ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ‘ಇದೇನು ಜೀವ ತೆಗೆಯುವ ರೋಗವಲ್ಲ’

Last Updated 16 ಜುಲೈ 2020, 13:49 IST
ಅಕ್ಷರ ಗಾತ್ರ

ವಿಜಯಪುರ: ಜೂನ್‌ 15 ರಂದು ಖಾಜಾ ನಗರದ ಕೊಳಗೇರಿ ನಿವಾಸಿಯೊಬ್ಬರಿಗೆ ಕೋವಿಡ್‌ ಪಾಸಿಟಿವ್‌ ಬಂತು. ಈ ಸಂದರ್ಭದಲ್ಲಿ ವೈದ್ಯರ ತಂಡ ಸಾಮೂಹಿಕ ಆರೋಗ್ಯ ತಪಾಸಣೆಗೆ ಮುಂದಾದಾಗ ಅಲ್ಲಿಯ ಜನ ವೈದ್ಯ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದರು. ತಪಾಸಣೆ ಮಾಡಿಸಿಕೊಳ್ಳಲು ನಿರಾಕರಿಸಿದರು.

ಸಿಬ್ಬಂದಿ ಮೇಲೆ ಹಲ್ಲೆಗೂ ಮುಂದಾದರು. ಈ ಸಂದರ್ಭದಲ್ಲಿ ನಾನು ಸ್ಥಳಕ್ಕೆ ತೆರಳಿ ಜನರ ಮನವೊಲಿಸಿ, ಜಾಗೃತಿ ಮೂಡಿಸಿದೆ. ಜೀವದ ಹಂಗು ತೊರೆದು, ಮನೆ ಮಂದಿಯನ್ನು ಬಿಟ್ಟು ನಮ್ಮ ಆರೈಕೆಗೆ ಬಂದಿರುವವರಿಗೆ ಯಾವುದೇ ತೊಂದರೆ ಮಾಡದೇ ಸಹಕರಿಸಬೇಕು ಎಂದು ಮನವಿ ಮಾಡಿದೆ. ಬಳಿಕ ಎಲ್ಲರೂ ತಪಾಸಣೆಗೆ ಸಹಕರಿಸಿದರು. ಇದಾದ ಮೂರ್ನಾಲ್ಕು ದಿನಗಳಲ್ಲೇ ನನಗೆ ಜ್ವರ ಬಂತು. ಮರುದಿನ ಪತ್ನಿಗೂ ಜ್ವರ ಕಾಣಿಸಿಕೊಂಡಿತು. ಅನುಮಾನ ಬಂದು ಜಿಲ್ಲಾಸ್ಪತ್ರೆಗೆ ತೆರಳಿ ಜೂನ್‌ 20 ರಂದು ಗಂಟಲುದ್ರವ ಪರೀಕ್ಷೆ ಮಾಡಿಸಿದೆವು. ಜೂನ್‌ 22ಕ್ಕೆ ಇಬ್ಬರಿಗೂ ಕೋವಿಡ್‌ ಪಾಸಿಟಿವ್‌ ದೃಢಪಟ್ಟಿತು.

‘ಕೋವಿಡ್‌ಗೆ ಹೆದರುವ ಅಗತ್ಯವಿಲ್ಲ, ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ ಬಳಸಿ, ಪರಸ್ಪರ ಅಂತರ ಕಾಪಾಡಿ’ ಎಂದು ಜನರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ತುಂಬುತ್ತಿದ್ದ ನನಗೇ ಕೋವಿಡ್‌ ಪಾಸಿಟಿವ್‌ ಎಂಬುದು ದೃಢವಾದಾಗ ಒಮ್ಮೆ ಆಘಾತವಾಯಿತು. ಸ್ವಲ್ಪ ಧೃತಿಗೆಟ್ಟೆ. ಆದರೆ, ತಾಯಿ ಮತ್ತು ಮಕ್ಕಳು ನಮ್ಮಿಬ್ಬರಿಗೆ ಧೈರ್ಯ ತುಂಬಿದರು.

ಜಿಲ್ಲಾಸ್ಪತ್ರೆಗೆ ದಾಖಲಾದೆವು. ಸರ್ಕಾರಿ ವೈದ್ಯರು ಬಹಳ ಚನ್ನಾಗಿ ನೋಡಿಕೊಂಡರು. ಅದಕ್ಕೂ ಹೆಚ್ಚಾಗಿ ಮಾನಸಿಕವಾಗಿ ಧೈರ್ಯ ತುಂಬಿದರು. ನಾನು ಪ್ರತಿ ದಿನ ಬೆಳಿಗ್ಗೆ ಲಘು ವ್ಯಾಯಾಮ ಮಾಡಿದೆ. ಒಂದೆರಡು ದಿನದಲ್ಲೇ ಜ್ವರವೂ ಹೋಯಿತು. ಒಂಬತ್ತು ದಿನಗಳ ಬಳಿಕ ಜುಲೈ 1ಕ್ಕೆ ಇಬ್ಬರೂ ಮನೆಗೆ ಮರಳಿದೆವು.

ಸದ್ಯ ಮನೆಯಲ್ಲೇ ಇದ್ದೇನೆ. ಇದೀಗ ನೆರೆಹೊರೆಯವರು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ಹೀಗಾಗಿ ಹೊರಗಡೆ ಎಲ್ಲಿಯೂ ಅಡ್ಡಾಡುತ್ತಿಲ್ಲ. ಅಲ್ಲದೇ, ಜನರಿಗೆ ಕೋವಿಡ್‌ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಹೀಗಾಗಿ ನಮ್ಮನ್ನು ಕಂಡರೆ ಅಶುದ್ಧ ಎಂಬಂತೆ ಭಾವಿಸಿ, ದೂರ ಹೋಗುತ್ತಾರೆ. ಸದ್ಯ ದೂರ ಇರುವುದೇ ಉತ್ತಮ. ನಮ್ಮಿಂದ ಬೇರೆಯವರಿಗೆ ಸಮಸ್ಯೆ ಆಗದಿರಲಿ ಎಂಬ ಕಾರಣಕ್ಕೆ ನಾನೂ ಯಾರೊಂದಿಗೂ ಬೆರೆಯುತ್ತಿಲ್ಲ. ಆದರೆ, ಸ್ನೇಹಿತರು, ಕುಟುಂಬದವರು ಭೇಟಿ ಮಾಡಿ ಹೋಗುತ್ತಿದ್ದಾರೆ.

ಕೋವಿಡ್‌ ಅಪಾಯಕಾರಿ ರೋಗವೇನಲ್ಲ. ಆದರೆ, ಅದು ಬರದಂತೆ ತಡೆಯಲು ಎಚ್ಚರವಹಿಸುವುದು ಮುಖ್ಯ. ಕೋವಿಡ್‌ ಬಂದ ತಕ್ಷಣ ಯಾವುದೇ ಕಾರಣಕ್ಕೂ ಅಂಜಬಾರದು, ಗಾಬರಿಯಾಗಬಾರದು, ಧೈರ್ಯಗುಂದ ಬಾರದು. ಇದೇನು ಜೀವ ತೆಗೆಯುವ ರೋಗವಲ್ಲ. ಒಂದೆರಡು ವಾರದಲ್ಲೇ ಪಾಸಿಟಿವ್‌ ಇದ್ದವರು ನೆಗೆಟಿವ್‌ ಆಗುವುದು ನಿಶ್ಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT