ವಿಜಯಪುರ: ನಗರದ ಸಮಗ್ರ ಅಭಿವೃದ್ಧಿಗೆ ₹100 ಕೋಟಿ ವಿಶೇಷ ಅನುದಾನ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಬೆಂಗಳೂರಿನಲ್ಲಿ ಶನಿವಾರ ಭೇಟಿಯಾದ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ನೇತೃತ್ವದ ಕಾಂಗ್ರೆಸ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಉಪ ಮೇಯರ್ ದಿನೇಶ್ ಹಳ್ಳಿ ತಿಳಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು ನಗರದಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದರಿಂದ ನೀರಿನ ಸಮಸ್ಯೆ ನಿವಾರಣೆಗಾಗಿ ₹25 ಕೋಟಿಯನ್ನು ತುರ್ತಾಗಿ ನೀಡುವುದಾಗಿಯೂ ಸಚಿವರು ಭರವಸೆ ನೀಡಿದ್ದಾರೆ ಎಂದರು. ಪಾಲಿಕೆ ಕಾಂಗ್ರೆಸ್ ಸದಸ್ಯರನ್ನೊಳಗೊಂಡ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ಭೂತನಾಳ ಕೆರೆಗೆ ತಿಡಗುಂದಿ ಅಕ್ವಾಡೆಕ್ಟ್‌ನಿಂದ ನೀರು ಹರಿಸಲು ಕೆಬಿಜಿಎನ್‌ಎಲ್‌ನಿಂದ ಅನುಮತಿ ಕೊಡಿಸುವಂತೆ ಕೋರಿದರು. ಬಳಿಕ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಸಲ್ಲಿಸಿದರು.
14 ಎಂಎಲ್‌ಡಿ ನೀರಿನ ಕೊರತೆ
ವಿಜಯಪುರ: ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ ಪ್ರತಿನಿತ್ಯ ಪೂರೈಕೆಗೆ 74 ಎಂಎಲ್‌ಡಿ ನೀರಿನ ಅಗತ್ಯವಿದೆ. ಭೂತನಾಳದಿಂದ 10 ಕೃಷ್ಣಾ ನದಿಯಿಂದ(ಕೊಲ್ಹಾರದಿಂದ) 60 ಎಂಎಲ್‌ಡಿ ಪೂರೈಕೆಯಾಗುತ್ತಿತ್ತು. ಆದರೆ ಈಗ ಭೂತನಾಳ ಕೆರೆ ಭರಿದಾಗಿರುವುದರಿಂದ ನೀರಿನ ಕೊರತೆಯಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ‘ಪ್ರಜಾವಾಣಿ’ಗೆ ತಿಳಿಸಿದರು. ಕೊಲ್ಹಾರದಿಂದ ವಿಜಯಪುರಕ್ಕೆ ಈ ಮೊದಲು ನೀರು ಪೂರೈಕೆ ಆಗುತ್ತಿದ್ದ ಪೈಪ್‌ಲೈನ್ 2010ರಿಂದಲೇ ಸ್ಥಗಿತವಾಗಿದ್ದು ಅದನ್ನು ಪುನರಾರಂಭಿಸುವ ಕಾರ್ಯ ನಡೆದಿದೆ. ಜೊತೆಗೆ ತಿಡಗುಂದಿ ಅಕ್ವಾಡೆಕ್ಟ್‌ನಿಂದ ಭೂತನಾಳ ಕೆರೆಗೆ ನೀರು ಹರಿಸಲು ₹7.5 ಕೋಟಿ ಮೊತ್ತದ ಯೋಜನೆಯೊಂದು ಸಿದ್ದಪಡಿಸಲಾಗಿದೆ. ಇದಕ್ಕೆ ಕೆಬಿಜಿಎನ್‌ಎಲ್‌ನ ಒಪ್ಪಿಗೆಗಾಗಿ ಕಾದಿದೆ. ಈ ಎರಡು ಯೋಜನೆಗಳು ಆದರೆ ನೀರು ಪೂರೈಕೆ ವ್ಯವಸ್ಥೆ ಸರಿ ಹೋಗಲಿದೆ ಎಂದರು.