ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ | ‘ಕನ್ನಡಿಗನಲ್ಲಿ ಭಾಷಾಭಿಮಾನ ಜಾಗೃತಗೊಳ್ಳಲಿ’

Published 6 ಡಿಸೆಂಬರ್ 2023, 13:42 IST
Last Updated 6 ಡಿಸೆಂಬರ್ 2023, 13:42 IST
ಅಕ್ಷರ ಗಾತ್ರ

ಸಿಂದಗಿ: ಅನ್ಯ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಅಗ್ರಸ್ಥಾನ ನೀಡುತ್ತಿವೆ. ಆದರೆ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಯೋಗ್ಯ ಸ್ಥಾನಮಾನ ಸಿಗದಿರುವುದು ಕಳವಳಕಾರಿ ಸಂಗತಿ ಎಂದು ಪ್ರಾಧ್ಯಾಪಕ ಅರವಿಂದ ಮನಗೂಳಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿಯ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದಿಂದ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಭಾಷೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಕನ್ನಡ ಭಾಷೆ ಉಳಿಯಲು ಪ್ರತಿಯೊಬ್ಬ ಕನ್ನಡಿಗನಲ್ಲಿ ಭಾಷಾಭಿಮಾನ ಜಾಗೃತಗೊಳ್ಳಬೇಕು ಎಂದರು.

ಕಲ್ಲವ್ವ ಹೆಗ್ಗನದೊಡ್ಡಿ ದತ್ತಿ ಉಪನ್ಯಾಸದಲ್ಲಿ ‘ಶಿಕ್ಷಣ ಮತ್ತು ಸಾಹಿತ್ಯ’ ವಿಷಯವಾಗಿ ಪದ್ಮರಾಜ ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ವಿಷಯ ಉಪನ್ಯಾಸಕಿ ಹೇಮಾ ಹಿರೇಮಠ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ ಅಂಕಗಳ ಆಧಾರಿತವಾಗಿದೆ. ಇದು ನೈಜವಾದ ಶಿಕ್ಷಣವಲ್ಲ. ಸ್ವಾವಲಂಬಿ ಬದುಕು, ಆತ್ಮಸ್ಥೈರ್ಯ ಬೆಳೆಸುವ ಶಿಕ್ಷಣ ಕಣ್ಮರೆಯಾಗುತ್ತಲಿದೆ. ಶಿಕ್ಷಣದಲ್ಲಿ ಸಾಹಿತ್ಯ ಸೇರಿಕೊಂಡಾಗಲೆ ಬದುಕು ಸುಂದರಗೊಳಿಸುತ್ತದೆ. ಶಿಕ್ಷಣ ಮತ್ತು ಸಾಹಿತ್ಯ ಎರಡು ಕಣ್ಣುಗಳಿದ್ದಂತೆ ಎಂದು ತಿಳಿಸಿದರು.

ಗೌರಮ್ಮ ವಾಡೇದ ದತ್ತಿ ಉಪನ್ಯಾಸದಲ್ಲಿ ‘ಜಾನಪದ ಸಾಹಿತ್ಯದಲ್ಲಿ ನೀತಿ’ ಕುರಿತಾಗಿ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ವಿಷಯ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಮಾತನಾಡಿ, ಬೀಜದಲ್ಲಿ ವೃಕ್ಷ ಅಡಗಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಜಾನಪದ ನೀತಿ ಅಡಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಜಾನಪದ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ಜಾನಪದ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.

ದತ್ತಿ ದಾನಿಗಳಾದ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಪ್ರೊ.ರಾಮಚಂದ್ರ ವಾಡೇದ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬಡಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಗೌರವ ಕಾರ್ಯದರ್ಶಿ ಶಿವಕುಮಾರ ಕಲ್ಲೂರ, ಕೋಶಾಧ್ಯಕ್ಷ ಅಬ್ದುಲ್ ಖಾದರ ವಾಲೀಕಾರ, ಚಂದ್ರಶೇಖರ ದೇವರಡ್ಡಿ, ಅಶೋಕ ಸುಲ್ಪಿ, ಶಾಂತಪ್ಪ ರಾಣಾಗೋಳ, ಅನಿತಾ ಹಾರಿವಾಳ, ಶಾಂತಿಲಾಲ ಚವ್ಹಾಣ, ಸಿದ್ಧಲಿಂಗ ಕಿಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT