ಶನಿವಾರ, ಮೇ 28, 2022
26 °C
ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಅಭಿಮತ

ದೇವರ ದಾಸಿಮಯ್ಯ ಸಾಮಾಜಿಕ ವಿಜ್ಞಾನಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಮಾಜದ ಮೂಲ ಸಮಸ್ಯೆಗಳಿಗೆ ಮದ್ದು, ಪರಿಹಾರ ಕಂಡುಹಿಡಿದ ದೇವರ ದಾಸಿಮಯ್ಯ ಅವರೊಬ್ಬರ  ಸಾಮಾಜಿಕ ವಿಜ್ಞಾನಿ ಎಂದು ಕರೆಯಬಹುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ದೇವರ ದಾಸಿಮಯ್ಯ ಅವರಂತಹ ವಚನಕಾರರು ಸಮಾಜವನ್ನು ಬಹಳ ಆಳವಾಗಿ ಅಧ್ಯಯನ ಮಾಡಿ, ಅದರ ಓರೆಕೋರೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅವುಗಳನ್ನು ತಮ್ಮ ವಚನಗಳ ಮೂಲಕ ತಿದ್ದಿದವರು. ಇವರು ಸಮಾಜಕ್ಕೆ ಬೆಳಕು ತೋರಿಸಿ, ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ನಿಜವಾದ ನಾಯಕರು ಎಂದು ಅವರು ಹೇಳಿದರು.

ಸಮಾಜದ ಹಿರಿಯರಾದ ಬಿ.ಎಂ.ಮೌಲ್ವಿ ಮಾತನಾಡಿ, ನೇಕಾರ ಸಮಾಜವೂ ಆರ್ಥಿಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದ್ದು, ಈ ಸಮುದಾಯದ ಜನರು ಕೋವಿಡ್ ಸಂದರ್ಭದಲ್ಲಿ ಬಹಳ ನಲುಗಿ ಹೋಗಿದ್ದಾರೆ. ಇದಕ್ಕಾಗಿ ಸರ್ಕಾರದ ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದರು.

ವಿಶೇಷ ಉಪನ್ಯಾಸ ನೀಡಿದ ಎ.ಬಿ ಅಂಕದ, ಆದ್ಯ ವಚನಕಾರ ದೇವರ ದಾಸಿಮಯ್ಯ ಅವರನ್ನು 11 ನೇ ಶತಮಾನದ ವ್ಯಕ್ತಿ, ಚಾಲುಕ್ಯರ ಅರಸು ಜಯಸಿಂಹನ ಕಾಲದವರು ಎಂದು ಹೇಳಲಾಗುತ್ತದೆ. ಇವರದು ಬಟ್ಟೆ ನೇಯುವ ಕಾಯಕವಾಗಿತ್ತು. ಅವರು ಈ ಕಾರ್ಯವನ್ನು ಕಾಯಕವೆಂದು ಭಾವಿಸಿ, ಒಂದು ಪೂಜೆಯಂತೆ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದರು ಎಂದು ಹೇಳಿದರು.

ದಾಸಿಮಯ್ಯನವರು ತಾವು ನೇಯ್ದ ಬಟ್ಟೆಗಳನ್ನೇ ಮಾರಿ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡಿ, ಇತರರಿಗೂ ನೆರವಾಗುತ್ತಿದ್ದರು. ಬಸವಣ್ಣನವರೂ ಇವರನ್ನು ಬಹಳ ಪ್ರಶಂಸಿದ್ದರು. ಇವರ ಕಾಯಕ ಗುಣವನ್ನು ಕೊಂಡಾಡಿದ್ದರು. ಇವರದು ಶುದ್ಧ ಭಕ್ತಿ ಹಾಗೂ ಕಾಯಕ ಪವಿತ್ರವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ದೇಶಕ್ಕೆ ರೈತನಂತೆ ನೇಕಾರ ಸಮಾಜವೂ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬಂದಿದ್ದು, ಮಾನವರಿಗೆ ಬಟ್ಟೆಯನ್ನೊಗಿಸುವಂತಹ ಶ್ರೇಷ್ಠ ಕಾರ್ಯ ಮಾಡುತ್ತಾ ಬಂದಿರುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಿಸಿದ್ಧಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣನವರ, ಸಮಾಜದ ಮುಖಂಡರಾದ ಶಶಿಧರ ಮಮದಾಪೂರ, ಎಂ.ಸಿ ಜವಳಗಿ, ಡಾ.ಕಡ್ಲಿಮಟ್ಟಿ,  ನಾಗಪ್ಪ ಪ್ಯಾಟಿ, ಬಸವರಾಜ ಚಿಂಚೋಳಿ, ಎಂ.ಎಸ್ ನಿಂಬಾಳ, ಅಡಿವೆಪ್ಪ ಸಾಲಗಲ್‌, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಸೋಮನಗೌಡ ಕಲ್ಲೂರ, ಗಿರೀಶ ಕುಲಕರ್ಣಿ, ಎಂ.ಜಿ ಯಾದವಾಡ, ವಿ.ಎಸ್ ನಾಗಠಾಣ, ಜಿ.ಎಸ್ ಕಂಚ್ಯಾಣಿ, ಸುಮಂಗಲಾ ಕೋರಿ, ಎಂ.ವಿ ಹಂದಿಗನೂರ, ಎಂ.ಎಸ್ ಬೂದಿಹಾಳ, ನಾಗರಾಜ, ಎಂ.ಎಸ್ ಜವಳಗಿ, ಬಸವರಾಜ ಚಿಂಚೊಳ್ಳಿ, ಆನಂದ ಹುಲಮನಿ, ಸಂಗೀತಾ ಮಠಪತಿ ಉಪಸ್ಥಿತರಿದ್ದರು. 

***

ದಾಸಿಮಯ್ಯನವರ ವಚನಗಳು ಇಂದಿನ ದಿನಮಾನಗಳಿಗೂ ಪ್ರಸ್ತುತವಾಗಿದ್ದು, ನಮ್ಮ ಬದುಕಿಗೆ ದಾರಿದೀಪವಾಗಿವೆ. ಇಂತಹವರ ಅಗತ್ಯ ಇಂದಿನ ಸಮಾಜಕ್ಕೆ ಬಹಳ ಇದೆ

–ಪಿ.ಸುನೀಲ್ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.