ಶುಕ್ರವಾರ, ಜುಲೈ 30, 2021
23 °C
ಬೆಲೆ ಏರಿಕೆ ವಿರೋಧಿಸಿ, ಕೇಂದ್ರ–ರಾಜ್ಯ ಸರ್ಕಾರಗಳ ವೈಫಲ್ಯ ಖಂಡಿಸಿ ಪ್ರತಿಭಟನೆ

ಜನ ವಿರೋಧಿ ಸರ್ಕಾರ: ದೇವಾನಂದ ಚವ್ಹಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜನವಿರೋಧಿ ಕೇಂದ್ರ ಸರ್ಕಾರ ಜನಸಾಮಾನ್ಯರ ಜೇಬು ಖಾಲಿ ಮಾಡುವ ಕೆಲಸ ಮಾಡುತ್ತಿದೆ. ಜನರ ನಿರೀಕ್ಷೆ ಸುಳ್ಳು ಮಾಡಿ, ನಂಬಿಕೆಗೆ ಮೋಸ ಮಾಡಿವೆ ಎಂದು ನಾಗಠಾಣ ಮತಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಆಕ್ರೋಶ ವ್ಯಕ್ತ ಪಡಿಸಿದರು.

ನಗರದಲ್ಲಿ ಜೆಡಿಎಸ್ ವತಿಯಿಂದ ಬೆಲೆ ಏರಿಕೆ ವಿರೋಧಿಸಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶದ ಜನರು ಮೋದಿ ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಶ್ರೀಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ತೈಲ ಬೆಲೆ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆಯೇರಿಕೆ ಮಾಡಿ ಜನರನ್ನು ಸಂಕಷ್ಟದಲ್ಲಿ ದೂಡಿದೆ ಎಂದು ದೂರಿದರು.

ಪ್ರತಿಯೊಂದು ರಂಗದಲ್ಲಿ ವಿಫಲವಾಗಿರುವ ಸರ್ಕಾರ ದೇಶಕ್ಕೆ ಮಾರಕವಾಗಿವೆ. ಎಲ್ಲ ರೀತಿಯ ವಸ್ತುಗಳಿಗೆ ಜಿಎಸ್‍ಟಿ ಹಾಕಿ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ ಪರಿಣಾಮ ಸಾವು–ನೋವುಗಳು ಹೆಚ್ಚಾದವು. ಪರಿಣಾಮ ಜನಾಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಟದಲ್ಲಿ ನಿರತವಾಗಿರುವ ಪರಿಣಾಮ ಆಡಳಿತದ ಮೇಲೆ ಹಿಡಿತವಿಲ್ಲದೆ ಸರ್ಕಾರ ಹಳಿತಪ್ಪಿದೆ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಕೋವಿಡ್‍ನಿಂದ ಮೃತರಾದ ವ್ಯಕ್ತಿಗಳಿಗೆ ಸರ್ಕಾರ ₹1  ಲಕ್ಷ ಪರಿಹಾರ ಘೋಷಿಸಿರುವುದು ಯಾವುದಕ್ಕೂ ಸಾಲದು. ತಕ್ಷಣವೇ ಕನಿಷ್ಠ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ  ಆಗ್ರಹಿಸಿದರು.,

ನಗರದ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ಪಕ್ಷ ಮುಖಂಡರು, ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಜೆಡಿಎಸ್ ಮಹಿಳಾ ಮುಖಂಡರಾದ ಡಾ.ಸುನೀತಾ ಚವ್ಹಾಣ, ಎಸ್.ಎಸ್. ಖಾದ್ರಿ ಇನಾಮದಾರ, ವಿಶ್ವನಾಥ ಕೋರಿ, ಮಹಿಬೂನ ಬಕ್ಷಿ, ಹುಸೇನ್ ಬಾಗಾಯತ್, ಈರಣ್ಣ ಮೋಟಗಿ, ಸ್ನೇಹಾ ಶೆಟ್ಟಿ, ಮಹಾದೇವಿ ತಳಕೇರಿ, ಸೋಮಪ್ಪ ದೇಸಾಯಿ, ಸುಭಾಷ ನಾಯಿಕ, ಅನ್ವರ್‌ ಮಕಾನದಾರ, ಸಿದ್ದು ಕಾಮತ್, ಮುಕದಸ್ ಇನಾಮದಾರ, ಎಸ್.ವೈ.ನಡುವಿನಕೇರಿ, ಎಸ್.ಎ.ಕಿಣಗಿ, ಎಂ.ಕೆ. ಬಾಗಾಯತ್‌, ಎಂ.ಆರ್. ಕಬಾಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ದೈನಂದಿನ ವಸ್ತುಗಳ ಬೆಲೆ ಇಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
–ಡಾ. ದೇವಾನಂದ ಚವ್ಹಾಣ, ‌ಶಾಸಕ, ನಾಗಠಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು