ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರೊನಾ ವೈರಸ್‌ ನಿರ್ಲಕ್ಷ್ಯ ಬೇಡ: ಡಾ.ಕಮಲಾಕರ ಎಸ್.ದೇಸಾಯಿ

Last Updated 5 ಆಗಸ್ಟ್ 2020, 9:24 IST
ಅಕ್ಷರ ಗಾತ್ರ

ಇಂಡಿ: ‘ಪಟ್ಟಣದಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನಾಲೂ ನೂರಾರು ರೋಗಿಗಳು ಚಿಕಿತ್ಸೆಗೆ ನನ್ನ ಬಳಿ ಬರುತ್ತಾರೆ. ಅವರೆಲ್ಲರನ್ನೂ ನೋಡಿಕೊಳ್ಳುವ ಸಂದರ್ಭದಲ್ಲಿ ಜುಲೈ 14ರಂದು ನನಗೆ ಕೊವಿಡ್-19 ರೋಗ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಆಸ್ಪತ್ರೆ ಬಂದ್ ಮಾಡಿ ನನ್ನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಪರೀಕ್ಷೆ ಹಾಗೂ ಕ್ವಾರಂಟೈನ್ ಮಾಡಿಸಿ, ನಾನು ನೆರೆಯ ಸೊಲ್ಲಾಪುರದ ಯಶೋಧರಾ ಆಸ್ಪತ್ರೆಗೆ ದಾಖಲಾದೆ. ಅಲ್ಲಿ 14 ದಿನ ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದೇನೆ’ ಎಂದು ಡಾ.ಕಮಲಾಕರ ಎಸ್.ದೇಸಾಯಿ ಹೇಳಿದರು.

ಕೊರೊನಾ ವೈರಸ್‌ನಿಂದ ಬರುವ ಕೋವಿಡ್-19ರಲ್ಲಿ ಮೂರು ಪ್ರಕಾರಗಳಿವೆ. ಮೈಲ್ಡ್, ಮಾಡರೇಟ್ ಹಾಗೂ ಸೀವಿಯರ್. ನಾವು ನೋಡುವ ಶೇ 80ರಷ್ಟು ರೋಗಿಗಳಿಗೆ ಮೈಲ್ಡ್ ಮತ್ತು ಮಾಡರೇಟ್ ಕೋವಿಡ್-19 ಇರುತ್ತದೆ. ಈ ಮೈಲ್ಡ್ ಮತ್ತು ಮಾಡರೇಟ್ ಕೋವಿಡ್‌ಗೆ ವೈದ್ಯರ ಸಲಹೆ ಪಡೆದುಕೊಂಡು ಮನೆಯಲ್ಲಿಯೇ ಐಸೋಲೇಷನ್ ಆಗಿ ಇದ್ದುಕೊಂಡು ಮಾತ್ರೆಗಳನ್ನು ಸೇವಿಸಿ ಗುಣಮುಖರಾಗುತ್ತಾರೆ ಎಂದರು.

ಇನ್ನು ಶೇ15ರಷ್ಟು ರೋಗಿಗಳಿಗೆ ಸೀವಿಯರ್ ಇನ್ಪೆಕ್ಷನ್ ಆಗಿರುತ್ತದೆ. ಈ ರೋಗಿಗಳಿಗೆ ಆಕ್ಷಿಜನ್ ಬೇಕಾಗುತ್ತದೆ. ಇದರ ಜೊತೆಗೆ ಇತ್ತೀಚೆಗೆ ಮಾನ್ಯತೆ ಪಡೆದ ರೇಮ್ಡೆಸಿವಿರ್ ಇಂಜೆಕ್ಷನ್ ಬೇಕಾಗುತ್ತದೆ. ಇನ್ನು ಶೇ5 ರಷ್ಟು ರೋಗಿಗಳಿಗೆ ತೀವ್ರವಾದ ರೋಗ ಲಕ್ಷಣಗಳು ಕಂಡುಬರುತ್ತವೆ. ಇವರಿಗೆ ಹೈ ಫ್ಲೋ ನಸಲ್ ಆಕ್ಷಿಜನ್ ಬೇಕಾಗುತ್ತದೆ. ವೆಂಟಿಲೇಟರ್ ಸಹಾಯವೂ ಕೂಡಾ ಬೇಕಾಗಬಹುದು ಎಂದರು.

ಶೇ 20 ರಷ್ಟು ರೋಗಿಗಳಿಗೆ ತೀವ್ರವಾದ ಸ್ವರೂಪದಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮೈಲ್ಡ್ ಕೋವಿಡ್ ಬಂದವರನ್ನು ಕಂಡು ಸಾರ್ವಜನಿಕರು ಕೋವಿಡ್ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್-19ರ ವಿರುದ್ಧ ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, ತಕ್ಷಣವೇ ವ್ಯಾಕ್ಷಿನ್ ನಮಗೆ ದೊರೆಯಲಿದೆ ಎಂದರು.

ಕೋವಿಡ್‌ ಬಂದ ತಕ್ಷಣವೇ ವೈದ್ಯರನ್ನು ಕಾಣಲೇಬೇಕು. ಅವರು ಹೇಳುವ ಸಲಹೆಗಳನ್ನು ತಪ್ಪದೇ ಪಾಲಿಸಲೇಬೇಕು. ಅದಕ್ಕೆ ನಿರ್ಲಕ್ಷ್ಯ ಮಾಡಿದರೆ ಕೋವಿಡ್-19 ವೈರಸ್ ಪ್ರಾಣಕ್ಕೆ ಕುತ್ತು ತರುತ್ತದೆ. ಕಾರಣ ಸಾರ್ವಜನಿಕರು ಅಂತರ ಕಾಯ್ದುಕೊಳ್ಳುವದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಕೆ, ಕಷಾಯ ಕುಡಿಯುವುದು, ಸತ್ವಯುತ ಆಹಾರ ಸೇವನೆ, ಆಗಾಗ ಕೈ ತೊಳೆದುಕೊಳ್ಳುವುದು, ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವುದು ದಿನನಿತ್ಯದ ಜೀವನದಲ್ಲಿ ಕಡ್ಡಾಯ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT