ವಿಜಯಪುರ: ಗುರುಪೂರ್ಣಿಮೆಯ ಅಂಗವಾಗಿ ನಗರದ ಬಿ.ಎಲ್.ಡಿ. ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಿಂದ ಜ್ಞಾನಯೋಗಾಶ್ರಮದಲ್ಲಿ ಆಯೋಜಿಸಲಾದ ಎರಡು ದಿನಗಳ ಉಚಿತ ಆರೋಗ್ಯ ಶಿಬಿರವನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷ ಹರ್ಷಾನಂದ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬಿ.ಎಲ್.ಡಿ.ಇ ಆಸ್ಪತ್ರೆ ವತಿಯಿಂದ ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುತ್ತಿದ್ದು, ಇದರಿಂದ ಆಶ್ರಮಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಿದೆ. ಆಸ್ಪತ್ರೆಯ ಸಮಾಜಮುಖಿ ಕಾಳಜಿ ಮಚ್ಚುವಂಥದ್ದು. ಜನರು ದುಶ್ಟಟಗಳಿಂದ ದೂರವಿದ್ದು ನಿತ್ಯ ಯೋಗ ಮತ್ತು ವ್ಯಾಯಾಮ ಮಾಡಿ ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದರು.
ಶಿಬಿರದ ಸಂಚಾಲಕ, ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳನ್ನು ವಿವರಿಸಿದರು. ಶಿಬಿರದಲ್ಲಿ ಭಕ್ತರ ಆರೋಗ್ಯ ತಪಾಸಣೆ ಜೊತೆಗೆ ಉಚಿತವಾಗಿ ರಕ್ತ ತಪಾಸಣೆ, ಇಸಿಜಿ ತಪಾಸಣೆ ಮತ್ತು ಉಚಿತವಾಗಿ ಔಷಧಿ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಶಿಬಿರದ ಮೊದಲ ದಿನ ಸುಮಾರು 200ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದರು. ಸೋಮವಾರ ಕೂಡ ಈ ಶಿಬಿರ ಮುಂದುವರೆಯಲಿದೆ. ಶಿಬಿರದಲ್ಲಿ ವೈದ್ಯಕೀಯ ವಿಭಾಗದ ಡಾ. ರವಿ ಕಟ್ಟಿಮನಿ, ಶಸ್ತ್ರಚಿಕಿತ್ಸೆ ವಿಭಾಗದ ಡಾ. ವಿಜಯಕುಮಾರ, ಡಾ.ಅಭಿಜಿತ, ಡಾ. ವೈಷ್ಣವಿ, ಕಲ್ಲಪ್ಪ, ಶೈಲಾ ದೊಡ್ಡಿ, ಅನಿಲ, ಪ್ರಕಾಶ ಕನ್ನೂರ, ಸಂಬಣ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.