟ್ ಗಳು ಕೃಷ್ಣೆಯ ಪಾಲಾಗುತ್ತಿದ್ದವು.

ಮುಂದುವರೆದ ಮಳೆಯ ಅಬ್ಬರ

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಶುಕ್ರವಾರ ಕೊಂಚ ತಗ್ಗಿದ್ದರೂ ಪ್ರವಾಹ ಹೆಚ್ಚಿದೆ. ಕೊಯ್ನಾದಲ್ಲಿ 153 ಮಿ.ಮೀ, ದೂದಗಂಗಾದಲ್ಲಿ 163 ಮಿ.ಮೀ, ತುಳಶಿಯಲ್ಲಿ 159 ಮಿ.ಮೀ, ರಾಧಾನಗರಿಯಲ್ಲಿ 148 ಮಿ.ಮೀ, ಪಾತಗಾಂವದಲ್ಲಿ 290 ಮಿ.ಮೀ, ಕಾಸರಿಯಲ್ಲಿ 86 ಮಿ.ಮೀ, ವಾರಣಾದಲ್ಲಿ 88 ಮಿ.ಮೀ, ಧೋಮ ಬಾಕಳವಾಡಿಯಲ್ಲಿ 97 ಮಿ.ಮೀ, ತರಳಿಯಲ್ಲಿ 29 ಮಿ.ಮೀ ಮಳೆಯಾಗಿದೆ.

ವಿದ್ಯುತ್ ಉತ್ಪಾದನೆ

ಆಲಮಟ್ಟಿ ಜಲಾಶಯದ ಹೊರಹರಿವು ಹೆಚ್ಚಿದ್ದರಿಂದ 250 ಮೆಗಾವಾಟ್ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 39,000 ಕ್ಯುಸೆಕ್ ನೀರನ್ನು ವಿದ್ಯುತ್ ಉತ್ಪಾದನಾ ಘಟಕದ ಮೂಲಕ ಹರಿಸಲಾಗುತ್ತಿದೆ ಎಂದು ಕೆಪಿಸಿಎಲ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT