ಶನಿವಾರ, ಜನವರಿ 28, 2023
19 °C
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ

ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೃಷಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ವಿಠ್ಠಲ ಪೂಜಾರ ಮಾತನಾಡಿ, ಕೇಂದ್ರ ಸರ್ಕಾರ ಹಿಂಪಡೆದಿರುವ ಮೂರು ಕೃಷಿ ಕಾನೂನನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗಿಕರಣ ಬಿಲ್‌ ಅನ್ನು ಹಿಂಪಡೆಯಬೇಕು ಹಾಗೂ ರೈತರ ಪಂಪ್‍ಸೆಟ್‍ಗಳಿಗೆ ಮೀಟರ್ ಆಳವಡಿಸುವ ಕಾರ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಆಲಮಟ್ಟಿ ಜಲಾಶಯ ಎತ್ತರವನ್ನು 519 ರಿಂದ 524,256 ಮೀಟರ್‌ಗೆ ಸುಪ್ರೀಂ ಕೋರ್ಟಿನ ಆದೇಶದಂತೆ ತಕ್ಷಣವೇ ಎತ್ತರಿಸುವ ಕಾರ್ಯವನ್ನು ಸರ್ಕಾರ ತೆಗೆದುಕೊಳ್ಳಬೇಕು. ಸತತವಾಗಿ ರಾಜ್ಯದಲ್ಲಿ 2009 ರಿಂದ 2018 ರವರೆಗೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ 2018 ರಿಂದ 2022 ರ ವರೆಗೆ ಅತಿವೃಷ್ಠಿಯಾಗಿದ್ದು ರೈತರು ನಷ್ಠಕ್ಕೆ ಒಳಗಾಗಿದ್ದು, ತುಂಬಾ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಾರಣ ಅವರಿಗೆ ಬೆಳೆಮಿಮೆ ಹಾಗೂ ಬೆಳೆ ಪರಿಹಾರ ಕೂಡಲೇ ನೀಡಬೇಕು ಎಂದು ಹೇಳಿದರು.

ರೈತರು ಪಡೆದ ಟ್ರಾಕ್ಟರ್‌ ಸಾಲ, ಬೆಳೆ ಸಾಲ, ಭೂ ಅಭಿವೃದ್ಧಿ ಸಾಲ, ಹಸಿರು ಮನೆ ಸಾಲ (ಪಾಲಿ ಹೌಸ್) ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿಯಿಂದ ರೈತರು ಬೆಳೆದ ಬೆಳೆ ಹಾನಿಯಾಗಿದ್ದು, 2018- 2022ರ ವರೆಗೆ ಕೇಂದ್ರ ಮಾದರಿಯಲ್ಲಿ ಅಂದರೆ ಹೆಕ್ಟರ್‌ಗೆ ₹35 ಸಾವಿರ ಸಹಾಯಧನ ಬಿಡುಗಡೆ ಮಾಡಲು ಒತ್ತಾಯಿಸಿದರು.

ರಾಜ್ಯದಾದ್ಯಂತ ಬಗರ ಹುಕಂ ಸಾಗುವಳಿದಾರರು ಸುಮಾರು ವರ್ಷಗಳಿಂದ ಉಳಿಮೆ ಮಾಡುತ್ತಿರುವ ರೈತರಿಗೆ ‘ಡ’ ಹಾಗೂ ಇನ್ನಿತರ ನಿಯಮಗಳನ್ನು ಸರಿಪಡಿಸಿ ರೈತರಿಗೆ ಪಟ್ಟಾ ನೀಡಬೇಕು ಹಾಗೂ 99 ವರ್ಷಕ್ಕೆ ಲೀಸ್ ತರ ಹೊರಟಿರುವ ಕಾಯಿದೆ ರಾಜ್ಯ ಸರ್ಕಾರ ತಕ್ಷಣ ಕೈ ಬಿಟ್ಟು, ಬಡ ರೈತರಿಗೆ ಪಟ್ಟಾ ನೀಡಬೇಕು ಎಂದರು.

ರಾಜ್ಯ ಸರ್ಕಾರ ಗೋಮಾಳ ಜಮೀನನ್ನು ಉದ್ದಿಮಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡವ ಕೆಲಸವನ್ನು ತಕ್ಷಣ ಕೈ ಬಿಡಬೇಕು. ರಾಜ್ಯದಾದ್ಯಂತ ಕಬ್ಬಿನ ಬೆಳೆಗೆ ಒಂದೇ ದರವನ್ನು ನಿಗದಿಪಡಿಸಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಎಫ್ಆರ್‌ಪಿ ದರ ನಿಗದಿ ಪಡಿಸದೆ ರೈತರಿಗೆ ಮೋಸ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಪೀರು ಕೆರೂರ, ರೇಣುಕಾ ಮಣೂರ, ತಿರುಪತಿ ಬಂಡಿವಡ್ಡರ, ಅಮೋಘಸಿದ್ದ ಯಂಕಂಚಿ, ಆರ್.ಎಂ. ಕುಚಬಾಳ, ವಿಠ್ಠಲ ಬಂಡಿವಡ್ಡರ, ಪೀರು ನಂದಿಹಾಳ, ಹಣಮಂತ ಭಜಂತ್ರಿ, ಅನಿಲ ಆಲಮೇಲ, ಸಂತೋಷ ಕಾಕಸಗೇರಿ, ಬಸು ಡೋಣೂರ, ಬಸಮ್ಮ ಪೂಜಾರಿ, ಶಾರದಾ ಕಾಶೆಟ್ಟಿ ಪುತಳಿಬಾಯಿ ಕಾಂಬಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

***

ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಹಾಗೂ ತರಕಾರಿ ಬೆಳೆಗೆ ಕೇರಳ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು

–ವಿಜಯ ವಿಠ್ಠಲ ಪೂಜಾರ, ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು