ಶುಕ್ರವಾರ, ಅಕ್ಟೋಬರ್ 22, 2021
29 °C
ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಸ್ವಚ್ಛ ಪರಿಸರ ನಿರ್ಮಾಣ ರಾಯಬಾರಿಗಳಾಗಿ: ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪರಿಸರ ಸ್ವಚ್ಛತೆಯನ್ನು ಸ್ವಯಂ ಪ್ರೇರಣೆಯಿಂದ ಪ್ರತಿಯೊಬ್ಬರು ಮಾಡಬೇಕು. ಜಿಲ್ಲೆಯನ್ನು ಸ್ವಚ್ಛಗೊಳಿಸಲು ಎಲ್ಲರೂ ಸ್ವಚ್ಛತಾ ರಾಯಬಾರಿಗಳಾಗುವಂತೆ ಕಾರ್ಯ ನಿರ್ವಹಿಸಿದಾಗ ಮಾತ್ರ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ತೀವ್ರಗೊಳ್ಳಬೇಕು. ಮಕ್ಕಳ ಭವಿಷ್ಯಕ್ಕಾಗಿ ಎಲ್ಲರೂ ತಮ್ಮ ನಗರ ಮತ್ತು ಗ್ರಾಮ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಮಧ್ಯಪ್ರದೇಶ ರಾಜ್ಯದ ಇಂದೋರ್ ನಗರ ಜನರ ಸಹಭಾಗಿತ್ವದೊಂದಿಗೆ ಅತ್ಯಂತ ಸ್ವಚ್ಛ ನಗರವಾಗಿ ರೂಪುಗೊಂಡಿದೆ. ಅಂತೆಯೇ, ನಾವೂ ಸಹ ತಮ್ಮ ನಗರ, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಬ್ಬರು ಸ್ವಚ್ಛತೆಗೆ ಒತ್ತು ನೀಡಬೇಕು. ಸ್ವಚ್ಛತಾ ಕಾರ್ಯಗಳು ದೊಡ್ಡ ಮಟ್ಟದಲ್ಲಿ ನಡೆಸುವ ಮೂಲಕ ಗಾಂಧೀಜಿಯವರಿಗೆ ಗೌರವ ಅರ್ಪಿಸೋಣ ಎಂದು ಅವರು ಹೇಳಿದರು.

ಸ್ವಚ್ಛತೆ ವಿಷಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ಮೇಲೆ ಅವಲಂಬನೆ ಆಗದೆ ಜಾತಿ, ಧರ್ಮ ಭೇದಭಾವ ಇಲ್ಲದೆ ಸ್ವಚ್ಛತೆಗೆ ವಿಶೇಷ ಗಮನ ನೀಡಬೇಕು. ನಾವು ಪರಿವರ್ತನೆ ಆದಾಗ ಮಾತ್ರ ಸಮಾಜ ಪರಿವರ್ತನೆ ಮಾಡಲು ಸಾಧ್ಯ ಎಂದು ಹೇಳಿದರು.

ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗು ನಿರ್ಮೂಲನೆ ಕೇವಲ ಮಾತಿನಲ್ಲಿ ಆಗದೆ, ತಮ್ಮ ಸ್ವಯಂ ಮನಸ್ಸುಗಳಿಂದ ನಿರ್ಮೂಲನೆಗೆ ಗಮನ ನೀಡಬೇಕು ಎಂದರು.

ಸೇವಾದಳ ಕಾರ್ಯಕರ್ತರು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ಮೇಲಿನಮನಿ ಅವರು ಗಾಂಧಿ ಪ್ರಿಯಾ ಗೀತೆ ಹಾಡಿದರು, ಕಾಶಿಬಾಯಿ ಸಾವಳಗಿ ಚರಕ ನೂಲಿದರು. ನೆಹರು ಯುವ ಕೇಂದ್ರದ ಸ್ವಚ್ಛ ಭಾರತ ಅಭಿಯಾನ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ದಳವಾಯಿ, ಉಪವಿಭಾಗಾಧಿಕಾರಿ ಬಲರಾಮ್ ಲಮಾಣಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆನಂದಕುಮಾರ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯುವಜನ ಮತ್ತು ಕ್ರೀಡಾಧಿಕಾರಿ ಎಸ್. ಜಿ.ಲೋಣಿ, ನೆಹರು ಯುವ ಕೇಂದ್ರದ ಯುವಸಮನ್ವಯಾಧಿಕಾರಿ ರಾಹುಲ್ ಡೊಂಗರೆ  ಉಪಸ್ಥಿತರಿದ್ದರು.

***

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಪರಿಸರ ಸಂರಕ್ಷಣೆ, ಶಿಕ್ಷಣ, ಗೋರಕ್ಷಣೆ ಸೇರಿದಂತೆ ಇಂತಹ ಹಲವು ತತ್ವಾದರ್ಶಗಳು ನಮಗೆ ಮಾದರಿಯಾಗಿದ್ದು, ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು.
-ಪಿ.ಸುನೀಲ್ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.