ಶನಿವಾರ, ಆಗಸ್ಟ್ 13, 2022
26 °C
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಆಪರೇಶನ್ ಕಮಲದಿಂದ ಪ್ರಜಾಪ್ರಭುತ್ವ ಕಗ್ಗೊಲೆ: ಎಂ.ಬಿ.ಪಾಟೀಲ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಿಜೆಪಿಯ ‘ಆಪರೇಶನ್ ಕಮಲ’ದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದೆ. ಕರ್ನಾಟಕದಲ್ಲಿ ಈ ಹಿಂದೆ ಆಗಿರುವುದು ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. 

ಸಾರವಾಡ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಖಂಡನೀಯ. ಬಿಜೆಪಿಯವರು ತಾಕತ್ತಿದ್ದರೆ ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲಿ ಎಂದು ಸವಾಲು ಹಾಕಿದರು. 

ಶಾಸಕರಿಗೆ ದುಡ್ಡು ಕೊಟ್ಟು ರಾಜೀನಾಮೆ ಕೊಡಿಸಿ, ಅವರ ಸಹಾಯದಿಂದ ಸರ್ಕಾರ ಬೀಳಿಸಿ, ಹೊಸ ಸರ್ಕಾರ ರಚಿಸುವುದು ಬಿಜೆಪಿ ಚಾಳಿಯಾಗಿದೆ. ಇದು ಬಹಳ ದಿನ ನಡೆಯಲ್ಲ ಇದಕ್ಕೆ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.

ಬಿಜೆಪಿಯವರು ತಾವು ಮಾಡಿದ್ದೆಲ್ಲ ನಡೆಯುತ್ತದೆ ಎಂದು ತಿಳಿದುಕೊಂಡಿದ್ದಾರೆ. ಎಲ್ಲಾ ಸಮಯದಲ್ಲಿ ಎಲ್ಲರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇಂಥದೇ ಸರ್ಕಾರ ಕರ್ನಾಟಕದಲ್ಲಿ‌ ರಚನೆಯಾಗಿದೆ. ಕಾಂಗ್ರೆಸ್‌ನ 17  ಶಾಸಕರನ್ನು ಆಪರೇಷನ್ ಕಮಲದ ಮೂಲಕ ತೆಗೆದುಕೊಂಡು ಶೇ 40 ಕಮಿಷನ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಇದನ್ನ ನಾನು ಹೇಳುತ್ತಿಲ್ಲ ಗುತ್ತಿಗೆದಾರರ ಸಂಘ ಹೇಳುತ್ತಿದೆ ಎಂದು ಆರೋಪಿಸಿದರು.

ಮಹಾರಾಷ್ಟ್ರ ಬೆಳವಣಿಗೆ ಕುರಿತು ‘ನಾವೇನು ರಾಜಕೀಯ ಸನ್ಯಾಸಿಗಳಲ್ಲ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್‌, ನಾವೂ ಕೂಡ ರಾಜಕೀಯ ಸನ್ಯಾಸಿಗಲ್ಲ. ರಾಜಕೀಯಕ್ಕಾಗಿ ಬಿಜೆಪಿಯವರು ಏನಾದರೂ ಅನೈತಿಕ ಕಾರ್ಯ ಮಾಡಬಹುದಾ? ಈ ರೀತಿ ಅಧಿಕಾರಕ್ಕೆ ಬರುವುದು ಸರಿನಾ? ಇದು ನಿಮ್ಮ ಸನ್ಯಾಸತ್ವಾನಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧ ಇಡಿ ವಿಚಾರಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ತನಿಖಾ ಸಂಸ್ಥೆಗಳು ಬಿಜೆಪಿ ಪಕ್ಷದ ಅಂಗಸಂಸ್ಥೆಗಳಂತೆ ವರ್ತಿಸುತ್ತಿವೆ. ಇಡಿ, ಐಟಿ, ಸಿಬಿಐ ಬಿಜೆಪಿಮಯವಾಗಿವೆ. ಇವೆಲ್ಲದಕ್ಕೂ ಜನರು ಇತಿಶ್ರೀ ಹಾಡುತ್ತಾರೆ ಎಂದರು.

ಒಂದು ಕಾಲದಲ್ಲಿ ಈ ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಅಂತಿಮ. ಪರ್ಯಾಯ ಪಕ್ಷಗಳು ಅಧಿಕಾರಕ್ಕೆ ಬರುವುದಿಲ್ಲ ಎಂಬ ನಂಬಿಕೆ ಇತ್ತು. ಆದರೆ, ಇಂದು ನಮಗೆ ಸಾಕಷ್ಟು ಹಿನ್ನೆಡೆಯಾಗಿದೆ. ಈಗ ಬಿಜೆಪಿ ವಿರುದ್ಧವೂ ಅದು ಆರಂಭವಾಗಿದೆ. ಬಿಜೆಪಿ ಪಾಪದ ಕೊಡ ತುಂಬಿದ ಮೇಲೆ ಜನರೇ ಇತಿಶ್ರೀ ಹಾಡುತ್ತಾರೆ ಎಂದು ಹೇಳಿದರು. 

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ರೋಹಿತ್‌ ಚಕ್ರತೀರ್ಥ ಯಾರಿಗೂ ಬಿಟ್ಟಿಲ್ಲ. ಇತಿಹಾಸ ತಿರುಚುವ ಕೆಲಸವನ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಮೊದಲು ಮುಸ್ಲಿಮರನ್ನು ಮಾತ್ರ ಟಾಗ್ರೆಟ್ ಮಾಡಲಾಗಿತ್ತು. ನಂತರ ಬಸವಣ್ಣ ನಾರಾಯಣಗುರು, ಕುವೆಂಪು, ಆದಿಚುಂಚನಗಿರಿ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ,‌ ಮಹಾತ್ಮ ಗಾಂಧಿಯವರನ್ನೂ ಬಿಡಲಿಲ್ಲ ಎಂದು ಹೇಳಿದರು.

***

ರಾಜ್ಯದಲ್ಲಿ ಸರ್ಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಜನರು ಮುಂಬರುವ ಚುನಾವಣೆಯಲ್ಲಿ ಈ ಸರ್ಕಾರಕ್ಕೆ ಇತಿಶ್ರೀ ಹಾಡಲಿದ್ದಾರೆ.
–ಎಂ.ಬಿ.ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು