ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆ ಮೀರಿದ ಕೋವಿಡ್ ಸೋಂಕು; ಇಬ್ಬರು ಸಾವು

ಶುಕ್ರವಾರ ಒಂದೇ ದಿನ 429 ಜನರಿಗೆ ಕೋವಿಡ್‌ ಪಾಸಿಟಿವ್
Last Updated 23 ಏಪ್ರಿಲ್ 2021, 15:28 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಎಲ್ಲೆ ಮೀರಿ ವ್ಯಾಪಿಸತೊಡಗಿದೆ. ಶುಕ್ರವಾರ 57 ಮತ್ತು 66 ವರ್ಷ ವಯೋಮಾನದ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ. ಅಲ್ಲದೇ, 429 ಜನರಿಗೆ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ.

ವಿಜಯಪುರ ನಗರವೊಂದರಲ್ಲೇ 240 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಇಂಡಿ 41, ಮುದ್ದೇಬಿಹಾಳ 41, ವಿಜಯಪುರ ಗ್ರಾಮೀಣ 36, ಬಸವನ ಬಾಗೇವಾಡಿ 30 ಮತ್ತು ತಿಕೋಟಾ ತಾಲ್ಲೂಕಿನಲ್ಲಿ 16 ಜನರು ಕೋವಿಡ್‌ ಪಾಸಿಟವ್‌ ಪೀಡಿತರಾಗಿದ್ದಾರೆ.

ಅಂಗಡಿ, ಮಳಿಗೆಗಳು ಬಂದ್‌:ನಗರದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಶುಕ್ರವಾರ ವ್ಯಾಪಾರ, ವಹಿವಾಟು ಕ್ಷೀಣವಾಗಿತ್ತು. ಇಲ್ಲಿನ ಶಾಸ್ತ್ರಿ ಮಾರುಕಟ್ಟೆ, ಸರಾಫ್ ಬಜಾರ್, ಕೆಸಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ, ಬಟ್ಟೆ, ಬಂಗಾರ, ಚಪ್ಪಲಿ, ಇಲೆಕ್ಟ್ರಾನಿಕ್ಸ್, ಸ್ಟೇಶನರಿ ಸೇರಿದಂತೆ ಮತ್ತಿತರ ಅಂಗಡಿಗಳು ಬಂದ್‌ ಆಗಿದ್ದವು.

ಹೆಚ್ಚಿನಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆಯುವ ಗೋಜಿಗೆ ಹೋಗಲಿಲ್ಲ. ಇದರ ಮಧ್ಯೆ ಕೆಲವರು ತಮ್ಮ ಅಂಗಡಿ ಮುಂಗಟ್ಟನ್ನು ತೆರೆದು ವ್ಯಾಪಾರ ನಡೆಸುತ್ತಿದ್ದ ವೇಳೆ, ಮತ್ತೆ ಪೊಲೀಸರು ಅವುಗಳನ್ನು ಬಂದ್ ಮಾಡಿಸಿದರು.

ದಿನಸಿ, ತರಕಾರಿ, ಹಾಲು, ಹಣ್ಣು, ವೈನ್ ಶಾಪ್, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ನಗರದ ಬಸ್‌, ಆಟೊ, ಟಂಟಂ, ಕಾರು, ಬೈಕುಗಳ ಸಂಚಾರ ಎಂದಿನಂತೆ ಇದ್ದರೂ ಸಹ ಜನ ಸಂಚಾರ ಕ್ಷೀಣವಾಗಿತ್ತು.

ಕರ್ಫ್ಯೂ ಜಾರಿ:ನಗರದ ಪ್ರಮುಖ ವೃತ್ತಗಳಲ್ಲಿ ಹಾಗೂ ರಸ್ತೆಗಳಲ್ಲಿ ರಾತ್ರಿ 9ರಿಂದ ಪೊಲೀಸರು ಬ್ಯಾರಿಕೇಡ್‌ ಅಡ್ಡವಾಗಿ ಇಟ್ಟು ಅನಗತ್ಯ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು. ಬೈಕು, ಕಾರುಗಳನ್ನು ತಡೆದು ತಪಾಸಣೆ ನಡೆಸಿ, ಅನಗತ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

‘ರೆಮ್‌ಡಿಸಿವಿರ್‌ ಕೊರತೆ ಇಲ್ಲ’
ವಿಜಯಪುರ:
ಜಿಲ್ಲಾಸ್ಪತ್ರೆಯಲ್ಲಿ 800, ಬಿಎಲ್‌ಡಿಇ ಆಸ್ಪತ್ರೆಯಲ್ಲಿ 1 ಸಾವಿರ ಹಾಗೂ ಇತರೆ ಖಾಸಗಿ ಆಸ್ಪತ್ರೆಗಲ್ಲಿ 1 ಸಾವಿರ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಇದ್ದು, ಕೊರತೆ ಇಲ್ಲ. ಜೊತೆಗೆ ಹುಬ್ಬಳ್ಳಿ, ಬಳ್ಳಾರಿಯಿಂದ ಅಗತ್ಯದಷ್ಟು ಆಕ್ಸಿಜನ್‌ ಕೂಡ ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ರೋಗಿಗಳ ಐಸಿಯು ಕೊಠಡಿ, ಆಕ್ಸಿಜನ್ ವೆಂಟಿಲೇಟರ್ ವೀಕ್ಷಣೆ ಮಾಡಿದರು. ಬಳಿಕ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರೊಂದಿಗೆ ಸಭೆ ನಡೆಸಿದರು.

‘ಹೆಣಗಳ ಮೇಲೆ ರಾಜಕೀಯ’
ವಿಜಯಪುರ:
ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಗೊತ್ತು ಗುರಿಯಿಲ್ಲದೆ ಕೊರೊನಾ ಕುರಿತು ನಿಯಮಾವಳಿಗನ್ನು ಜಾರಿಗೆ ತರುತ್ತಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶ್ರೀಕಾಂತ ಛಾಯಾಗೋಳ ಆರೋಪಿಸಿದ್ದಾರೆ.

ಮಾರ್ಚ್‌, ಏಪ್ರೀಲ್‌ನಲ್ಲಿ ಎರಡನೇ ಅಲೆ ರಾಜ್ಯಕ್ಕೆ ಕಂಟಕವಾಗುತ್ತದೆ ಎಂದು ಕಳೆದ ನವೆಂಬರ್‌ನಲ್ಲಿಯೇ ತಜ್ಞರ ಸಮಿತಿ ಎಚ್ಚರಿಕೆ ನೀಡಿತ್ತು. ಆದರೆ, ಎಡಬಿಡಂಗಿ ಸರ್ಕಾರ ಚುನಾವಣೆಯಲ್ಲಿ ಕಾಲಹರಣ ಮಾಡಿ ಇಡೀ ರಾಜ್ಯವನ್ನೇ ಕಂಗಾಲಾಗಿಸಿದೆ ಎಂದು ದೂರಿದ್ದಾರೆ.

ರಾಜ್ಯದ ಯಾವ ಆಸ್ಪತ್ರೆಗೆ ಹೋದರೂ ಬೆಡ್ ಸಿಗುತ್ತಿಲ್ಲ. ಬೆಡ್ ಇದ್ದರೆ ವೆಂಟಿಲೇಟರ್ ಇಲ್ಲ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಾಳ್ಮೆ ಇಲ್ಲದೆ ದಿನಕ್ಕೊಂದು, ಗಂಟೆಗೊಂದು ನಿಯಮಗಳನ್ನು ಜಾರಿಗೆ ತರುತ್ತ ವ್ಯಾಪಾರಸ್ಥರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಹೈರಾಣಾಗಿಸಿದ್ದಾರೆ. ಪಾರದರ್ಶಕ ಕ್ರಮ ಕೈಕೊಳ್ಳಬೇಕು. ಯಾವುದೇ ಕಾಲಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT