ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬತ್ತಿರುವ ಭೀಮೆ: ನದಿ ತೀರದಲ್ಲಿಯೇ ಬರಗಾಲ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನದಿಗೆ ನೀರು ಹರಿಸಲು ರೈತರ ಆಗ್ರಹ
Published 2 ಏಪ್ರಿಲ್ 2024, 4:32 IST
Last Updated 2 ಏಪ್ರಿಲ್ 2024, 4:32 IST
ಅಕ್ಷರ ಗಾತ್ರ

ಇಂಡಿ: ವಿಜಯಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಭೀಮಾ ನದಿ ತೀರದಲ್ಲಿ ಇಂಡಿ, ಸಿಂದಗಿ ಮತ್ತು ಚಡಚಣ ತಾಲ್ಲೂಕುಗಳ ಸುಮಾರು 38 ಗ್ರಾಮಗಳಿದ್ದು ಇಲ್ಲಿನ ಜನರೆಲ್ಲ ಭೀಮಾ ನದಿ ನೀರನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿವೆ. ಆದರೆ ಈ ಬಾರಿ ಭೀಮಾ ನದಿ ನೀರು ಬತ್ತಿಹೋಗಿರುವುದರಿಂದ ಈ ಭಾಗದ ನದಿ ಪಾತ್ರದ ಜನರು ಕಂಗಾಲಾಗಿದ್ದಾರೆ.

ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಯಲ್ಲಿ ಅಲ್ಪಸ್ವಲ್ಪ ನೀರು ನಿಲ್ಲುತ್ತಿದೆ. ಇದರಿಂದ ಸಿಂದಗಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಮಾತ್ರ ಅನುಕೂಲವಾಗಿದೆ. ಪ್ರಸಕ್ತ ವರ್ಷ ಸೊನ್ನ ಬ್ಯಾರೇಜು ಕೂಡ ಬತ್ತಿ ಹೋಗಿದೆ.  ಸರ್ಕಾರ ಇತ್ತ ಗಮನ ನೀಡಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಪ್ರತಿ 15 ದಿನಗಳಿಗೊಮ್ಮೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳ ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ರೈತರು ಇತ್ತೀಚೆಗೆ ಅಫಜಲಪುರ ಪಟ್ಟಣದಲ್ಲಿ ಉಪವಾಸ ಸತ್ಯಾಗ್ರಹ ಕೂಡ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಈ ಮೂರು ತಾಲ್ಲೂಕುಗಳಲ್ಲದೇ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿಯೂ ಹರಿದಿರುವ ಈ ನದಿ ರಾಜ್ಯದಲ್ಲಿ ಸುಮಾರು 289 ಕಿಲೋಮೀಟರ್ ಉದ್ದ ಹರಿದಿದೆ. ಈ ನದಿಯ ದಂಡೆಗೆ ವಿಜಯಪುರ ಜಿಲ್ಲೆ ಸೇರಿ ಒಟ್ಟು 164 ಗ್ರಾಮಗಳಿದ್ದು, ಲಕ್ಷಾಂತರ ಜನವಸತಿ ಈ ನದಿಯನ್ನೇ ಅವಲಂಬಿಸಿದೆ. ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಳು ಕೈಕೊಟ್ಟಿವೆ. ಇದರಿಂದ ಭೀಮಾ ನದಿ ಸಂಪೂರ್ಣ ಬತ್ತಿಹೋಗಿದೆ.

ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿರುವ ತೊಗರಿ, ಹತ್ತಿ, ಶೇಂಗಾ, ಸಜ್ಜೆ, ಮೆಕ್ಕೆಜೋಳ, ಮೆಣಸಿನಕಾಯಿ, ಕಬ್ಬು ಬೆಳೆಗಳು ಸಂಪೂರ್ಣ ಒಣಗಿಹೋಗಿವೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಭೀಮಾ ನದಿಯ ದಂಡೆಗೆ ಇದ್ದ ಗ್ರಾಮಗಳಿಗೂ ಕೂಡ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ ಸರ್ಕಾರ ಭೀಮಾನದಿಗೆ ಕಾನೂನಾತ್ಮಕವಾಗಿ ಬರಬೇಕಿರುವ ನೀರಿನ ಪಾಲನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಿ ಭೀಮಾ ನದಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕೆಂದು ರೈತರು ಮನವಿ ಮಾಡಿದ್ದಾರೆ.

‘ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ ಮತ್ತು ರೈತ ಹೋರಾಟಗಾರ ಪಂಚಪ್ಪ ಕಲಬುರಗಿ ಮತ್ತು ಅವರ ಸ್ನೇಹಿತರು ಸೇರಿ ಸಾಕಷ್ಟು ಸಲ ಭೀಮಾ ನದಿಯಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಸಿಗಬೇಕಿರುವ ನೀರನ್ನು ಪಡೆದುಕೊಳ್ಳಲು ಹೋರಾಟ ಮಾಡಿದ್ದಾರೆ. ಆದರೂ ಕೂಡ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಗಡಿ ಭಾಗದಲ್ಲಿರುವ ನಮ್ಮ ಗ್ರಾಮಗಳ ರೈತರ ಬಗ್ಗೆ ಸರ್ಕಾರ ಗಮನ ಹರಿಸಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಭೀಮಾ ತೀರದಲ್ಲಿರುವ ಗ್ರಾಮಗಳ ರೈತರು ಒಂದುಗೂಡಿ ತೀವ್ರ  ಹೋರಾಟ ಮಾಡಬೇಕಾಗುತ್ತದೆ’ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇಂಡಿ: ವಿಜಯಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಭೀಮಾ ನದಿ ತೀರದಲ್ಲಿ ಇಂಡಿ ಸಿಂದಗಿ ಮತ್ತು ಚಡಚಣ ತಾಲ್ಲೂಕುಗಳ ಸುಮಾರು 38 ಗ್ರಾಮಗಳಿವೆ. ಇವು ಭೀಮಾ ನದಿಯ ನೀರನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿವೆ. ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನ ಬ್ಯಾರೇಜಿನಿಂದ ಭೀಮಾ ನದಿಯಲ್ಲಿ ಅಲ್ಪಸ್ವಲ್ಪ ನೀರು ನಿಲ್ಲುತ್ತಿದೆ. ಇದರಿಂದ ಸಿಂದಗಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಅನುಕೂಲವಾಗಿರುವುದನ್ನು ಬಿಟ್ಟರೆ ಇನ್ನುಳಿದ ಭೀಮಾ ತೀರದಲ್ಲಿಯ ಗ್ರಾಮಗಳು ನೀರಿಲ್ಲದೇ ಕಂಗಾಲಾಗಿವೆ.

ರಾಜ್ಯಕ್ಕೆ ನೀರು ಹರಿಸದ ಮಹಾರಾಷ್ಟ್ರ

ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸುವ ಜವಾಬ್ದಾರಿ ಬಚಾವತ್ ಆಯೋಗದ ಮೇಲಿದ್ದು 1976 ರಲ್ಲಿ ಆಯೋಗವು ನೀಡಿರುವ ತೀರ್ಪಿನಂತೆ ಒಟ್ಟು ಭೀಮಾ ನದಿಯ 351 ಟಿಎಂಸಿ ಅಡಿ ನೀರಿನಲ್ಲಿ ಮಹಾರಾಷ್ಟ್ರ 300.6 ಕರ್ನಾಟಕ 45.3 ಮತ್ತು ಆಂಧ್ರಪ್ರದೇಶ 5.1 ಟಿ ಎಂ ಸಿ ಅಡಿ ನೀರಿನ ಪಾಲು ಹೊಂದಿವೆ. ಆದರೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಒಂದು ಹನಿ ನೀರು ಕೂಡ ಹರಿಸುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ಕೇಂದ್ರ ಜಲಸಂಪನ್ಮೂಲ ಜಲಮಂಡಳಿಯ ಅನುಮತಿ ಪಡೆಯದೇ ಉಜನಿ ಆಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹಿಸಿ ಅದರ ಹಿನ್ನೀರಿನಲ್ಲಿ ಅಕ್ರಮವಾಗಿ 25 ಕಿಲೋಮೀಟರ್ ಉದ್ದ ಸುರಂಗ ಮಾರ್ಗ ಕೊರೆದು ಸೀನಾ ನದಿಗೆ ಸಂಪರ್ಕ ಕಲ್ಪಿಸಿದೆ. ಅದರಿಂದ 13.5 ಟಿ ಎಂ ಸಿ ಅಡಿ ನೀರು ಅಕ್ರಮವಾಗಿ ಬಳಸುತ್ತಿದೆ. ಉಜನಿ ಆಣೆಕಟ್ಟೆ 117.2 ಟಿ ಎಂ ಸಿ ಅಡಿ ನೀರಿನ ಸಾಮರ್ಥ್ಯವಿದ್ದು  ಅದರಲ್ಲಿ 60.5 ಟಿ ಎಂ ಸಿ ಅಡಿ ನೀರು ಡೆಡ್ ಸ್ಟೋರೇಜ್ನಲ್ಲಿಟ್ಟು ಅದನ್ನೂ ಕೂಡ ಅಕ್ರಮವಾಗಿ ಬಳಸಿಕೊಳ್ಳುತ್ತಿದೆ.  ಇದರಿಂದ ಪ್ರತೀ ಬೇಸಿಗೆಯ ದಿನಗಳಲ್ಲಿ ಕರ್ನಾಟಕದಲ್ಲಿ ಹರಿದಿರುವ ಭೀಮಾ ನದಿ ಬತ್ತಿಹೋಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT