ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬದಲು ಬಂಜಾರ ಸಮಾಜದ ಮುಖಂಡ ವೈದ್ಯ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಸಮಾಜದ ಮುಖಂಡರು ಬುಧವಾರ ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
‘ಜಿಗಜಿಣಗಿ ಅವರು ಮೂರು ಬಾರಿ ಸಂಸದ, ಸಚಿವರಾದರೂ ಜಿಲ್ಲೆಗೆ ಯಾವ ಕೊಡುಗೆ ನೀಡಿಲ್ಲ, ಕ್ಷೇತ್ರದ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಮಾತನಾಡಿಲ್ಲ, ವಯಸ್ಸು ಆಗಿರುವುದರ ಜೊತೆಗೆ ಅವರಿಗೆ ಆರೋಗ್ಯವೂ ಸರಿಯಿಲ್ಲ. ಪಕ್ಷದ ಕಾರ್ಯಕರ್ತರ ಜೊತೆ ಸಂಸದರಿಗೆ ಸರಿಯಾದ ಸಂಪರ್ಕವಿಲ್ಲ. ಚುನಾವಣೆ ವೇಳೆ ಮಾತ್ರ ಪಕ್ಷದ ಬಗ್ಗೆ ಮಾತನಾಡುತ್ತಾರೆ, ಉಳಿದ ವೇಳೆ ಅನ್ಯ ಪಕ್ಷಗಳ ಮುಖಂಡರೊಂದಿಗೆ ಇರುತ್ತಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘ಎಸ್‌ಸಿಗೆ ಮೀಸಲಾದ ವಿಜಯಪುರ ಕ್ಷೇತ್ರದಲ್ಲಿ ಬಂಜಾರ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಒಮ್ಮೆಯೂ ಅವಕಾಶ ನೀಡದೇ, ವ್ಯವಸ್ಥಿತವಾಗಿ ಸಮಾಜವನ್ನು ತುಳಿಯುವ ಹುನ್ನಾರ ನಡೆದಿದೆ’ ಎಂದು ಅವರು ದೂರಿದರು.
ಪಕ್ಷದ ಮುಖಂಡರಾದ ಸುರೇಶ ಬಿರಾದಾರ ಮನವಿ ಸ್ವೀಕರಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ದೂರವಾಣಿ ಮೂಲಕ ಬಂಜಾರ ಸಮಾಜದ ಮುಖಂಡರ ಜೊತೆ ಮಾತನಾಡಿ, ಸಮಾಜದ ಬೇಡಿಕೆ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತಂದು, ಸೂಕ್ತ ನ್ಯಾಯ ಕೊಡಿಸುವುದಾಗಿ ತಿಳಿಸಿದರು.