ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು: ಬೆಂಗಳೂರು, ಬೆಳಗಾವಿ, ವಿಜಯಪುರದಲ್ಲಿ ಅಧಿಕ

ಬೆಂಗಳೂರು, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣ
ಬಸವರಾಜ್‌ ಸಂಪಳ್ಳಿ
Published 12 ಜನವರಿ 2024, 3:22 IST
Last Updated 12 ಜನವರಿ 2024, 3:22 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಬಾಲಕಿಯರು 18 ವರ್ಷ ತುಂಬುವ ಒಳಗೆ ಗರ್ಭಿಣಿ ಆಗುತ್ತಿರುವ ಪ್ರಕರಣಗಳಲ್ಲಿ ಭಾರಿ ಏರಿಕೆ ಆಗಿದೆ.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಪೋರ್ಟಲ್‌ ಪ್ರಕಾರ, 2023ರ ಜನವರಿಯಿಂದ ನವೆಂಬರ್‌ ವರೆಗಿನ 11 ತಿಂಗಳಲ್ಲಿ ರಾಜ್ಯದ 28,657 ಬಾಲಕಿಯರು ಗರ್ಭಿಣಿಯರು ಆಗಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 2,815 ಬಾಲಗರ್ಭಿಣಿಯರು ಬೆಂಗಳೂರಿನಲ್ಲಿದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 2,254 ಮಂದಿ ಗರ್ಭಿಣಿಯರು ಇದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 2,004 ಬಾಲಕಿಯರು ಗರ್ಭಿಣಿಯರಾಗಿದ್ದರೆ, ಅತೀ ಕಡಿಮೆ ಅಂದರೆ, 56 ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ.

‘ಬಾಲಕಿಯರು ಗರ್ಭಿಣಿ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೋಕ್ಸೊ ಕಾಯ್ದೆ 2012 ಸೆಕ್ಷನ್ 19ರಡಿ ಪೊಲೀಸ್ ಠಾಣೆಗೆ ದೂರು ನೀಡಬೇಕಿತ್ತು. ಆದರೆ, ಈ ಕೆಲಸ ನಡೆದಿಲ್ಲ’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಗ್ರಾಮದಿಂದ ರಾಜ್ಯಮಟ್ಟದವರೆಗೆ 59 ಸಾವಿರ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಇದ್ದಾರೆ. ಬಾಲ್ಯ ವಿವಾಹ ತಡೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರು ಸಹ ನಿಯಂತ್ರಣಕ್ಕೆ ಬಂದಿಲ್ಲ’ ಎಂದರು.

‘ಶಾರೀರಿಕ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಆಗದೇ ವಿವಾಹವಾಗುವ ಬಾಲಕಿಯರಿಗೆ ಹಲವು ಸ್ವರೂಪಗಳಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಗರ್ಭಿಣಿಯರಾದರೆ ರಕ್ತಹೀನತೆ ಮತ್ತು ಪೌಷ್ಟಿಕಾಂಶದ ಕೊರತೆ ತಲೆದೋರುತ್ತದೆ. ತಾಯಿ ಮತ್ತು ಮಗು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳು ಜನಿಸುವ ಸಾಧ್ಯತೆ ಇರುತ್ತದೆ’ ಎಂದರು. 

‘ಬಾಲಕಿಯರು ಗರ್ಭಿಣಿ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಅವರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುತ್ತೇವೆ. ಬಾಲಕಿಯರು ಗರ್ಭಿಣಿ ಆಗುವುದು ತಡೆಯಬೇಕಿದ್ದರೆ, ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಚ್ಚು ಒತ್ತು ನೀಡಬೇಕು’ ಎಂದು ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರ್‌ಸಿಎಚ್‌ ಅಧಿಕಾರಿ ಡಾ.ಗುಂಡಬಾವಡಿ ಕೆ.ಡಿ ತಿಳಿಸಿದರು.

ಬಾಲ ಗರ್ಭಿಣಿಯರು ವಿಷಯಕ್ಕೆ ಸಂಬಂಧಿಸಿದಂತೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಕೇಂದ್ರ ಕಚೇರಿಯ ಆರ್‌ಸಿಎಚ್‌ ವಿಭಾಗದ ಉಪ ನಿರ್ದೇಶಕ ಡಾ.ಎನ್‌.ರಾಜಕುಮಾರ್‌ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರಿಂದ ಮಾಹಿತಿ ಲಭ್ಯವಾಗಲಿಲ್ಲ.

ಬಾಲ ಗರ್ಭಿಣಿಯರಾಗಿರುವ ಸಂತ್ರಸ್ತೆಯರಿಗೆ ಪರಿಹಾರ ಕ್ರಮಕ್ಕೆ ಸರ್ಕಾರ ಮುಂದಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು
ಶಶಿಧರ ಕೋಸಂಬೆ,  ಸದಸ್ಯ ಕರ್ನಾಟಕ ರಾಜ್ಯ ಮಕ್ಕಳ‌ ಹಕ್ಕುಗಳ ರಕ್ಷಣಾ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT