ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ದೀಪಾವಳಿ ಸಂಭ್ರಮ- ಖರೀದಿ ಜೋರು

ಮನೆ,ಮನ ಅಲಂಕಿರಿಸಿದ ಆಕಾಶಬಿಟ್ಟಿ, ಹಣತೆ, ರಂಗೋಲಿ ಚಿತ್ತಾರ
Last Updated 3 ನವೆಂಬರ್ 2021, 13:52 IST
ಅಕ್ಷರ ಗಾತ್ರ

ವಿಜಯಪುರ: ’ಬೆಳಕಿನ ಹಬ್ಬ‘ ದೀಪಾವಳಿ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಾನು, ಆಕಾಶಬುಟ್ಟಿ, ಹಣತೆ, ಆಲಂಕಾರಿಕ ಸಾಮಗ್ರಿ ಖರೀದಿಸಲು ನಗರದ ಮಾರುಕಟ್ಟೆಗಳಿಗೆ ಬುಧವಾರ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಮನೆಗಳ ಎದುರು ಮಹಿಳೆಯರು ಬಗೆಬಗೆಯ ರಂಗೋಲಿ ಚಿತ್ರಿಸಿ ಹಣತೆಗಳನ್ನು ಬೆಳಗಿಸುವ, ಆಕಾಶ ಬುಟ್ಟಿಗಳನ್ನು ತೂಗಿಬಿಟ್ಟಿರುವ ದೃಶ್ಯ ಮನಮಹೋಕವಾಗಿ ಕಂಡುಬರುತ್ತಿದೆ.

ಲಕ್ಷ್ಮಿ ಪೂಜೆಗಾಗಿ ವರ್ತಕರು ತಮ್ಮ ಅಂಗಡಿ–ಮಳಿಗೆಗಳ ಎದುರು ಶಾಮೀಯಾನ ಹಾಕಿ ವಿದ್ಯುತ್‌ ದೀಪಗಳಿಂದ ಅಲಂಕರಿಸಿರುವುದು ಎಲ್ಲೆಡೆ ಕಾಣಿಸುತ್ತಿದೆ. ಅಲ್ಲದೇ, ವಾಹನಗಳ ಪೂಜೆಗೂ ಸಿದ್ಧತೆ ನಡೆದಿದೆ. ಬಗೆಬಗೆಯ ಪಟಾಕಿಗಳ ಖರೀದಿಯಲ್ಲಿ ಮಕ್ಕಳು ತೊಡಗಿದ್ದಾರೆ.

ನಗರದ ಎಂ.ಜಿ.ರಸ್ತೆ, ಸರಾಫ್‌ ಬಜಾರ್‌, ಸಿದ್ದೇಶ್ವರ ಗುಡಿ ರಸ್ತೆ, ಅಂಬೇಡ್ಕರ್‌ ಸರ್ಕಲ್‌, ಸ್ಟೋಷನ್‌ ರೋಡ್‌, ಬಾಗಲಕೋಟೆ ರೋಡ್‌, ಜಲನಗರ,ಸೋಲಾಪುರ ರಸ್ತೆ, ಲಿಂಗದಗುಡಿ ರಸ್ತೆ, ಶಿವಾಜಿ ಸರ್ಕಲ್‌, ಎಲ್‌ಬಿಎಸ್‌ ಮಾರ್ಕೆಟ್‌, ಜೈನ ಮಂದಿರ ಎದುರಿನ ಮಾರುಕಟ್ಟೆ ಸೇರಿದಂತೆ ಪ್ರಮುಖ ವಾಣಿಜ್ಯ ಮಳಿಗೆಗಳು, ಮಾಲ್‌ಗಳಲ್ಲಿ ಜನಜಂಗುಳಿ ಕಂಡುಬಂತು. ಎರಡು –ಮೂರು ದಿನಗಳಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ವಹಿವಾಟು ಭರ್ಜರಿಯಾಗಿ ನಡೆಯುತ್ತಿದೆ.

ಹಣ್ಣು, ತರಕಾರಿ, ದಿನಸಿ, ಬಟ್ಟೆ ಹಾಗೂ ಸಿಹಿ ತಿನಿಸು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಗಿಡ, ಕುಂಬಳಕಾಯಿ, ಮಾವಿನ ಎಲೆ ಮಾರುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಹೊಸ ಬಟ್ಟೆ, ಸಹಿ ಪದಾರ್ಥಗಳ ಖರೀದಿಯೂ ಹೆಚ್ಚಿತ್ತು. ಗುರುವಾರ ಮತ್ತು ಶುಕ್ರವಾರ ಅಂಗಡಿ, ಹೋಟೆಲ್‌, ಕಾರ್ಖಾನೆ, ಮನೆಗಳಲ್ಲಿ ಲಕ್ಷ್ಮಿ ಪೂಜೆಗೆ ಸಿದ್ಧತೆ ನಡೆದಿದೆ.

ಗಗನಕ್ಕೇರಿದ ಬೆಲೆ:ಹಬ್ಬದ ಹಿನ್ನೆಲೆಯಲ್ಲಿ ಬಾಳೆ ಹಣ್ಣು, ಸೇಬು ಹಣ್ಣು, ದಾಳಿಂಬೆ, ತೆಂಗಿನಕಾಯಿ, ಚೆಂಡುಹೂವು, ಸೇವಂತಿಗೆ, ಮಲ್ಲಿಗೆ, ಸುಗಂಧರಾಜ ಹೂವು ಬೆಲೆಯೂ ಏರಿಯಾಗಿದೆ.

ಹೂವು, ಹಣ್ಣಿನ ಜತೆಗೆ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದವು. ಪೂಜಾ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT