ಶುಕ್ರವಾರ, ಮಾರ್ಚ್ 24, 2023
30 °C
‘ವಸುದೈವ ಕುಟುಂಬಕಂ’ ಭಾರತೀಯ ಸಂಸ್ಕೃತಿ ಮೂಲಾಧಾರ: ದತ್ತಾತ್ರೇಯ ಹೊಸಬಾಳೆ

ಕುಷ್ಠರೋಗಿಗಳ ಜೊತೆ ಸಹಪಂಕ್ತಿ ಭೋಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಸುದೈವ ಕುಟುಂಬಕಂ ಎನ್ನುವುದು ಭಾರತೀಯ ಸಂಸ್ಕೃತಿಯ ಮೂಲಾಧಾರ, ಈ ಉಕ್ತಿಯನ್ನು ಜೀವನದ ಉಸಿರಾಗಿಸಿಕೊಂಡು ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಬೆಳೆಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ನಗರದ ಮಹಾತ್ಮ ಗಾಂಧಿ ಕಾಲೊನಿಯಲ್ಲಿ ಸೇವಾ ಭಾರತಿ ಹಾಗೂ ಲೋಕಹಿತ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ  ಏರ್ಪಡಿಸಲಾಗಿದ್ದ ಸಂವೇದನ ಎನ್ನುವ ಸೇವಾ ಪ್ರಕಲ್ಪ, ನಿತ್ಯ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌, ಕುಷ್ಠರೋಗಿಗಳ ಜೊತೆ ಸಹಪಂಕ್ತಿ ಭೋಜನ ಮಾಡಿ ಅವರು ಮಾತನಾಡಿದರು.

ಜಗತ್ತೇ ಒಂದು ಕುಟುಂಬ, ಇಡೀ ವಿಶ್ವವೇ ಒಂದು‌ ಮನೆ, ಇಡೀ ತ್ರಿಲೋಕವೇ ಒಂದು ದೇಶ ಎಂಬ ಉದಾತ್ತ ಭಾವನೆಯ ಪ್ರತಿರೂಪವೇ ನಮ್ಮ ಭಾರತೀಯ ಸಂಸ್ಕೃತಿ ಎಂದರು.

ಸೇವೆ ಜೀವನದ ಭಾಗವಾಗಬೇಕು, ಸೇವೆ ಎಂದರೆ ಒಂದು ಕರ್ತವ್ಯ, ರೋಗಿ ನಮ್ಮ ಮನೆಯಲ್ಲಿದ್ದರೆ ನಾವು ಆರೈಕೆ ಮಾಡುವುದಿಲ್ಲವೇ? ಹಾಗೆಯೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪ್ರತಿಯೊಬ್ಬರನ್ನೂ ಕುಟುಂಬ ಸದಸ್ಯರೆಂದು ತಿಳಿದು ಆರೈಕೆ ಮಾಡಬೇಕು ಎಂದು ಹೇಳಿದರು.

ಅನಾಥ ಮಕ್ಕಳ ಸೇವೆ ಪ್ರತಿಯೊಬ್ಬರ ಕರ್ತವ್ಯ, ಯಾವ ಅನಾಥ ಮಕ್ಕಳಿಗೂ ತಾವು ಅನಾಥರು ಎಂಬ ಭಾವನೆ ಬರದಂತೆ ಸಮಾಜ ಅವನನ್ನು ಅಕ್ಕರೆಯಿಂದ ಕಾಣಬೇಕು, ಅವರ ಜೀವನ ರೂಪಿಸಬೇಕು ಎಂದರು.

ನಾವೆಲ್ಲರೂ ಒಂದೇ ಎಂಬ ಭಾವನೆ ಹೃದಯದಿಂದ ಬರಬೇಕು, ಹೃದಯದಿಂದ ಸೇವೆ ಮಾಡಬೇಕು,
ಒಬ್ಬರಿಗೊಬ್ಬರು ಸಹಾಯ, ಸಹಕಾರ, ಸಹಯೋಗ ನೀಡುತ್ತಾ ಜೀವನದಲ್ಲಿ ಮುನ್ನಡೆಯಬೇಕು
ಈ ಸೇವಾ ಕಾರ್ಯವನ್ನೇ ಸಂಘವು ತನ್ನ ಧ್ಯೇಯವಾಗಿಸಿಕೊಂಡಿದೆ ಎಂದರು.

ಕೋವಿಡ್ ಕಾಲಘಟ್ಟದಲ್ಲಿ ಅನೇಕ ನೋವುಗಳನ್ನು‌ ನೋಡಿದ್ದೇವೆ. ಅದೇ ಸಮಯದಲ್ಲಿ ಲಕ್ಷಾಂತರ ಜನರ ನಿಸ್ವಾರ್ಥ, ಅರ್ಪಣಾ ಮನೋಭಾವದ ಸೇವೆಯನ್ನೂ ನಾವು ಗಮನಿಸಿದ್ದೇವೆ, ಈ ಸೇವೆ ನಮಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೊನಿಯ ಶಿವಾನಂದ ನೇಕಾರ, ಕುಷ್ಠರೋಗಿಗಳ ಕಾಲೊನಿಯಲ್ಲಿ ಅನ್ನ ನೀಡುವ ಸೇವಾ ಕಾರ್ಯ ಪ್ರಾರಂಭಿಸಿದ್ದಕ್ಕೆ ಸಂತಸ‌ ವ್ಯಕ್ತಪಡಿಸಿದರು.

1980 ದಶಕದಿಂದಲೇ ಈ ಕಾಲೊನಿಯ ಕುಷ್ಠರೋಗಿ ಬಂಧುಗಳ ಸಲುವಾಗಿ ದಿ. ವೆಂಕಟೇಶ ಗುರುನಾಯಕ ಅವರು ನಮಗೆಲ್ಲಾ ಜೀವನ‌ ನೀಡಿದ ಪುಣ್ಯಾತ್ಮರು ಎಂದರು.

ಕ್ಷೇತ್ರೀಯ ಸಂಘ ಚಾಲಕ ವಿ. ನಾಗರಾಜ, ಕ್ಷೇತ್ರಿಯ ಕಾರ್ಯವಾಹ ನಾ. ತಿಪ್ಪೆಸ್ವಾಮಿ, ಪ್ರಾಂತ‌ ಕಾರ್ಯವಾಹ ರಾಘವೇಂದ್ರ ಕಾಗವಾಡ, ಪ್ರಾಂತ ಪ್ರಚಾರಕ ನರೇಂದ್ರ ಲೋಕಹಿತ ಟ್ರಸ್ಟಿನ ಶ್ರೀಧರ ನಾಡಗೀರ, ವಿಭಾಗ ಸಂಘಚಾಲಕ ಚಿದಂಬರ ಕರಮರಕರ, ಜಿಲ್ಲಾ ಸಂಘ ಚಾಲಕ‌ ಡಾ.ಸತೀಶ ಜಿಗಜಿನ್ನಿ, ಸೇವಾ ಭಾರತಿ ಟ್ರಸ್ಟ್‌ ಅಧ್ಯಕ್ಷ ಬಾಬುರಾವ್‌, ಟ್ರಸ್ಟಿ ಚಂದ್ರಶೇಖರ ಗೋಕಾಕ, ರಮೇಶ,‌ ಪ್ರಾಂತ ಸಂಯೋಜಕ ಶಂಕರ ಗುಮಾಸ್ತೆ ಇದ್ದರು.

ಎಲ್ಲರಿಗೂ ಕಷ್ಟ, ಸುಖಃ ಬರುವುದು ಸಾಮಾನ್ಯ, ಕಷ್ಟದಲ್ಲಿರುವವರು ನಮ್ಮ ಕುಟುಂಬ ಸದಸ್ಯರೇ ಎಂದು ತಿಳಿದು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು, ಅಭಯ ನೀಡಬೇಕು

–ದತ್ತಾತ್ರೇಯ ಹೊಸಬಾಳೆ, ಸರ ಕಾರ್ಯವಾಹ

ರಾಷ್ಟ್ರೀಯ ಸ್ವಯಂ ಸೇವಕ ಸಂಘ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು