ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇವಾಡಿ ಬಸವೇಶ್ವರ ಜಾತ್ರೆಗೆ ಕ್ಷಣಗಣನೆ

–ಪ್ರಕಾಶ.ಎನ್.ಮಸಬಿನಾಳ
Published 25 ಆಗಸ್ಟ್ 2024, 6:20 IST
Last Updated 25 ಆಗಸ್ಟ್ 2024, 6:20 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿಕೊಟ್ಟ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಬಸವೇಶ್ವರ (ಮೂಲನಂದೀಶ್ವರ) ಜಾತ್ರೆಯ ಸಂಭ್ರಮಕ್ಕೆ ಕ್ಷಣ ಗಣನೆ ಆರಂಭವಾಗಿದೆ.

ಆ.26 ರಿಂದ 30ರ ವರೆಗೆ ನಡೆಯಲಿರುವ ಜಾತ್ರೆಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಜಾತ್ರಾ ಉತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿ ಸೇರಿದಂತೆ ಬಸವ ಭಕ್ತರು ಜಾತ್ರೆಗೆ ಬರುವ ಜನರ ವಸತಿ, ದಾಸೋಹ ವ್ಯವಸ್ಥೆ ಸೇರಿದಂತೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಶ್ರಾವಣ ಮಾಸದ ಆರಂಭದ ದಿನದಿಂದಲೇ ಮೂಲನಂದೀಶ್ವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ನಂದಿ ಮೂರ್ತಿಗೆ ನಡೆಯುತ್ತಿರುವ ಅಭಿಷೇಕದಲ್ಲಿ ನೂರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ದೂರದ ಊರುಗಳ ಭಕ್ತರು ಅಭಿಷೇಕ ಮಾಡಿಸಿ, ದೀಡ್‌ ನಮಸ್ಕಾರ ಹಾಕಿ, ಅಡುಗೆ ಮಾಡಿ ನೈವೇದ್ಯ ಅರ್ಪಿಸುವ ಮೂಲಕ ಹರಕೆ ತೀರಿಸಲಿದ್ದಾರೆ.

ಬಸವೇಶ್ವರ ದೇವಸ್ಥಾನ ಸಿ.ಬಿ.ಎಸ್.ಇ ಶಾಲೆ ಆವರಣದಲ್ಲಿ ಪ್ರತಿದಿನ ಸಂಜೆ ಕೊಪ್ಪಳ ಜಿಲ್ಲೆಯ ಬಳೂಟಗಿಯ ಶಿವಕುಮಾರ ಸ್ವಾಮೀಜಿ ನಡೆಸಿಕೊಡುತ್ತಿರುವ ವಚನ ಚಿಂತನ ಪ್ರವಚನವನ್ನು ಜನರು ಆಲಿಸುತ್ತಿದ್ದಾರೆ.

ಜಾತ್ರೆಯ ಅಂಗವಾಗಿ ಬಸವೇಶ್ವರ ದೇವಸ್ಥಾನ, ಬಸವ ವೃತ್ತಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ದೇವಸ್ಥಾನದ ಪಕ್ಕದಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಾಸೋಹಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.

15 ಕಿ.ಮೀ ಸಾಗುವ ಪಲ್ಲಕ್ಕಿ ಉತ್ಸವ: ಆ.26 ರಂದು ಬೆಳಿಗ್ಗೆ ಜಾತ್ರೆಗೆ ಚಾಲನೆ ಸಿಗುತ್ತಿದ್ದಂತೆ ಆರಂಭವಾಗುವ ಪಲ್ಲಕ್ಕಿ ಉತ್ಸವವು ಸುಮಾರು 15 ಕಿ.ಮೀ ಸಾಗಲಿದೆ. ಹೋರಿಮಟ್ಟಿ ಗುಡ್ಡದ ದೇವಸ್ಥಾನ, ಬಸವನಹಟ್ಟಿ, ಬುತ್ತಿ ಬಸವಣ್ಣ ದೇವಸ್ಥಾನದಿಂದ ಮುದ್ದೇಬಿಹಾಳ ರಸ್ತೆ ಮಾರ್ಗವಾಗಿ ಸಂಜೆ ಪಟ್ಟಣಕ್ಕೆ ಆಗಮಿಸುವ ಪಲ್ಲಕ್ಕಿಯನ್ನು ವಿವಿಧ ಕಲಾ ತಂಡ, ವಾದ್ಯಗಳೊಂದಿಗೆ ಮೆರೆವಣಿಗೆ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಬುತ್ತಿ ಜಾತ್ರೆ: ಪಲ್ಲಕ್ಕಿ ಉತ್ಸವ ಸಂಜೆ ಬುತ್ತಿ ಬಸವಣ್ಣನ ದೇವಸ್ಥಾನಕ್ಕೆ ಬರುತ್ತಿದ್ದಂತೆ ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸಿದ ನಂತರ ಕೊಟ್ರಶೆಟ್ಟಿ ಮನೆತನದವರು ಮನೆಯಿಂದ ತಂದ ಬುತ್ತಿಯನ್ನು ಭಕ್ತರಿಗೆ ಊಣಬಡಿಸುತ್ತಾರೆ.

ವೈವಿಧ್ಯಮಯಕಾರ್ಯಕ್ರಮ 

ಆ.26 ರಂದು ಬೆಳಿಗ್ಗೆ ವಿವಿಧ ವಾದ್ಯಗಳೊಂದಿಗೆ ಸ್ಥಳೀಯ ವಿರಕ್ತಮಠದ ಮುರಘೇಂದ್ರ ಸ್ವಾಮೀಜಿ ಸಿದ್ಧಲಿಂಗ ಸ್ವಾಮೀಜಿ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ಅಲಂಕೃತ ಉತ್ಸವ ನಂದಿ ಮೂರ್ತಿಯನ್ನು ಹೊತ್ತ ಬೆಳ್ಳಿ ಪಲ್ಲಕ್ಕಿ ಉತ್ಸವವು ಬಸವೇಶ್ವರ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಪುರಾಣ ಪ್ರಸಿದ್ದ ಹೋರಿಮಟ್ಟಿ ಗುಡ್ಡಕ್ಕೆ ತೆರಳವುದು. ಸಂಜೆ ಕಂಬಿ ಕಟ್ಟೆಗೆ ಆಗಮಿಸುವ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ಬರಮಾಡಿಕೊಳ್ಳುವುದು. ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಆಕರ್ಷಕ ಸಿಡಿ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ  ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಆ.27 ರಂದು ಬೆಳಿಗ್ಗೆ ಗೀಗೀ ಚೌಡಕಿ ಡೊಳ್ಳು ಭಜನಾ ಪದಗಳ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ ಜಂಗೀ ಕುಸ್ತಿಗಳು ನಡೆಯಲಿವೆ. ರಾತ್ರಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ. ಆ.28 ರಂದು ಬೆಳಿಗ್ಗೆ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆ ನಡೆಯುವುದು ಮಧ್ಯಾಹ್ನ ನಿರ್ಣಾಯಕ ಜಂಗೀ ಕುಸ್ತಿ ಜರುಗುವುದು. ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ. ಆ.29 ರಂದು ಕೃಷಿ ಮೇಳಕ್ಕೆ ಚಾಲನೆ ಸಂಜೆ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗುವುದು. ಆ.30 ರಂದು ರಾತ್ರಿ ಜಾನಪದ ಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT