ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ | ಕಾಂಗ್ರೆಸ್; ಮನೆಯೊಂದು ಮೂರುಬಾಗಿಲು

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ: ನಾಯಕರಲ್ಲಿ ಸಮನ್ವಯ ಕೊರತೆ
Published 3 ಏಪ್ರಿಲ್ 2024, 5:05 IST
Last Updated 3 ಏಪ್ರಿಲ್ 2024, 5:05 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರಲ್ಲಿ ಸಮನ್ವಯದ ಕೊರತೆಯಿಂದ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳು ಭಿನ್ನ ವಿಚಾರ, ನಡೆ ನುಡಿಗಳ ಮೂಲಕ ಮೂರು ಗುಂಪುಗಳಲ್ಲಿ ಗುರುತಿಸಿಕೊಂಡಿದ್ದರು. ಅವರು ವರ್ಷವಾದರೂ ಒಂದಾಗದ ಕಾರಣ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೆಪಿಸಿಸಿಯು ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರದ ಪ್ರಚಾರ ಉಸ್ತುವಾರಿಯಾಗಿ ಈಗಾಗಲೇ 11 ನಾಯಕರನ್ನು ನಿಯೋಜಿಸಿದೆ. ಅದಾಗ್ಯೂ ಈವರೆಗೆ ಎಲ್ಲಿಯೂ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಶರಣಪ್ಪ ಸುಣಗಾರ ಮಾತ್ರ ಅಹಿಂದ ಬೆಂಬಲಿಗರೊಂದಿಗೆ ಗ್ರಾಮಗಳಲ್ಲಿ ಸಭೆಗಳ ಮೂಲಕ ಪ್ರಚಾರ ನಡೆಸುತ್ತಿದ್ದು, ಇದು ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದಲೇ ಮತಕ್ಷೇತ್ರದ ಕಾಂಗ್ರೆಸ್‌ನಲ್ಲಿ 2 ರಿಂದ 3 ಬಣಗಳಾಗಿವೆ. ಕೆಲವು ದಿನಗಳ ಹಿಂದೆ ಪಟ್ಟಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಗಮನದ ಸಂದರ್ಭದಲ್ಲಿ ಹಾಗೂ ಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಜಗಜ್ಜಾಹೀರಾಗಿತ್ತು. ಆನಂತರವೂ ಇದು ಮುಂದುವರಿದಿದ್ದು, ಲೋಕಸಭೆಯ ಚುನಾವಣೆಯಲ್ಲಿ ಇದು ಯಾವ ರೀತಿಯ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತ ಮುರ್ತುಜಾ ತಾಂಬೋಳಿ.

‘ಲೋಕಸಭೆ ಚುನಾವಣೆಗೆ ಮುಂಚೆ ನಡೆದ ಈ ಎಲ್ಲ ಘಟನೆಗಳು ನಡೆದಿರಬಹುದು. ಮುಂದಿನ ದಿನಗಳಲ್ಲಿ ನಾವೆಲ್ಲ ಒಟ್ಟಾಗಿ ಸಭೆ, ಪ್ರಚಾರ ಹಾಗೂ ಮತಯಾಚನೆ ಮಾಡುತ್ತೇವೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುತ್ತೇವೆ’ ಎಂದು ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ ಬಿಸನಾಳ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತರಲ್ಲಿ ಗೊಂದಲ

ಕಳೆದ ವಿಧಾನಸಭೆ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ತಮ್ಮ ಬೆಂಬಲಿಗರೊಂದಿಗೆ ಏಕಪಕ್ಷೀಯ ತೀರ್ಮಾನಗಳ ಮೂಲಕ ಕೇವಲ ಅಹಿಂದ ಸಭೆಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನುಳಿದ ಪ್ರಮುಖ ನಾಯಕರಾದ ಬಿ.ಎಸ್.ಪಾಟೀಲ (ಯಾಳಗಿ) ಪ್ರಭುಗೌಡ ಲಿಂಗದಳ್ಳಿ(ಚಬನೂರ) ಸುಭಾಸ್ ಛಾಯಾಗೋಳ ಬಶೀರ್ ಅಹ್ಮದ್ ಬೇಪಾರಿ ಬಿ.ಎಸ್.ಪಾಟೀಲ (ಸಾತಿಹಾಳ) ಗೌರಮ್ಮ ಮುತ್ತತ್ತಿ ಸುಜಾತಾ ಕಳ್ಳಿಮನಿ ಸೇರಿದಂತೆ ಮತಕ್ಷೇತ್ರದ ಯುವನಾಯಕರು ಸಹ ಈ ಎಲ್ಲ ಸಭೆಗಳಿಂದ ದೂರವುಳಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಹಾಗೂ ಪಂಚ ಗ್ಯಾರಂಟಿಗಳು ಕೇವಲ ಅಹಿಂದ ಸಮುದಾಯಗಳಿಗೆ ಮಾತ್ರವಲ್ಲ. ರಾಜ್ಯದ ಎಲ್ಲ ಮತದಾರರು ಮುಖ್ಯ ಎಂದು ಹೇಳುತ್ತಾ ಈ ಸಭೆಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಇದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT