ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರಕ್ರಾಂತಿಗೆ ಒತ್ತು: ಎಂ.ಬಿ.ಪಾಟೀಲ

ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಣೆ
Last Updated 24 ನವೆಂಬರ್ 2020, 12:29 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಜಲಕ್ರಾಂತಿಯ ನಂತರ ಕ್ಷೀರ ಕ್ರಾಂತಿಗೆ ಒತ್ತು ನೀಡಲಾಗುವುದು, ಪ್ರತಿ ಮನೆಯಲ್ಲೂ ದನ-ಕರುಗಳನ್ನು ಸಾಕಿ ಹೆಚ್ಚೆಚ್ಚು ಹಾಲು ಉತ್ಪಾದಿಸಲು ಅಗತ್ಯ ಪ್ರೋತ್ಸಾಹ ನೀಡಲಾಗುವುದು ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿ, ಸರ್ಕಾರಿ ಉರ್ದು ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಹೈನುಗಾರಿಕೆ ದಿನ ಸಂದರ್ಭದಲ್ಲಿ ಈ ಕುರಿತು ನಾನು ಗಂಭೀರವಾಗಿ ಯೋಜಿಸಿದ್ದು, ಈಗ ನೀರು ಹಾಗೂ ಮೇವು ಯತೇಚ್ಛವಾಗಿರುವ ಕಾರಣ, ಪ್ರತಿ ಮನೆಯಲ್ಲೂ ದನ-ಕರು, ಎಮ್ಮೆ, ಆಡುಗಳನ್ನು ಸಾಕುವ ಮೂಲಕ ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು.

ಬಂಥನಾಳ ಶ್ರೀಗಳು, ನನ್ನ ತಂದೆ ಬಿ.ಎಂ.ಪಾಟೀಲರು ಹಾಗೂ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿ ಐದು ವರ್ಷಗಳ ಕಾಲ ಹಗಲು ರಾತ್ರಿ ಕಾರ್ಯ ಮಾಡಿ, ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸಿದ್ದೇನೆ. ಜಿಲ್ಲೆಯ ಬರದ, ಹಿಂದುಳಿದ ಹಣೆಪಟ್ಟೆಯನ್ನು ತೆಗೆದು ಹಾಕಿ, ಸಂಪದ್ಬರಿತ ಜಿಲ್ಲೆಯನ್ನಾಗಿ ಪರಿವರ್ತಿಸಿದ್ದೇನೆ ಎಂದರು.

ನಿಡೋಣಿ ಕೆರೆಗೆ ನೀರು ಹರಿಸಿದ ಈ ದಿನ ನನಗೆ ಅತ್ಯಂತ ಸಂತೋಷದ ದಿನ. ಈ ಕೆರೆ ತುಂಬಿದ ಫಲ ಈ ಗ್ರಾಮ ಸಂಪೂರ್ಣ ನೀರಾವರಿಗೆ ಒಳಪಡುತ್ತದೆ. ಇದರ ಪ್ರಯೋಜನ ಪಡೆದು ನೀವು ಶ್ರೀಮಂತರಾಗಿರಿ ಎಂದು ಹೇಳಿದರು.

ಮುಳವಾಡ ಏತನೀರಾವರಿ ಯೋಜನೆ ಮಲಘಾಣ ಪಶ್ಚಿಮ ಕಾಲುವೆ 0-62 ಕಿ.ಮೀ ವರೆಗೆ ನನ್ನ ಅವಧಿಯಲ್ಲಿಯೇ ವಿತರಣಾ ಶಾಖಾ ಕಾಲುವೆಗಳ ಕಾಮಗಾರಿಗಳ ಆರಂಭಗೊಂಡಿದ್ದವು. ಇದೀಗ 62-118 ಕಿ.ಮೀ. ವರೆಗೆ ಟೆಂಡರ್ ಕರೆಯಲಾಗಿದೆ. ಟೇಲ್‌ ಎಂಡ್‍ ವರೆಗೆ ಎಲ್ಲ ಶಾಖಾ ಕಾಲುವೆಗಳ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.

ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಕೆ.ಎಂ.ಎಫ್ ನಿರ್ದೇಶಕ ಶ್ರೀಶೈಲಗೌಡ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್ ಬಬಲೇಶ್ವರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಕೆಬಿಜೆಎನ್‍ಎಲ್ ಎಸ್.ಇ ಜಗದೀಶ ರಾಠೋಡ, ಎಇಇ ಸುರೇಶ ಪಾಟೀಲ, ಆರ್.ಎಚ್.ದೇಸಾಯಿ, ಎಂ.ಕೆ.ಪರಸನ್ನವರ, ಚಂದ್ರಶೇಖರ ಜಿರಲೆ, ಬಿಇಒ ಎ.ಎಸ್.ಹತ್ತಳ್ಳಿ, ಮುಖಂಡರಾದ ಧರ್ಮಣ್ಣ ಬಿಳೂರ, ಮಲ್ಲು ಪಡಗಾನೂರ, ರಾಚನಗೌಡ ಬಿರಾದಾರ, ಕುಮಾರ ಬಡಿಗೇರ, ಪರಸಪ್ಪ ಶಹಪುರ, ಮಲ್ಲಪ್ಪ ಮಾಳಿ, ರಾಚಪ್ಪ ಮಮದಾಪುರ, ಉಮೇಶಗೌಡ ಬಿರಾದಾರ, ಸೋಮು ಕೊಟ್ಯಾಳ, ವಿ.ಎನ್.ಆಲಗೂರ, ರವಿ ಮಮದಾಪುರ, ಜಾಫರ ಇನಾಮದಾರ ಉಪಸ್ಥಿತರಿದ್ದರು.

ಬಿಜೆಪಿ ಮುಖಂಡರಾದ ಶಂಕರಗೌಡ ಪೊಲೀಸ್‍ಪಾಟೀಲ, ಅಡಿವೆಪ್ಪ ಅಲ್ಲಿಬಾದಿ, ಸಲೀಂ ಕಾಶಿನಕುಂಟಿ, ನಿಜಾಮ ಸೌದಾಗರ, ನೂರ ಜಮಾದಾರ, ದಾವಲ ಇನಾಮದಾರ ಮತ್ತಿತರ ನೂರಾರು ಕಾರ್ಯಕರ್ತರು ಎಂ.ಬಿ.ಪಾಟೀಲ್‍ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT