ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಬಿಟ್ಟು ಹೋಗಲಾರೆ: ಶಿವಾನಂದ ಪಾಟೀಲ

Last Updated 6 ಫೆಬ್ರುವರಿ 2023, 15:35 IST
ಅಕ್ಷರ ಗಾತ್ರ

ನಿಡಗುಂದಿ: ಬಸವನಬಾಗೇವಾಡಿ ಕ್ಷೇತ್ರಾದ್ಯಂತ 15 ವರ್ಷಗಳಲ್ಲಿ ನೀರಾವರಿ, ಕುಡಿಯುವ ನೀರು, ರಸ್ತೆ ಸೌಕರ್ಯ ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರ ಹಾಗೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ, ಯಾರಾದರೂ ಸೋಲಿಸುವುದಾಗಿ ಮುಂದೆ ಬಂದರೆ ಅವರ ವಿರುದ್ದ ಸೆಡ್ಡು ಹೊಡೆದು ಚುನಾವಣೆ ಮಾಡುವೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಹೊರವಲಯದ ಕಮದಾಳ ಪುನರ್ವಸತಿ ಕೇಂದ್ರದ ಮುದ್ದೇಶಪ್ರಭು ಮಂಗಲ ಕಾರ್ಯಾಲಯದಲ್ಲಿ ಸೋಮವಾರ ನಡೆದ ‘ಪ್ರಜಾಧ್ವನಿ’ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ನಿಡಗುಂದಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಸವನಬಾಗೇವಾಡಿ ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಲು ಆಗಿಲ್ಲ, ಅಲ್ಲಿಯ ಕಾರ್ಯಕರ್ತರಲ್ಲಿಯೇ ಸಾಕಷ್ಟು ಗೊಂದಲಗಳಿವೆ. ಇನ್ನೂ ಅವಧಿ ಪೂರ್ಣಗೊಳ್ಳುತ್ತಾ ಬಂದರು ಸಚಿವ ಸಂಪುಟ ಪೂರ್ತಿ ಭರ್ತಿ ಮಾಡಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ, ಮುಖ್ಯಮಂತ್ರಿಗಳಿಗೂ ಆ ಅಧಿಕಾರ ಇಲ್ಲದಂತಾಗಿದೆ ಎಂದರು.

ತಾಲ್ಲೂಕಿನಲ್ಲಿ ಮುಳವಾಡ ಏತ ನೀರಾವರಿ ಯೋಜನೆಯನ್ನು ಮೊಟ್ಟ ಮೊದಲು ಜಾರಿಗೆ ಬಂದಿದ್ದು ಮಲ್ಲಿಕಾರ್ಜುನ ಖರ್ಗೆ ಜಲಸಂಪನ್ಮೂಲ ಸಚಿವರಾಗಿದ್ದಾಗ. ಆಗ ನಾನು ಶಾಸಕನಾಗಿದ್ದೆ ಎಂದರು.

ಕ್ಷೇತ್ರದ ಬಹುತೇಕ ಭಾಗ ನೀರಾವರಿಯಾಗಿದೆ. ಇದರಿಂದಾಗಿ ಕಬ್ಬು, ಅಜವಾನ, ರೇಷ್ಮೆ ಅತ್ಯಂತ ಹೆಚ್ಚು ಬೆಳೆಯಲಾಗುತ್ತಿದ್ದು, ಇಲ್ಲಿಯ ಭೂಮಿಗೆ ಚಿನ್ನದ ಬೆಲೆ ಬಂದಿದೆ ಎಂದರು.

ಆರೋಗ್ಯ ಕ್ಷೇತ್ರ ನಿರ್ಲಕ್ಷ್ಯ:

ನಾನು ಆರೋಗ್ಯ ಸಚಿವನಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ನಾನಾ ಕೆಲಸಗಳನ್ನು ಮಾಡಿದೆ. ಅಲ್ಲಿಯವರೆಗೆ ಬರುತ್ತಿದ್ದ ಅನುದಾನ ತಾರತಮ್ಯ ನಿವಾರಿಸಿ ಉತ್ತರ ಕರ್ನಾಟಕ್ಕೆ ಬರುವ ಅನುದಾನ ಹೆಚ್ಚಿಸಿದೆ. ಟ್ರೋಮಾ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ವಿಜಯಪುರದಲ್ಲಿ ಆರಂಭಿಸಿದೆ. ಉತ್ತರ ಕರ್ನಾಟಕಕ್ಕೂ ಆದ್ಯತೆ ಸಿಗಬೇಕು ಎನ್ನುವ ದೃಷ್ಠಿಯಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಚ್ಚುವರಿ ನಿರ್ದೇಶಕರ ಹುದ್ದೆ ಹಾಗೂ ಕಚೇರಿ ಆರಂಭಕ್ಕೆ ಅನುಮತಿ ನೀಡಿದೆ. ಆದರೆ, ಮುಂದೆ ಬಂದ ಬಿಜೆಪಿ ಸರ್ಕಾರ ಆ ಕಚೇರಿ ಆರಂಭಕ್ಕೆ ತಡೆ ನೀಡಿತು. ಬಿಜೆಪಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಸಿದ್ದಣ್ಣ ನಾಗಠಾಣ, ಮಂಜುನಾಥ ಹಿರೇಮಠ, ಸಂಗಮೇಶ ಬಳಿಗಾರ, ರಫೀಕ್ ಪಕಾಲಿ, ಶೇಖರ ದಳವಾಯಿ, ರಾಮನಗೌಡ ಪಾಟೀಲ, ಬಸನಗೌಡ ನರಸನಗೌಡರ, ರಾಮು ಜಗತಾಪ, ಮಲ್ಲು ಕಾಮನಕೇರಿ, ಮಲ್ಲು ವಡವಡಗಿ, ಸಂಗಮೇಶ ಕೆಂಭಾವಿ, ಗುರುಸಿದ್ದ ಕಾಮನಕೇರಿ ಇನ್ನೀತರರು ಇದ್ದರು. ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT