ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಗಂಭೀರ ಪ್ರಕರಣ ಇಳಿಮುಖ: ಡಿಸಿ

ನಗರ, ಪಟ್ಟಣ ಪ್ರದೇಶದಲ್ಲಿ ಸೋಂಕು ಇಳಿಕೆ; ಹಳ್ಳಿಗಳಲ್ಲಿ ಹೆಚ್ಚಳ
Last Updated 21 ಮೇ 2021, 13:17 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಇಳಿಮುಖವಾಗ ತೊಡಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಗುಣಮಟ್ಟದ ಪರೀಕ್ಷೆ, ಆ್ಯಪ್‌ ಮೂಲಕ ದಿನನಿತ್ಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರೊಂದಿಗೆ ಬೆಡ್ ನಿರ್ವಹಣೆ, ನಿಗದಿತ ತಂತ್ರಾಂಶದಲ್ಲಿ ಕೋವಿಡ್ ರೋಗಿಗಳ ದಾಖಲು, ಬಿಡುಗಡೆ, ನೋಡಲ್ ಅಧಿಕಾರಿಗಳಿಂದ ನಿರಂತರ ಪರಿಶೀಲನೆ, ನಿಗಾ ಮತ್ತು ಮೇಲ್ವಿಚಾರಣೆಯಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣವಾಗತೊಡಗಿದೆ ಎಂದು ತಿಳಿಸಿದರು.

ಕೋವಿಡ್‌ ಗಂಭೀರ ಸ್ವರೂಪದ ಪ್ರಕರಣ(ಉಸಿರಾಟ ಸಮಸ್ಯೆ)ಗಳಲ್ಲಿ ಸಿಟಿ ಸ್ಕ್ಯಾನ್‌ಗಾಗಿ ಮೇ 12ರ ವರೆಗೆ 150 ರಿಂದ 170 ಪ್ರಕರಣಗಳು ಪ್ರತಿದಿನಕ್ಕೆ ಬರುತ್ತಿದ್ದವು. ಸದ್ಯ ಸಿಟಿ ಸ್ಕ್ಯಾನ್‌ಗೆ ಬರುವವರಲ್ಲಿ ಇಳಿಮುಖ ಕಂಡುಬಂದಿದೆ. ಸದ್ಯ 60 ಕ್ಕಿಂತ ಕಡಿಮೆಯಾಗಿದೆಎಂದರು.

ರೆಮ್‌ ಡಿಸಿವಿರ್‌ ಈ ಹಿಂದೆ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿತ್ತು. 170–180 ಜಿಲ್ಲಾಸ್ಪತ್ರೆಯಲ್ಲಿ ಖರ್ಚಾಗುತ್ತಿತ್ತು. ಈಗ ಈ ಲಸಿಕೆ ಬಳಕೆ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತಿದೆ. ಸದ್ಯ 100ಕ್ಕಿಂತ ಕಡಿಮೆ ಬಳಕೆಯಾಗುತ್ತಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಪ್ರಮಾಣವೂ ತಗ್ಗುತ್ತಿದೆ. ಮೊದಲ ಅಲೆಯಲ್ಲಿ 207, ಎರಡನೇ ಅಲೆಯಲ್ಲಿ 150 ಸಾವು ಸಂಭವಿಸಿದೆ. ಏಪ್ರಿಲ್‌ನಲ್ಲಿ ಸಂಭವಿಸಿದ ಸುಮಾರು 40 ಕೋವಿಡ್ ಸಾವುಗಳನ್ನು ಮೇನಲ್ಲಿ ತೋರಿಸಿದ ಹಿನ್ನೆಲೆಯಲ್ಲಿ ಮೇನಲ್ಲಿ ಸಾವಿನ ಪ್ರಮಾಣ ಏರುಗತಿಯಲ್ಲಿರುವಂತೆ ಕಂಡುಬಂದಿದೆ ಎಂದು ತಿಳಿಸಿದರು.

ಕೋವಿಡ್ ರೋಗ ಲಕ್ಷಣ ಕಂಡುಬಂದ ತಕ್ಷಣ ಚಿಕಿತ್ಸೆಗೆ ಒಳಪಡಿಸುವುದರಿಂದ ಸಾವಿನ ಪ್ರಮಾಣ ತಗ್ಗಿಸಲು ಸಹಾಯಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ಏಳು ದಿನದೊಳಗೆ ಚಿಕಿತ್ಸೆಗೆ ಒಳಪಡಲು ಸಾರ್ವಜನಿಕರು ಸಹ ಸ್ವಯಂ ಪ್ರೇರಿತವಾಗಿ ಮುಂದೆ ಬರುವಂತೆ ತಿಳಿಸಿದರು.

ಹಳ್ಳಿಗಳಲ್ಲಿ ಹೆಚ್ಚಳ:

ಸದ್ಯ ನಗರ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖ(ಶೇ25) ಕಂಡು ಬರುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ(ಶೇ75) ಹೆಚ್ಚಾಗಿದೆ. ಕಾರಣ ಗ್ರಾಮೀಣ ಪ್ರದೇಶಗಳತ್ತ ಈಗ ವಿಶೇಷ ಗಮನ ಕೇಂದ್ರೀಕರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಾವುಗಳನ್ನು ತಗ್ಗಿಸಲು, ಕೊರೊನಾ ರೋಗಲಕ್ಷಣ ಇರುವವರನ್ನು ಗುರುತಿಸಿ ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಇದರಿಂದ ಮರಣ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಳ್ಳೆಯ ರೀತಿಯ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಉತ್ತಮ ಚಿಕಿತ್ಸೆಯ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಯ 100 ಕ್ಕಿಂತ ಹೆಚ್ಚು ರೋಗಿಗಳು ನಮ್ಮ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್ ಕಾರ್ಯಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ 4 ದಿನಗಳಿಂದ ಸುಮಾರು 2 ಸಾವಿರ ಕೋವಿಡ್ ರೋಗ ಲಕ್ಷಣಗಳುಳ್ಳ ರೋಗಿಗಳನ್ನು ಹಳ್ಳಿಗಳಲ್ಲಿ ಪತ್ತೆ ಹಚ್ಚಲಾಗಿದ್ದು, ಅದರಲ್ಲಿ 231 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಕ್ಷಣವುಳ್ಳವರನ್ನು ತೀವ್ರಗತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ಹೇಳಿದರು.

61 ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿದೆ. ಆದರೆ, ಜನರು ಸೆಂಟರ್‌ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಉತ್ತಮ ವ್ಯವಸ್ಥೆ ಮಾಡಿದ್ದರೂ ಸಹ ತೋಟದ ಮನೆಯಲ್ಲಿ, ಬೀಗರ ಮನೆಯಲ್ಲಿ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರಿಸಲಾಗುವುದು. ಮನೆಯಲ್ಲಿ ಇರುವುದರಿಂದ ಸೋಂಕು ಬೇರೆಯವರಿಗೆ ಹೆಚ್ಚು ಹರಡುತ್ತಿದೆ. ತಿಳಿವಳಿಕೆ ಇಲ್ಲದೇ ಸಾವಿನ ಪ್ರಮಾಣ ಹೆಚ್ಚಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆರ್. ಎಂ. ಪಿ ವೈದ್ಯರಿಗೆ ಎಚ್ಚರಿಕೆ

ವಿಜಯಪುರ: ಗ್ರಾಮಾಂತರ ಪ್ರದೇಶದಲ್ಲಿ ಆರ್. ಎಂ.ಪಿ ವೈದ್ಯರು ಕೋವಿಡ್ ರೋಗಿಗಳಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದು. ಇದರ ಪರಿಣಾಮ ಸಾವು–ನೋವುಗಳು ಹೆಚ್ಚಾಗುತ್ತಿವೆ. ಕೋವಿಡ್‌ ಪೀಡಿತರಿಗೆ ಚಿಕಿತ್ಸೆ ನೀಡಿದರೆ ಕಠಿಣಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ‍ಪಿ.ಸುನೀಲ್‌ಕುಮಾರ್ ಎಚ್ಚರಿಕೆ ನೀಡಿದರು.

ಈಗಾಗಲೇ ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಪಡೆಗಳು ಕೋವಿಡ್ ಸೋಂಕಿತರು ಕಂಡುಬಂದ ತಕ್ಷಣ ಆಯಾ ಪಿಡಿಒಗಳ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲಾಸ್ಪತ್ರೆಗೆ ಸಂಪರ್ಕ ಸಾಧಿಸಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ನೆರವಾಗುತ್ತಿದ್ದಾರೆ ಎಂದರು.

ಮೆಚ್ಚುಗೆ: ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಸಂಬಂಧಿಸಿದ ವೈದ್ಯರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 50 ಕಪ್ಪು ಶಿಲೀಂಧ್ರ ಪ್ರಕರಣ

ವಿಜಯಪುರ: ಜಿಲ್ಲೆಯಲ್ಲಿ ಈ ವರೆಗೆ 50 ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ‍ಪಿ.ಸುನೀಲ್‌ಕುಮಾರ್ ತಿಳಿಸಿದರು.

ಕಪ್ಪು ಶಿಲೀಂಧ್ರ ಪ್ರಕರಣಗಳ ನಿರ್ವಹಣೆಗಾಗಿ ನೋಡಲ್ ಅಧಿಕಾರಿಯಾಗಿ ಡಾ. ಔದ್ರಾಮ್ ಅವರನ್ನು ನೇಮಿಸಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಗಿದೆ. ಇಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಕದ್ದುಮುಚ್ಚಿ ಚಿಕಿತ್ಸೆ ನೀಡುವಂತಿಲ್ಲ. ಅದರಂತೆ ಕಪ್ಪು ಶಿಲೀಂಧ್ರ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕಪ್ಪು ಶಿಲೀಂಧ್ರಕ್ಕೆ ಅಗತ್ಯವಿರುವ ಔಷಧಕ್ಕಾಗಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ. ಆನ್‌ಲೈನ್‌ ಮೂಲಕ ಔಷಧಕ್ಕೆ ಬೇಡಿಕೆ ಸಲ್ಲಿಸಬೇಕು ಹೇಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT